ADVERTISEMENT

ನ.15ರಂದು ಭಕ್ತ ಕನಕದಾಸ ಜಯಂತ್ಯೋತ್ಸವ

ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 15:34 IST
Last Updated 12 ನವೆಂಬರ್ 2019, 15:34 IST
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕದಾಸರ ಜಯಂತ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಎಸ್‌.ಸೋಮನಾಳ ಮಾತನಾಡಿದರು
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕದಾಸರ ಜಯಂತ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಎಸ್‌.ಸೋಮನಾಳ ಮಾತನಾಡಿದರು   

ಯಾದಗಿರಿ: ‘ಜಿಲ್ಲಾಡಳಿತ ವತಿಯಿಂದ ಭಕ್ತ ಕನಕದಾಸರ ಜಯಂತ್ಯೋತ್ಸವವನ್ನು ನವೆಂಬರ್ 15ರಂದು ಮಧ್ಯಾಹ್ನ 12 ಗಂಟೆಗೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದು ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಭಕ್ತ ಕನಕದಾಸರ ಜಯಂತಿಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಯಂತಿ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂದು ಬೆಳಿಗ್ಗೆ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ಬೆಳಿಗ್ಗೆ 9 ಗಂಟೆಗೆ ನಗರದ ಕನಕದಾಸ ವೃತ್ತದಲ್ಲಿ ಭಕ್ತ ಕನಕದಾಸರ ಮೂರ್ತಿಗೆ ಪೂಜೆ ನೆರವೇರಿಸಿ, ಕನಕದಾಸರ ವೃತ್ತದಿಂದ ವಿದ್ಯಾಮಂಗಲ ಕಾರ್ಯಾಲಯದವರೆಗೆ ಡೊಳ್ಳು ಕುಣಿತ ಹಾಗೂ ಕಲಾತಂಡದೊಂದಿಗೆ ಮೆರವಣಿಗೆ ನಡೆಯಲಿದೆ’ ಎಂದರು.

ADVERTISEMENT

‘ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ ಮತ್ತು ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿಯೂ ಶ್ರದ್ಧಾ, ಭಕ್ತಿಯೊಂದಿಗೆ ಭಕ್ತ ಕನಕದಾಸರ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು. ಅದರಂತೆ ತಾಲ್ಲೂಕು ಕೇಂದ್ರಗಳಲ್ಲಿಯೂ ಸಹ ಅರ್ಥಪೂಣವಾಗಿ ಜಯಂತಿ ಆಚರಣೆ ಮಾಡಬೇಕು’ ಎಂದು ಸೂಚಿಸಿದರು.

‘ನಗರದ ಕನಕದಾಸರ ಮೂರ್ತಿ ಹಾಗೂ ಕನಕ ವೃತ್ತಕ್ಕೆ ಪೇಂಟಿಂಗ್, ಲೈಟಿಂಗ್ ಹಾಗೂ ರಸ್ತೆ ಸ್ವಚ್ಛತೆ ಮಾಡಿಸಲು ನಗರಸಭೆ ಪೌರಾಯುಕ್ತರು ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಲಘು ಉಪಾಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಸೂಚಿಸಿದರು. ಜಯಂತಿ ಕಾರ್ಯಕ್ರಮದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ’ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್ ಸಭೆಯ ನಡಾವಳಿ ಓದಿದರು.

ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ನಗರಸಭೆ ಸದಸ್ಯ ಚನ್ನಕೇಶವಗೌಡ ಬಾಣತಿಹಾಳ, ಡಾ.ಭೀಮಣ್ಣ ಮೇಟಿ, ಮರೆಪ್ಪ ಬಿಳ್ಹಾರ, ಈಶ್ವರಪ್ಪ ದುಗ್ಗಾಣಿ, ಮಲ್ಲಿಕಾರ್ಜುನ ವಡಗೇರಾ, ಸಾಯಬಣ್ಣ ಕೆಂಗೂರಿ, ಶಿವು ಬೆಳಗುಂದಿ, ಯಲ್ಲಾಲಿಂಗ ಪೂಜಾರಿ, ಮಲ್ಲಪ್ಪ ಬಬಲಾದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.