
ಹುಣಸಗಿ: ‘ಪ್ರತಿಭೆ ಹಾಗೂ ಕಲೆ ಯಾರ ಸ್ವತ್ತೂ ಅಲ್ಲ. ಅದು ಸಾಧನೆಗೆ ಮಾತ್ರ ಸಾಧ್ಯ. ಮಲ್ಲಮ್ಮ ಅದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ’ ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಹೇಳಿದರು.
ಹುಣಸಗಿ ತಾಲ್ಲೂಕಿನ ಕನ್ನೇಳ್ಳಿ ಗ್ರಾಮಕ್ಕೆ ಬಿಗ್‌ಬಾಸ್‌ನಲ್ಲಿ ಪಾಲ್ಗೊಂಡು ಆಗಮಿಸಿದ್ದ ಮಲ್ಲಮ್ಮ ಅವರಿಗೆ ತವರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಗ್ರಾಮೀಣ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಮಲ್ಲಮ್ಮ ಬಾವಿ ಅವರು ಗ್ರಾಮೀಣ ಭಾಗದ ಒಬ್ಬ ಅನಕ್ಷರಸ್ಥ ಮಹಿಳೆಯಾಗಿದ್ದರೂ ಅವರಲ್ಲಿರುವ ಪ್ರತಿಭೆಯಿಂದ ಉತ್ತಮವಾಗಿ ಪ್ರದರ್ಶನ ನೀಡಿ ರಾಜ್ಯದ ಜನತೆಯ ಗಮನ ಸೆಳೆದಿದ್ದಾರೆ’ ಎಂದರು.
ಸನ್ಮಾನ ಸ್ವೀಕರಿಸಿದ ಮಲ್ಲಮ್ಮ ಬಾವಿ ಮಾತನಾಡಿ, ‘ನಿರ್ದಿಷ್ಟ ಗುರಿ, ಉದ್ದೇಶ, ಪ್ರಾಮಾಣಿಕತೆ, ನಿಯತ್ತು ಇದ್ದರೆ ನಾವು ಯಾವುದೇ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಹುದು. ನಮ್ಮೂರಿನವರು ನನಗೆ ಸನ್ಮಾನಿಸುತ್ತಿರುವುದು ನನ್ನ ಬದುಕಿನಲ್ಲಿ ಎಂದೂ ಮರೆಯಲಾಗದ ಕ್ಷಣ’ ಎಂದು ಭಾವುಕರಾಗಿ ನುಡಿದರು.
ಆರಂಭದಲ್ಲಿ ನಟ ಮನೋಜ್ ಕುಮಾರ್, ಪಲ್ಲವಿ ಲಕ್ಷ್ಮೀಕಾಂತಗೌಡ ಜೊತೆಗೆ ಮಲ್ಲಮ್ಮ ಅವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡ ಹಾಗೂ ವಾದ್ಯ ಮೇಳದೊಂದಿಗೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಲಾಯಿತು.
ಕಲಾವಿದರಾದ ವೀರೇಶ ಗವಾಯಿ ಹಾಗೂ ಮಹಾಂತೇಶ ಹೆಗ್ಗಣದೊಡ್ಡಿ, ಬಾಗೇಶ ಸಿಂದಗಿ, ದಾಸಪ್ಪ ದೊರನಳ್ಳಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ದೇವದುರ್ಗದ ಮಲದಕಲ್ ಬಸವರಾಜ ಸ್ವಾಮೀಜಿ, ನಗನೂರದ ಸೂಗುರೇಶ್ವರ ಸ್ವಾಮೀಜಿ, ಬಂಡೆಪ್ಪನಳ್ಳಿ ಶರಣರು ಸೇರಿದಂತೆ ಇತರರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕನ್ನೆಳ್ಳಿ ಗ್ರಾಮದ ಮಲ್ಲಯ್ಯ ಸ್ವಾಮಿ ಹಿರೇಮಠ, ಪಂಚಯ್ಯ ಮಠಪತಿ, ಗೋವಿಂದರಾಜ ದೇವರು, ದೊಡ್ಡಪ್ಪಗೌಡ ಪೊಲೀಸ್ ಪಾಟೀಲ್, ಬಾಪುಗೌಡ ಮಾಲಿಪಾಟೀಲ್, ಹನುಮಂತರಾಯ ಮಾಸ್ಟರ್ ಹೆಬ್ಬಾಳ್ಕರ್, ಪಿಎಸ್‌ಐ ಸಿದ್ದಣ್ಣ ಯಡ್ರಾಮಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿದರು. ಮಲ್ಲು ಚಾನಕೋಟಿ ಸ್ವಾಗತಿಸಿದರು. ಮಂಜುನಾಥ ಟೇಲರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.