ವಡಗೇರಾ: ವಡಗೇರಾ ಕ್ರಾಸ್‌ನಿಂದ ಅನತಿ ದೂರದಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶತಮಾನದಷ್ಟು ಹಳೆಯದಾದ ಸೇತುವೆ ನಿರ್ವಹಣೆ ಇಲ್ಲದೇ ಹಾಳಾಗಿದ್ದು, ಸೇತುವೆಯಲ್ಲಿ ಬೃಹತ್ ಕಂದಕಗಳು ಬಿದ್ದಿವೆ.
ಹೈದರಾಬಾದಿನ ನಿಜಾಮರ ಕಾಲದಲ್ಲಿ ನಿರ್ಮಿಸಲಾದ ಈ ಸೇತುವೆ ಮೂಲಕ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹೈದರಾಬಾದ್, ಶಹಾಪುರ, ಸುರಪುರ, ವಿಜಯಪುರ, ಬಾಗಲಕೋಟ್, ಸಾಂಗ್ಲಿ, ಮೀರಜ್, ಬೆಂಗಳೂರು ಹಾಗೂ ಇನ್ನಿತರ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಲಾರಿಗಳು, ಟಿಪ್ಪರ್‌ಗಳು ಸೇರಿ ಇತರೆ ನೂರಾರು ವಾಹನಗಳು ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತವೆ.
ಸೇತುವೆಯಲ್ಲಿ ಬೃಹತ್ ಕಂದಕ: ರಸ್ತೆಯಲ್ಲಿ ಡಾಂಬರ್ ಕಿತ್ತು ಹೋಗಿ ಜಲ್ಲಿಕಲ್ಲುಗಳು ಮೇಲೆದ್ದಿವೆ. ಇದರಿಂದಾಗಿ ಸೇತುವೆಯ ಮೇಲೆ ಎದುರು–ಬದುರು ವಾಹನಗಳು ಬಂದಾಗ ಒಂದು ವಾಹನ ಗುಂಡಿಗೆ ಇಳಿಯಲೇಬೇಕು. ಇದರಿಂದಾಗಿ ಸೇತುವೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ ಎಂದು ಚಾಲಕರು ಹೇಳುತ್ತಾರೆ.
ಸೇತುವೆಯಲ್ಲಿ ಮುಚ್ಚಿದ ರಂಧ್ರ : ಸೇತುವೆಯ ಮೇಲೆ ಬಿದ್ದ ಮಳೆಯ ನೀರು ಹರಿದು ಹೋಗಲು ಎರಡು ಬದಿಗಳಲ್ಲಿ ಅಲ್ಲಲ್ಲಿ ಇರುವ ರಂಧ್ರಗಳು ಸಂಪೂರ್ಣವಾಗಿ ಮುಚ್ಚಿ ಹೋಗಿವೆ ಇದರಿಂದಾಗಿ ಸೇತುವೆಯ ರಸ್ತೆಯ ಮೇಲೆ ಮಳೆಯ ನೀರು ಸಂಗ್ರಹವಾಗಿ ರಸ್ತೆಯ ಮೇಲೆ ಕಂದಕಗಳು ನಿರ್ಮಾಣವಾಗಿವೆ.
ಸೇತುವೆ ತಡೆಗೋಡೆಗಳ ಮೇಲೆ ಗಿಡಗಳು: ಸೇತುವೆಯ ತಡೆಗೋಡೆಗಳಲ್ಲಿ ಆಲದ ಗಿಡಗಳು ಹಾಗೂ ಇನ್ನಿತರ ಗಿಡಗಳು ಬೆಳೆದಿವೆ. ಗಿಡಗಳ ಬೇರುಗಳು ಮಳೆಯ ನೀರನ್ನು ಹೀರಿಕೊಳ್ಳುವುದರಿಂದ ತಡೆಗೋಡೆಗಳಲ್ಲಿ ತೇವಾಂಶ ಕಂಡು ಬಂದು ಅಲ್ಲಲ್ಲಿ ಶಿಥಲಗೊಂಡಿವೆ. ಗಿಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ ಎಂಬುದು ಪಾದಚಾರಿಗಳ ಆರೋಪ.
ಲೋಕೋಪಯೊಗಿ ಇಲಾಖೆ ವತಿಯಿಂದ ಸೇತುವೆಯಲ್ಲಿನ ರಸ್ತೆ ದುರಸ್ತಿ ಹಾಗೂ ತಡೆಗೋಡೆಗಳಲ್ಲಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಲು ಕಾಮಗಾರಿಯನ್ನು ಕೈಗೊಳ್ಳಲು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸರ್ಕಾರದ ಹಣ ಖರ್ಚಾಗುತ್ತದೆ. ಆದರೆ ಸಮಸ್ಯೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇತುವೆಯ ರಕ್ಷಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಎಚ್ಎಸ್‌ಡಿಪಿ ಯೋಜನೆಯ ₹ 10 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಟೆಂಡರ್ ಈಗಾಗಲೇ ಕರೆಯಲಾಗಿದೆ. ಶೀಘ್ರದಲ್ಲಿಯೇ ವಡಗೇರಾ ಕ್ರಾಸ್‌ದಿಂದ ರೈಲ್ವೆ ಸೇತುವೆಯವರೆಗೆ ರಸ್ತೆ ಕಾಮಗಾರಿ ಆರಂಭಿಸಲಾಗುವುದು
–ಸುನಿಲ್ ಕಿರಿಯ ಎಂಜಿನಿಯರ್ ಲೋಕೋಪಯೊಗಿ ಇಲಾಖೆ ವಡಗೇರಾ
ಪ್ರತಿ ವರ್ಷ ಸೇತುವೆ ಹಾಗೂ ತಡೆಗೋಡೆಗಳ ನಿರ್ವಹಣೆಗಾಗಿ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬರುತ್ತದೆ. ಆದರೆ ಹಣ ಖರ್ಚಾಗುತ್ತದೆ. ಸಮಸ್ಯೆಗೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ
–ಸಂತೋಷಶೆಟ್ಟಿ ವಾಹನ ಸವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.