ADVERTISEMENT

ಆಮೆ ಗತಿಯಲ್ಲಿ ಜೈವಿಕ ಶೌಚಾಲಯ ಕಾಮಗಾರಿ

ರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆಯಿಂದ ಶೌಚಾಲಾಯ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:33 IST
Last Updated 1 ಫೆಬ್ರುವರಿ 2026, 6:33 IST
ವಡಗೇರಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಅಪೂರ್ಣಗೊಂಡ ಜೈವಿಕ ಶೌಚಾಲಯ
ವಡಗೇರಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಅಪೂರ್ಣಗೊಂಡ ಜೈವಿಕ ಶೌಚಾಲಯ   

ವಡಗೇರಾ: ಕಳೆದ ಒಂದು ವರ್ಷದಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಜೈವಿಕ ಶೌಚಾಲಯಗಳನ್ನು (ಬಯೊ ಡೈಜಸ್ಟ್ ಟಾಯ್ಲೇಟ್) ನಿರ್ಮಿಸಲು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆಗೆ ವಹಿಸಲಾಗಿದೆ. ಆದರೆ ಇಲ್ಲಿಯವರೆಗೂ ಜೈವಿಕ ಶೌಚಾಲಯಗಳ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ನಿಸರ್ಗ ಕ್ರೀಯೆಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ವಡಗೇರಾ ತಾಲ್ಲೂಕಿನ ವ್ಯಾಪ್ತಿಯ ನಾಯ್ಕಲ್, ಗುಲ್ಸರಂ, ವಡಗೇರಾ, ಹಯ್ಯಾಳ(ಬಿ), ಕುರಕುಂದಾ, ಸಂಗಮ್, ಹಾಲಗೇರಾ, ಹುಂಡೆಕಲ್ ಗ್ರಾಮಗಳಲ್ಲಿ ಜೈವಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ಜೈವಿಕ ಶೌಚಾಲಯಗಳನ್ನು ನಿರ್ಮಿಸಲು ₹ 25 ಲಕ್ಷ ಖರ್ಚು ಮಾಡಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಮೂಲಸೌಕರ್ಯಗಳ ಕೊರತರೆಯಿಂದಾಗಿ ಹೆಚ್ಚಿನ ಜನರು ಬಯಲು ಮಲವಿಸರ್ಜನೆ ಪದ್ದತಿಯನ್ನು ಅನುಸರಿಸುತ್ತಾರೆ. ಇದರಿಂದಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜತೆಗೆ ಟೈಫಾಯಿಡ್, ಭೇದಿಯಂತಹ ಅಪಾಯಕಾರಿ ಕಾಯಿಲೆಗಳಿಗೆ ಬಲಿಯಾಗುತ್ತಾರೆ.

ADVERTISEMENT

ತೆರೆದ ಮೈದಾನಗಳಲ್ಲಿ ಮಳೆಗಾಲದಲ್ಲಿ ಮಲವಿರ್ಜನೆ ಮಾಡುವದರಿಂದ ತ್ಯಾಜ್ಯವು ಮಣ್ಣು, ನೀರು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ.

ಇದನ್ನು ತಪ್ಪಿಸಲು ಹಾಗೂ ಗ್ರಾಮೀಣ ಪ್ರದೇಶದ ಜನರ ಆರೋಗ್ಯವನ್ನು ಕಾಪಾಡಲು ಜೈವಿಕ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಸುಸ್ಥಿರ, ನೀರು, ಶಕ್ತಿಯ ಅವಶ್ಯಕತೆಯನ್ನು ಕಡಿಮೆ ಮಾಡುವ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ವಿಶೇಷ ಗಮನವನ್ನು ಕೊಡುತ್ತಿದೆ

ಸ್ವಚ್ಚ ಭಾರತ ಮಿಷನ್‌ನೊಂದಿಗೆ ಭವಿಷ್ಯದಲ್ಲಿ ಭಾರತವನ್ನು ಸ್ವಚ್ಚ ಮತ್ತು ಬಯಲು ಮಲ ವಿಸರ್ಜನೆ ಮುಕ್ತಿಗೊಳಿಸಲು ಜೈವಿಕ ಶೌಚಾಲಯಗಳನ್ನು (ಬಯೊ ಡೈಜಸ್ಟ್ ಟಾಯ್ಲೇಟ್)  ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಜೈವಿಕ ಶೌಚಾಲಯಗಳ ಕಾಮಗಾರಿ ಮುಗಿದು ಕಾಲವಾಗಬೇಕು ಆದರೆ ಅಧಿಕಾರಿಗಳ ನಿಷ್ಕಾಜಿಯಿಂದಾಗಿ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಜೈವಿಕ ಶೌಚಾಲಯಗಳ ಪ್ರಯೋಜನ: ನೀರಿನ ಅಗತ್ಯವಿಲ್ಲದ ಕಾರಣ ನೀರಿನ ಸಂರಕ್ಷಣೆಯನ್ನು ಬೆಂಬಲಿಸುತ್ತದೆ. ಸುರಕ್ಷಿತ ಆರೋಗ್ಯಕರ, ಕಡಿಮೆ ನಿರ್ವಹಣೆ, ಕಡಿಮೆ ಅನುಸ್ಥಾಪನಾ ವೆಚ್ಚ, ವಾಸನೆ ಇಲ್ಲ, ಕೀಟ ಭಾದೆ ಇಲ್ಲ. ಎಲ್ಲಾ ಹವಾಮಾನ ಪರಿಸ್ಥಿತಿಗಳಿಗೂ ಸೂಕ್ತವಾಗಿದೆ. ಕಾರ್ಯನಿರ್ವಹಿಸಲು ಸುಲಭ ಮತ್ತು ಪರಿಸರ ಸ್ನೇಹಿಯಾಗಿ ಜೈವಿಕ ಶೌಚಾಲಯಗಳು ಕಾರ್ಯವನ್ನು ನಿರ್ವವಹಿಸುತ್ತವೆ

ಇಷ್ಟೆಲ್ಲಾ ಉಪಯೋಗವಿರುವ ಜೈವಿಕ ಶೌಚಾಲಯಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಯಲು ಮಲ ವಿಸರ್ಜನೆ ಮುಕ್ತಿಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂಬುವದು ಪ್ರಜ್ಞಾವಂತ ನಾಗರೀಕರ ಅನಿಸಿಕೆಯಾಗಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ 8 ಕಡೆ ಜೈವಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಏಕೆ ಕಾಮಗಾರಿ ವಿಳಂಬವಾಗುತ್ತಿದೆ ಎಂಬುವದಕ್ಕೆ ಮಾಹಿತಿ ಇಲ್ಲ
ಮಲ್ಲಿಕಾರ್ಜುನ ಸಂಗ್ವಾರ ಇಒ ತಾಪಂ ವಡಗೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.