ADVERTISEMENT

ಬಿಜೆಪಿ ಪದಗ್ರಹಣದಲ್ಲಿ ಮೊಳಗಿದ ಧಿಕ್ಕಾರ!

ಶ್ರೀಕಾಂತ್‌ ಸುಬೇದಾರ್ ಪದಚ್ಯುತಿ: ಯುವಕರ ಆಕ್ರೋಶ ಎದುರಿಸಿದ ಬಿಜೆಪಿ ಮುಖಂಡರು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 14:58 IST
Last Updated 22 ಡಿಸೆಂಬರ್ 2018, 14:58 IST
ಶ್ರೀಕಾಂತ ಸುಬೇದಾರ್ ಅವರನ್ನು ಏಕಾಏಕಿ ಪದಚ್ಯುತಿಗೊಳಿಸಿರುವುದನ್ನು ಖಂಡಿಸಿ ಶನಿವಾರ ಯಾದಗಿರಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಯುವಕರು ಪ್ರತಿಭಟನೆ ನಡೆಸಿದರು
ಶ್ರೀಕಾಂತ ಸುಬೇದಾರ್ ಅವರನ್ನು ಏಕಾಏಕಿ ಪದಚ್ಯುತಿಗೊಳಿಸಿರುವುದನ್ನು ಖಂಡಿಸಿ ಶನಿವಾರ ಯಾದಗಿರಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಯುವಕರು ಪ್ರತಿಭಟನೆ ನಡೆಸಿದರು   

ಯಾದಗಿರಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಶಹಾಪುರದ ಶ್ರೀಕಾಂತ ಸುಬೇದಾರ್ ಅವರನ್ನು ಪದಚ್ಯುತಿಗೊಳಿಸಿ ಸೂಗೂರೇಶ ಮಾಲಿಪಾಟೀಲ ಅವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಬಿಜೆಪಿ ಮುಖಂಡರು ಯುವಕರ ಆಕ್ರೋಶ ಎದುರಿಸಬೇಕಾಯಿತು.

ಜಿಲ್ಲಾ ಬಿಜೆಪಿ ನಗರದಲ್ಲಿ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಏರ್ಪಡಿಸಿತ್ತು. ವಿಜಯ ಲಕ್ಷ್ಯ ಜಾತ್ರೆ ಅಂಗವಾಗಿ ರಾಜ್ಯದಾದ್ಯಂತ ಪ್ರವಾಸ ನಡೆಸುತ್ತಿರುವ ಯುವ ಮೋರ್ಚಾ ರಾಜ್ಯದ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಪದಗ್ರಹಣಕ್ಕೆ ಆಹ್ವಾನಿಸಲಾಗಿತ್ತು. ಸಮಾರಂಭ ಆರಂಭಕ್ಕೆ ನೂತನ ಅಧ್ಯಕ್ಷ ಸೂಗೂರೇಶ ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಲು ಆರಂಭಿಸುತ್ತಿದ್ದಂತೆ ಯುವಕರ ದಂಡು ವೇದಿಕೆ ಮುಂದೆ ದಿಢೀರ್‌ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಯಿತು.

ಶ್ರೀಕಾಂತ ಸುಬೇದಾರ್‌ ಅವರನ್ನು ಕೈ ಬಿಟ್ಟಿದ್ದು ಏಕೆ? ಯಾವ ಸೂಚನೆಯನ್ನೂ ನೀಡದೆ ಬಿಜೆಪಿ ಮುಖಂಡರು ನೂತನ ಅಧ್ಯಕ್ಷರನ್ನು ನೇಮಿಸಿದ್ದೇಕೆ? ಎಂದು ಪ್ರತಿಭಟನಾನಿರತ ಯುವಕರು ಮುಖಂಡರನ್ನು ಪ್ರಶ್ನಿಸಿದರು. ನ್ಯಾಯಬೇಕು.. ಎಂದು ಘೋಷಣೆ ಕೂಗಿ ವೇದಿಕೆ ಮುಂದೆ ಧರಣಿ ನಡೆಸಿದರು.

ADVERTISEMENT

ಶಾಸಕ ವೆಂಕಟರೆಡ್ಡಿ ಮುದ್ನಾಳ ಮತ್ತು ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಇತರೆ ಮುಖಂಡರು ಪ್ರತಿಭಟನಾನಿರತ ಯುವಕರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೂ, ಪಟ್ಟು ಬಿಡದ ಯುವಕರು ನಮಗೆ ನ್ಯಾಯ ಬೇಕು ಎಂದು ಮುಖಂಡರ ವಿರುದ್ಧ ಧಿಕ್ಕಾರ ಕೂಗಿದರು.

ನಂತರ ಪ್ರತಿಭಟನಾನಿರತರನ್ನು ಪೊಲೀಸರು ಬಲವಂತವಾಗಿ ವೇದಿಕೆ ಪಕ್ಕಕ್ಕೆ ಎಳೆದೊಯ್ದರು.

ಈ ಗೊಂದಲದಲ್ಲಿ ಯುವ ಮೋರ್ಚಾ ರಾಜ್ಯದ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್‌ ಅನ್ನು ಟೀಕಿಸಿ ಚುಟುಕಾಗಿ ಭಾಷಣ ಮುಗಿಸಿದರು. ಪದಗ್ರಹಣ ಕಾರ್ಯಕ್ರಮ ಕೂಡ ನಡೆಯಲಿಲ್ಲ. ನೂತನ ಅಧ್ಯಕ್ಷ ಸೂಗೂರೇಶ ಮಾಲಿಪಾಟೀಲ ಅವರ ಪ್ರಾಸ್ತಾವಿಕ ಭಾಷಣಕ್ಕೂ ಅವಕಾಶ ಸಿಗಲಿಲ್ಲ. ನಂತರ ಎನ್‌ವಿಎಂ ಹೋಟೆಲ್‌ ಸಭಾಂಗಣದಲ್ಲಿ ಬಿ.ವೈ.ವಿಜಯೇಂದ್ರ ಪದಗ್ರಹಣ ಮತ್ತು ಪದಾಧಿಕಾರಿಗಳ ಆಯ್ಕೆ ನಡೆಸಿದರು.

ಪದಚ್ಯುತಿ ವರಿಷ್ಠರ ನಿರ್ಧಾರ: ಮಾಗನೂರು

ಶ್ರೀಕಾಂತ ಸುಬೇದಾರ್ ಅವರ ಪದಚ್ಯುತಿ ವರಿಷ್ಠರ ನಿರ್ಧಾರವಾಗಿದೆ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರ ನೇಮಕ ಕುರಿತು ಪಕ್ಷದ ವರಿಷ್ಠರು ಜಿಲ್ಲಾ ಘಟಕದ ಅಧ್ಯಕ್ಷರಿಗೆ ಮೂರು ತಿಂಗಳ ಹಿಂದೆಯೇ ಸೂಚನಾಪತ್ರ ಕಳುಹಿಸಿದ್ದರು. ಹಲವು ಸ್ಥಳೀಯ ಸಭೆಗಳಲ್ಲಿ ಚರ್ಚೆ ನಡೆಸುವ ಮೂಲಕ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರು ತಿಳಿಸಿದರು.

‘ಹಿಂದಿನ ಅಧ್ಯಕ್ಷರು ಪಕ್ಷದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿವರ್ಹಿಸದ ಕಾರಣಗಳನ್ನು ವರಿಷ್ಠರು ತಿಳಿವಳಿಕೆ ಪತ್ರದಲ್ಲಿ ವಿವರಿಸಿದ್ದಾರೆ. ಪಕ್ಷದ ಜವಾಬ್ದಾರಿ ಮತ್ತು ವರಿಷ್ಠರ ಸಲಹೆ ಸೂಚನೆಗಳನ್ನು ಹಿಂದಿನ ಅಧ್ಯಕ್ಷರು ನಿರ್ಲಕ್ಷಿಸಿರುವುದು ಕೂಡ ನೂತನ ಅಧ್ಯಕ್ಷರ ನೇಮಕಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

ವೈಯಕ್ತಿಕ ದ್ವೇಷ ಪದಚ್ಯುತಿಗೆ ಕಾರಣ: ಸುಬೇದಾರ್

ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅವರ ವೈಯಕ್ತಿಕ ಹಿತಾಸಕ್ತಿಗೆ ಕವಿಗೊಡದೇ ಇರುವುದರಿಂದ ನನನ ಮತ್ತು ಅವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಯುವ ಮೋರ್ಚಾ ಚಟುವಟಿಕೆಯಲ್ಲಿ ಆಗಾಗ ಹಸ್ತಕ್ಷೇಪ ಕೂಡ ಮಾಡುತ್ತಿದ್ದರು. ಅದನ್ನು ವಿರೋಧಿಸಿದ್ದೆ. ನನ್ನ ವೈಯಕ್ತಿಕ ಬೆಳವಣಿಗೆಯನ್ನು ಅವರು ಸಹಿಸುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ನನ್ನನ್ನು ಪದಚ್ಯುತಿಗೊಳಿಸಿ ಸೇಡು ತೀರಿಸಿಕೊಂಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡಿರುವ ಶ್ರೀಕಾಂತ್‌ ಸುಬೇದಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಖಂಡರು ಉಂಟಾಗಿರುವ ಗೊಂದಲವನ್ನು ಬಗೆಹರಿಸಿದರೆ ಪಕ್ಷದಲ್ಲೇ ಉಳಿದು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗುತ್ತೇನೆ. ಬಿ.ವೈ.ವಿಜಯೇಂದ್ರ ಈ ಕುರಿತು ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ಬಂದಿದೆ. ನಮಗೆ ನ್ಯಾಯ ಸಿಗದಿದ್ದರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅವರನ್ನೇ ಪಕ್ಷ ತೊರೆಯುವಂತೆ ಯುವಶಕ್ತಿ ದಂಗೆ ಏಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.