ಯಾದಗಿರಿ: ಮಹಾರಾಷ್ಟ್ರದ ಭೀಮಾ ಕಣಿವೆಯ ಜಲಾಶಯಗಳಿಂದ ನೀರು ಬಿಡುಗಡೆ ಪ್ರಮಾಣವು ಕೊಂಚ ತಗ್ಗಿದ್ದು, ಭೀಮಾ ನದಿ ಪಾತ್ರದಲ್ಲಿನ ಪ್ರವಾಹ ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದೆ. ಆದರೆ, ಪ್ರವಾಹ ತಂದೊಡ್ಡಿದ ಆತಂಕವು ಜನರಿಂದ ಇನ್ನೂ ದೂರಾಗಿಲ್ಲ.
ಜಿಲ್ಲೆ, ನೆರೆಯ ಕಲಬುರಗಿ, ಮಹಾರಾಷ್ಟ್ರದ ಭೀಮಾ ಕಣಿವೆ ಪ್ರದೇಶದಲ್ಲಿನ ಭಾರಿ ಮಳೆಯ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಭೀಮಾ ನದಿಯ ಒಳಹರಿವು ಹೆಚ್ಚಳವಾಗಿತ್ತು. ಸನ್ನತಿ ಮತ್ತು ಯಾದಗಿರಿ ಬ್ಯಾರೇಜ್‌ಗಳಲ್ಲಿ ಸೆಪ್ಟೆಂಬರ್ 23ರಂದು 3.50 ಲಕ್ಷ ಕ್ಯಸೆಕ್ ಇದ್ದ ಒಳ–ಹೊರ ಹರಿವಿನ ಪ್ರಮಾಣವು ಸೆ.28ಕ್ಕೆ 5.10 ಲಕ್ಷ ಕ್ಯುಸೆಕ್‌ಗೆ ತಲುಪಿತ್ತು. ಈಗ ನದಿಯಲ್ಲಿ 4.75 ಲಕ್ಷ ಕ್ಯುಸೆಕ್ ಹೊರ ಹರಿವಿದ್ದು, ನಿಧಾನಕ್ಕೆ ಇಳಿಕೆಯಾಗುತ್ತಿದೆ.
‘ಮಹಾ’ ಪ್ರವಾಹಕ್ಕೆ ಭೀಮಾ ನದಿಯು ಎರಡು ದಡಗಳು ಸೋಸಿ ಹರಿಯಿತು. ಶಹಾಪುರ, ಯಾದಗಿರಿ ಹಾಗೂ ವಡಗೇರಾ ತಾಲ್ಲೂಕುಗಳ 7 ಗ್ರಾಮಗಳು ಪ್ರವಾಹದಲ್ಲಿ ಮುಳುಗಡೆಯಾದವು. ಪ್ರವಾಹದ ಹಿನ್ನೀರು ಹಳ್ಳಗಳು ಮೂಲಕ ಯಾದಗಿರಿ ನಗರ ಸೇರಿದಂತೆ ಹಲವು ಹಳ್ಳಿಗಳ ಜನವಸತಿ ಪ್ರದೇಶಕ್ಕೆ ನುಗ್ಗಿತ್ತು. ಪ್ರವಾಹದ ನೀರು ಇಳಿಮುಖ ಆಗುತ್ತಿದ್ದರೂ ಜನರಲ್ಲಿ ಹಾನಿ ಹಾಗೂ ಸಾಂಕ್ರಾಮಿಕ ರೋಗ ಭೀತಿ ಆವರಿಸಿಕೊಂಡಿದೆ.
ರೋಜಾ ಎಸ್, ಶಿವನೂರ, ಜೋಳದಡಗಿ, ಕುಮನೂರ– ಅರ್ಜುಣಗಿ, ಠಾಣಗುಂದಿ– ಹೆಡಗಿಮದ್ರಾ, ಆನೂರ (ಬಿ)– ಆನೂರ (ಕೆ), ಲಿಂಗೇರಿ, ಕೌಳೂರ್, ಮಲ್ಹಾರ್, ಕೋಟಗೇರಾ, ಕೆ. ಹೊಸಳ್ಳಿ, ಬಿಳ್ಹಾರ, ಬಬಲಾದ ಗ್ರಾಮಗಳ ಸಂಪರ್ಕ ಇನ್ನೂ ಕಡಿತವಾಗಿದೆ. ನದಿ ಪಾತ್ರದ 35 ಗ್ರಾಮಗಳ ಜನ– ಜಾನುವಾರುಗಳ ಸುರಕ್ಷತೆಗೆ ಮುಂಜಾಗ್ರತವಾಗಿ ಈಗಲೂ ನಿಗ ಇರಿಸಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 419 ಮನೆಗಳಿಗೆ ಹಾನಿಯಾಗಿದೆ. 150 ಜಾನುವಾರುಗಳು ಮೃತಪಟ್ಟಿವೆ. ಗೋಡೆ ಬಿದ್ದು 22 ಕುರಿಗಳು ಮರಣಹೊಂದಿವೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳಿಗೆ ಹಾನಿಯಾಗಿದೆ. ಬೆಳೆಹಾನಿಯ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಆಗಾಗ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹ ಅಡ್ಡಿಪಡಿಸಿದೆ.
ರಾತ್ರೋರಾತ್ರಿ ಜನರ ಸ್ಥಳಾಂತರ
ನಗರದ ವೀರಭದ್ರೇಶ್ವರ ವಿಶ್ವಾರಾಧ್ಯ ನಗರ ಗ್ರೀನ್ ಸೀಟಿ ಪಾಟೀಲ ನಗರ ಲಕ್ಷ್ಮಿ ನಗರ ಸೇರಿ ಹಲವೆಡೆ ನದಿ ನೀರು ನುಗ್ಗಿತ್ತು. ನೀರಿನಲ್ಲಿ ಸಿಲುಕ್ಕಿದ್ದ ವಿಶ್ವಾರಾಧ್ಯ ನಗರದ 20ಕ್ಕೂ ಹೆಚ್ಚು ಜನರನ್ನು ನಗರಸಭೆ ಅಗ್ನಿಶಾಮಕ ಎಸ್‌ಡಿಆರ್‌ಎಫ್ ತಂಡಗಳು ರಾತ್ರೋರಾತ್ರಿ ಸ್ಥಳಾಂತರ ಮಾಡಿದರು. ಮತ್ತೆ ಕೆಲವರನ್ನು ಸೋಮವಾರ ಬೆಳಿಗ್ಗೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರ ಪೈಕಿ ಕೆಲವರು ಲಾಡ್ಜ್‌ಗಳಲ್ಲಿ ಉಳಿದುಕೊಂಡರೆ ಮತ್ತೆ ಕೆಲವರು ತಮ್ಮ ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದರು. ಕುಷ್ಟರೋಗಿಗಳ ಕಾಲೊನಿಯಲ್ಲಿ 15 ಮಂದಿ ನೀರಿನಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಸ್ಥಳಾಂತರ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನೀರು ನುಗ್ಗಿದ ಪ‍್ರದೇಶಗಳಿಗೆ ನಗರಸಭೆ ಅಧ್ಯಕ್ಷೆ ಲಲಿತಾ ಅನಾಪುರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಈ ಹಿಂದಿನ ಪ್ರವಾಹದ ನೀರು ರೈಲ್ವೆ ಹಳಿವರೆಗೂ ಬಂದಿತ್ತು. ಈ ಬಾರಿ ಚಿತ್ತಾಪುರ ರಸ್ತೆ ದಾಟಿ ನಗರಕ್ಕೂ ವ್ಯಾಪಿಸಿಕೊಂಡಿದೆ. ಬೋಟ್‌ಗಳನ್ನು ಬಳಸಿಕೊಂಡು ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ’ ಎಂದರು. ‘ಪ್ರವಾಹದಿಂದ ಜಾಕ್‌ವಾಲ್ ಮುಳುಗಿದ್ದು ನೀರು ಪೂರೈಕೆ ಸ್ಥಗಿತವಾಗಿದೆ. ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾ ಆರೋಗ್ಯ ಅಧಿಕಾರಿಯೊಂದಿಗೆ ಚರ್ಚಿಸಿ ನೀರು ನಿಂತ ಪ್ರದೇಶದಲ್ಲಿ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಲಾಗುವುದು. ಸ್ವಚ್ಛತೆಗೂ ಆದ್ಯತೆ ಕೊಡಲಾಗುವುದು’ ಎಂದು ಹೇಳಿದರು. ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರಾದ ಲಕ್ಷ್ಮಿಕಾಂತರೆಡ್ಡಿ ಎಸ್‌ಡಿಆರ್‌ಎಫ್‌ನ ರೂಪೇಶ ಪೌರಾಯುಕ್ತ ಉಮೇಶ ಚವ್ಹಾಣ್ ಪಿಎಸ್‌ಐ ಮಂಜೇಗೌಡ ಮುಖಂಡರಾದ ರಾಚನಗೌಡ ಮುದ್ನಾಳ ಹಣಮಂತ ಇಟಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.