ಯಾದಗಿರಿ: ಮಹಾರಾಷ್ಟ್ರದಲ್ಲಿ ಯಥೇಚ್ಛ ಮಳೆ ಆಗುತ್ತಿರುವುದರಿಂದ ಉಜನಿ ಡ್ಯಾಮ್‌ನಿಂದ ಹರಿದು ಬರುತ್ತಿರುವ ನೀರಿನಿಂದಾಗಿ ಭೀಮಾ ನದಿ ಎರಡೂ ದಡ ಸೋಸಿ ತುಂಬಿ ಹರಿಯುತ್ತಿದೆ.
ಭೀಮಾ ನದಿಗೆ ಉಜಿನಿ ಜಲಾಶಯದಿಂದ 2.54 ಲಕ್ಷ ಕ್ಯುಸೆಕ್ ನೀರು ಹರಿ ಬಿಡಲಾಗುತ್ತಿದೆ. ಇದರಿಂದ ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದಲೂ 3.50 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗಿದೆ. ನಗರ ಸಮೀಪ ಬ್ರಿಡ್ಜ್ ಕಂ ಬ್ಯಾರೇಜ್‌ನ ಗೇಟ್‌ಗಳಿಂದ ನದಿ ನೀರು ರಭಸವಾಗಿ ಹರಿಯುತ್ತಿದೆ.
ನದಿಯಲ್ಲಿ ಅಲ್ಲಲ್ಲಿ ನಿರ್ಮಿಸಲಾದ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಕ್ರೆಸ್ಟ್‌ಗೇಟ್‌ಗಳನ್ನು ಮೇಲಕ್ಕೆ ಎತ್ತಿ ನೀರು ಹರಿಸಲಾಗುತ್ತಿದೆ. ಇದರಿಂದ ನದಿ ಪಾತ್ರದ ಎರಡೂ ಕಡೆಯ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿದೆ. ಹಳ್ಳಗಳಿಗೂ ಪ್ರವಾಹದ ನೀರು ವ್ಯಾಪಿಸಿಕೊಂಡು ಭತ್ತ, ಹತ್ತಿ, ತೊಗರಿಯಂತಹ ಬೆಳೆಗಳ ಜಮೀನುಗಳಲ್ಲಿ ನದಿ ನೀರು ನಿಂತಿದೆ.
‘3.50 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಸುತ್ತಿರುವುದರಿಂದ ಹೆಡಗಿಮದ್ರಾ, ತಳಕ, ಮುಷ್ಟುರು, ಮಲ್ಹಾರ್, ಆನೂರು, ಗೌಡೂರು, ಹನೂರು (ಕೆ), ಭೀಮನಳ್ಳಿ ಸೇರಿದಂತೆ ನದಿ ಪಾತ್ರದ ಗ್ರಾಮಗಳ ಜಮೀನುಗಳಲ್ಲಿ ನೀರು ನುಗ್ಗಿದೆ’ ಎಂದು ಯಾದಗಿರಿ ತಹಶೀಲ್ದಾರ್ ಸುರೇಶ ಅಂಕಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಭೇಟಿ: ನದಿ ದಡದಲ್ಲಿರುವ ಕಂಗಳೇಶ್ವರ ದೇವಸ್ಥಾನ, ಸ್ಮಶಾನ, ಜಾಕ್‌ವಾಲ್ ಸಂಪೂರ್ಣವಾಗಿ ಮಳುಗಡೆಯಾಗಿದ್ದು, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ಪೌರಾಯುಕ್ತ ಉಮೇಶ ಚವ್ಹಾಣ್ ಭೇಟಿ ನೀಡಿ ಪರಿಶೀಲಿಸಿದರು.
‘ಮಹಾರಾಷ್ಟ್ರದ ಮಳೆಯಿಂದಾಗಿ ಭೀಮಾ ನದಿ ತುಂಬಿ ಹರಿಯುತ್ತಿದೆ. ಹಳ್ಳಗಳಿಗೂ ಪ್ರವಾಹದ ನೀರು ನುಗ್ಗಿದೆ. ಹೀಗಾಗಿ, ಸಾರ್ವಜನಿಕರು ನದಿ ಮತ್ತು ಹಳ್ಳಗಳಿಗೆ ಇಳಿಯಬಾರದು. ಜಾಕ್‌ವಾಲ್ ಮುಳುಗಿದ್ದರಿಂದ ಮೋಟರ್ ಬಂದ್ ಮಾಡಲಾಗಿದೆ. ನಗರಸಭೆ ಪೂರೈಸುವ ನೀರುನ್ನು ಕಾಯಿಸಿ, ಆರಿಸಿ ಬಳಸಬೇಕು’ ಎಂದು ಲಲಿತಾ ಅನಪುರ ಮನವಿ ಮಾಡಿದರು.
ಪರಿಹಾರ ಕಲ್ಪಿಸಲು ಶಾಸಕರು ಸೂಚನ
ಯಾದಗಿರಿ: ‘ನಮ್ಮ ಸರ್ಕಾರ ಸದಾ ರೈತರ ಕಾಳಜಿವಹಿಸಿದ್ದು ಆದಷ್ಟು ಬೇಗ ರೈತರಿಗೆ ಸೂಕ್ತ ಹೆಚ್ಚಿನ ಪರಿಹಾರ ಕಲ್ಪಿಸಲಾಗುವುದು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ವಡಗೇರಾ ತಾಲ್ಲೂಕಿನ ಜೋಳದಡಗಿ ಶಿವನೂರು ಗ್ರಾಮದ ಮಳೆ ನದಿ ನೀರಿನಿಂದ ಬೆಳೆ ಹಾನಿ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು.
‘ನೀರಿನಿಂದ ನನ್ನ 4 ಎಕರೆ ಭತ್ತದ ಬೆಳೆ ಹಳಾಗಿದೆ. ಪ್ರತಿ ವರ್ಷ ಇದೆ ಪರಿಸ್ಥಿತಿ ಮರುಕಳಿಸುತ್ತಿದೆ’ ಎಂದು ರೈತ ದೇವಿಂದ್ರಪ್ಪ ಪೂಜಾರಿ ಅಲವತ್ತುಕೊಂಡರು.
‘ಬೆಳೆದು ನಿಂತಿದ್ದ ಭತ್ತ ಹತ್ತಿ ಬೆಳೆ ನದಿ ನೀರು ಪಾಲಾಗಿದೆ. ಕಳೆದ ವರ್ಷ ಬೆಳೆ ಪರಿಹಾರ ಕಡಿಮೆ ಬಂದಿತ್ತು. ಈ ಬಾರಿ ಹೆಚ್ಚಿನ ಹಣ ನೀಡಬೇಕು’ ಎಂದು ರೈತ ಹಂಪಯ್ಯ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ‘ಭೀಮಾನದಿಗೆ 3.50 ಲಕ್ಷ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಯಾದಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 22ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಬೆಳೆಗೆ ಹಾನಿಯಾಗಿದೆ. ಸಮೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ಆತಂಕ ಪಡಬಾರದು. ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲಾಗುವುದು’ ಎಂದರು.
ವಡಗೇರಾ ತಹಶೀಲ್ದಾರ್ ಮಂಗಳಾ ತಾ.ಪಂ. ಇಒ ಮಲ್ಲಿಕಾರ್ಜುನ ಸಂಗ್ವಾರ ಡಿವೈಎಸ್ಪಿ ಸುರೇಶ್ ಪಶುಸಂಗೋಪನೆ ಇಲಾಖೆ ಡಿಡಿ ರಾಜು ದೇಶಮುಖ ಪ್ರಮುಖರಾದ ವೆಂಕಟರೆಡ್ಡಿ ಪಾಟೀಲ ಶಂಕರಗೌಡ ಪಾಟೀಲ ಬಾಪುಗೌಡ ಮಾಚನೂರು ಸಿದ್ದಪ್ಪಗೌಡ ಸೋಮಯ್ಯ ಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.