ADVERTISEMENT

ಯಾದಗಿರಿ | ಕೊರೊನಾ ಮುಕ್ತ ಜಿಲ್ಲೆಗೆ ಪಣ

ಕೊರೊನಾ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ

​ಪ್ರಜಾವಾಣಿ ವಾರ್ತೆ
Published 16 ಮೇ 2020, 17:29 IST
Last Updated 16 ಮೇ 2020, 17:29 IST
ಯಾದಗಿರಿಯಲ್ಲಿ ಕೋವಿಡ್ –19 ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ ಮಾತನಾಡಿದರು. ಸಂಸದ ರಾಜಾ ಅಮರೇಶ್ವರ ನಾಯಕ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಇದ್ದರು
ಯಾದಗಿರಿಯಲ್ಲಿ ಕೋವಿಡ್ –19 ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ ಮಾತನಾಡಿದರು. ಸಂಸದ ರಾಜಾ ಅಮರೇಶ್ವರ ನಾಯಕ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಇದ್ದರು   

ಯಾದಗಿರಿ:ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆಶನಿವಾರ ನಡೆಯಿತು.

‘ಹೊರ ರಾಜ್ಯಗಳಿಂದ ಬಂದವರನ್ನು ರಾಜ್ಯಗಳವಾರು ವಿಂಗಡಣೆ ಮಾಡಿ ಕ್ವಾರಂಟೈನ್ ಮಾಡಬೇಕು. ಇವರೆಲ್ಲರ ಆರೋಗ್ಯ ತಪಾಸಣೆ ಮತ್ತು ಕೋವಿಡ್-19 ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚಿಸಿದರು.

‘ಕೋವಿಡ್-19 ಪರೀಕ್ಷೆಯಲ್ಲಿ ಗರ್ಭಿಣಿಯರು, ಬಾಣಂತಿಯರು, 10 ವರ್ಷಕ್ಕಿಂತ ಕೆಳಗಿನವರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮೊದಲ ಆದ್ಯತೆ ನೀಡಿ ಮತ್ತು ಇವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕ್ವಾರಂಟೈನ್ ಕೇಂದ್ರಗಳಲ್ಲಿನ ಎಲ್ಲರಿಗೂ ಮಾಸ್ಕ್ ವಿತರಣೆ ಮಾಡುವ ಜತೆಗೆ ಅಂತರ ಪಾಲನೆ ಮಾಡುವಂತೆ ತಿಳಿವಳಿಕೆ ನೀಡಲು’ ನಿರ್ದೇಶಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ ಮಾತನಾಡಿ, ‘ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳನ್ನು ಪಾಲನೆ ಮಾಡುವ ಮೂಲಕ ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸುವುದು ಜಿಲ್ಲೆಯ ಪ್ರತಿಯೊಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ. ಇದಕ್ಕಾಗಿ ಪಣ ತೊಡೋಣ’ ಎಂದು ತಿಳಿಸಿದರು.

ಶಾಸಕ ರಾಜೂಗೌಡ ಮಾತನಾಡಿ,ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿರುವುದರಿಂದ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಇವರನ್ನು ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಇರುವ ವಸತಿ ನಿಲಯ, ಶಾಲೆ ಅಥವಾ ಸಾರ್ವಜನಿಕರ ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡಬೇಕು. ಆಹಾರ ಸೇರಿದಂತೆ ಅಗತ್ಯ ಸೌಕರ್ಯ ನೀಡಬೇಕು’ ಎಂದು ಸೂಚಿಸಿದರು.

‌ಸಚಿವಚವ್ಹಾಣಮಾತನಾಡಿ, ‘ಜಿಲ್ಲೆಯ ಎಲ್ಲಾ ಪಿಡಿಒಗಳು ತಮ್ಮ ಕಾರ್ಯ ಸ್ಥಾನದಲ್ಲಿರಬೇಕು ಮತ್ತು ಮೊಬೈಲ್ ಸಂಪರ್ಕಕ್ಕೆ ಸಿಗುವಂತಿರಬೇಕು. ಕೆಎಸ್‍ಆರ್‌ಟಿಸಿ ಬಸ್‍ಗಳಲ್ಲಿ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಮತ್ತು ಸರ್ಕಾರದ ಕಾರ್ಯದರ್ಶಿಗಳ ಜತೆ ಮಾತನಾಡುವುದಾಗಿ’ ತಿಳಿಸಿದರು.

ಸಂಸದರಾಜಾ ಅಮರೇಶ್ವರ ನಾಯಕ ಮಾತನಾಡಿ, ‘ಹೊರ ರಾಜ್ಯಗಳಿಂದ ಬಂದ ಸಾರ್ವಜನಿಕರ ಬಗ್ಗೆ ಕಾಳಜಿ ವಹಿಸಿ, ಆಹಾರ ಮತ್ತು ಮೂಲಸೌಕರ್ಯ ಒದಗಿಸಬೇಕು’ ಎಂದರು.

ಶಾಸಕ ರಾಜೂಗೌಡ ಮಾತನಾಡಿ, ಸಾರಿಗೆ ಸಂಸ್ಥೆಗಳಲ್ಲಿ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ 24 ಗಂಟೆಗಳಲ್ಲಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳದ ಪಿಡಿಒಗಳನ್ನು ತಕ್ಷಣ ಅಮಾನತು ಮಾಡಬೇಕು ಎಂದು ಹೇಳಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಹಳ್ಳಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಮುಖ್ಯಮಂತ್ರಿಗಳು ಘೋಷಣೆ ಮಾಡಿದಂತೆ ವಾಹನ ಚಾಲಕರು, ಕ್ಷೌರಿಕರು ಸೇರಿದಂತೆ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಪಟ್ಟಿಯನ್ನು ಇಟ್ಟುಕೊಂಡಿರಬೇಕು. ಹಣ ಬಿಡುಗಡೆಯಾದ ತಕ್ಷಣ ವರ್ಗಾವಣೆ ಮಾಡಲು ಅನುಕೂಲವಾಗುತ್ತದೆ ಎಂದರು.

ಪಿಪಿಇ ಕಿಟ್, ತಜ್ಞರು ಬೇಕು:ಕೋವಿಡ್-19 ಸಂಬಂಧ 2 ಸಾವಿರ ಪಿಪಿಇ ಕಿಟ್, 5 ಸಾವಿರ ಎನ್-95 ಮಾಸ್ಕ್,3 ವೆಂಟಿಲೇಟರ್, 20 ಸಾವಿರ ಗ್ಲೌಸ್, 50 ಇನ್‍ಫ್ರಾ ರೆಡ್ ಥೆರೊಮೀಟರ್ ಸಾಮಗ್ರಿಗಳ ಅವಶ್ಯಕತೆ ಇದೆ. ಇದಲ್ಲದೇ, 33 ತಜ್ಞ ವೈದ್ಯರು, 63 ವೈದ್ಯರು, 18 ಶುಶ್ರೂಷಕರು, 16 ಲ್ಯಾಬ್ ತಂತ್ರಜ್ಞರು ಹಾಗೂ 20 ಫಾರ್ಮಾಸಿಸ್ಟ್‌ಗಳ ಅವಶ್ಯಕತೆ ಇರುವುದಾಗಿ ಜಿಲ್ಲಾಧಿಕಾರಿ ಸಚಿವರ ಗಮನಕ್ಕೆ ತಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ,ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ,ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ ಇದ್ದರು.

ಮಾದರಿ ಸಂಗ್ರಹ ವಾಹನಕ್ಕೆ ಚಾಲನೆ:ಕೋವಿಡ್-19 ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸುವ ಸಂಚಾರಿ ಮಾದರಿ ಸಂಗ್ರಹ ವಾಹನಕ್ಕೆ ಚಾಲನೆ ನೀಡಲಾಯಿತು. ಆಶಾ ಕಾರ್ಯಕರ್ತೆಯರಿಗೆ ಚವನ್ ಪ್ರಶ್ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.