ಯಾದಗಿರಿ: ನಗರದ ಮಾತಾ ಮಾಣಿಕೇಶ್ವರಿ ನಗರದಲ್ಲಿ ಮಂಗಳವಾರ ವಿದ್ಯುತ್ ಪ್ರವಹಿಸುತ್ತಿದ್ದ ಹೈಟೆನ್ಷನ್ ತಂತಿ ಮೈಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದ ನಿವಾಸಿ ಖಾಜಾ ಪಟೇಲ್ (20) ಮೃತರು.
‘ನಗರದ ಮಾತಾ ಮಾಣಿಕೇಶ್ವರಿ ನಗರದಲ್ಲಿದ್ದ ಸಹೋದರಿ ಮನೆಗೆ ಖಾಜಾ ಪಟೇಲ್ ಹೋಗುವಾಗ ಏಕಾಏಕಿ ಹೈಟೆನ್ಷನ್ ತಂತಿ ತುಂಡಾಗಿ ಮೈಮೇಲೆ ಬಿದ್ದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜೆಸ್ಕಾಂ ನಿರ್ಲಕ್ಷ್ಯದಿಂದಲೇ ಯುವಕ ಮೃತಪಟ್ಟಿದ್ದಾನೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹೈಟೆನ್ಷನ್ ತಂತಿಯಲ್ಲಿ 11 ಕೆವಿ ವಿದ್ಯುತ್ ಪ್ರವಹಿಸುತ್ತಿತ್ತು. ತಂತಿ ಬಿದ್ದು ಯುವಕ ಮೃತಪಟ್ಟಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ತಿಳಿಸಿದ್ದಾರೆ.
‘ಯುವಕ ಹೆಲ್ಮೆಟ್ ಧರಿಸಿದ್ದ. ತುಂಡರಿಸಿ ಬಿದ್ದ ತಂತಿ ಕಾಣದ ಕಾರಣ ಅವಘಡ ಸಂಭವಿಸಿದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.