ADVERTISEMENT

ಯಾದಗಿರಿ| ಬಿಹಾರದಲ್ಲಿ ಗೆಲುವು: ಬಿಜೆಪಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:47 IST
Last Updated 15 ನವೆಂಬರ್ 2025, 6:47 IST
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ಯದಗಿರಿಯಲ್ಲಿ ಶುಕ್ರವಾರ ಬಿಜೆಪಿ ಮುಖಂಡರು ಸಂಭ್ರಮಿಸಿದರು
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ಯದಗಿರಿಯಲ್ಲಿ ಶುಕ್ರವಾರ ಬಿಜೆಪಿ ಮುಖಂಡರು ಸಂಭ್ರಮಿಸಿದರು   

ಯಾದಗಿರಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ‌ ವತಿಯಿಂದ ನಗರದಲ್ಲಿ ಶುಕ್ರವಾರ ಸಂಭ್ರಮ ಆಚರಿಸಲಾಯಿತು.

ನಗರದ ನೇತಾಜಿ ಸುಭಾಷ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಪಕ್ಷದ ಪರ ಘೋಷಣೆಗಳನ್ನು ಕೂಗಿದರು.‌ ಪಕ್ಷದ ಹಿರಿಯ ಮುಖಂಡರ ಹೆಸರುಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ‘ಬಿಹಾರದ ಜನತೆ ನೀಡಿರುವ ಈ ಫಲಿತಾಂಶ ಅಭಿವೃದ್ಧಿಯ ಪರವಿದೆ. ವಿನಾಕಾರಣ ಟೀಕೆ ಮಾಡಿ, ಸುಳ್ಳು ಆರೋಪಗಳನ್ನು ಹೊರಿಸುವ ಕಾಂಗ್ರೆಸ್ ಸೇರಿದಂತೆ ಅದರ ಮಿತ್ರ ಪಕ್ಷಗಳು ಇನ್ನಾದರೂ ಇದರಿಂದ ಪಾಠ ಕಲಿಯಬೇಕು’ ಎಂದರು. 

ADVERTISEMENT

ಬಿಹಾರದ ಜನತೆ ಮೆಚ್ಚಿಗೆ: ‘ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಶೇ 48ರಷ್ಟು ಮತಗಳನ್ನು ಪಡೆದಿದ್ದಾರೆ. ಬಹುಮತಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ನಿತೀಶಕುಮಾರ್ ಅವರ ಡಬಲ್ ಎಂಜಿನ್ ಸರ್ಕಾರಕ್ಕೆ ಬಿಹಾರದ ಜನತೆ ಮೆಚ್ಚಿಕೊಂಡು ಮತ ನೀಡಿದ್ದಾರೆ’ ಎಂದು ಪ್ರಕಟಣೆಯಲ್ಲಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಹೇಳಿದ್ದಾರೆ. 

‘ಜಂಗಲ್ ರಾಜ್‌ ಆಗಿದ್ದ ಬಿಹಾರ ಮೋದಿ ಮತ್ತು ನಿತೀಶ್ ಕುಮಾರ್ ಅವರ ಆಡಳಿತದಿಂದ ಅದರಿಂದ ಹೊರಬಂದು ಅಭಿವೃದ್ಧಿಯತ್ತ ಸಾಗುತ್ತಿದೆ. ವೋಟ್ ಚೋರಿ ನಾಟಕ ಕಂಪನಿ ಕಟ್ಟಿಕೊಂಡು ಸಂವಿಧಾನದ ಅಂಗ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಅಪಪ್ರಚಾರಗೊಳಿಸಿ, ಅಸ್ಥಿರಗೊಳಿಸಲು ಯತ್ನಿಸಿದ್ದ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾಧವ್ ಅವರ ತಂಡಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ’ ಎಂದಿದ್ದಾರೆ.

ಆಧಾರ ರಹಿತ ಆರೋಪ: ‘ವೋಟ್ ಚೋರಿ ಎಂಬ ಆಧಾರ ರಹಿತ ಆರೋಪ ಸೃಷ್ಟಿಸಿ ದೇಶದ ಜನತೆಯಲ್ಲಿ ಗೊಂದಲ ಸೃಷ್ಟಿಸಿದ್ದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಮತದಾರರು ತಕ್ಕ ‍ಪಾಠ ಕಲಿಸಿದ್ದಾರೆ’ ಎಂದು  ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್.ಸಾಹುಕಾರ ಪ್ರಕಟಣೆಯಲ್ಲಿ ಹೇಳಿದ್ದಾರೆ. 

ಸಂಭ್ರಮಾಚರಣೆಯಲ್ಲಿ ಮುಖಂಡರಾದ ಮಹೇಶರೆಡ್ಡಿ ಮುದ್ನಾಳ, ನಾಗರತ್ನ ಕುಪ್ಪಿ, ಖಂಡಪ್ಪ ದಾಸನ, ಪರುಶುರಾಮ ಕುರಕುಂದಿ, ವೆಂಕಟರೆಡ್ಡಿ ಅಬ್ಬೆ ತುಮಕೂರು, ಶ್ರೀಧರ ಆರ್.ಸಾಹುಕಾರ, ಸುರೇಶ್ ಅಂಬಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೋದಿ ಆಡಳಿತಕ್ಕೆ ಹಿಡಿದ ಕೈಗನ್ನಡಿ

ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎಗೆ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಹೇಳಿದ್ದಾರೆ. ದೇಶದಾದ್ಯಂತ ಬಿಜೆಪಿ ಪರವಾದ ಅಲೆ ಎದ್ದಿದೆ ಎಂಬುದನ್ನು ಈ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ. ವಿರೋಧ ಪಕ್ಷಗಳ ವೋಟ್ ಚೋರಿ ಆರೋಪವನ್ನು ಮತದಾರರು ತಳ್ಳಿ ಹಾಕಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.