ಯಾದಗಿರಿ: ‘ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅಭಿವೃದ್ಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಶ್ರಮಿಸಿದೆ. ಅದನ್ನು ಸಹಿಸದೇ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವಿನಾಕಾರಣ ಪದೇ ಪದೇ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಟೀಕಿಸುವ ಭರದಲ್ಲಿ ಅಸಭ್ಯ ಶಬ್ದಗಳನ್ನು ಬಳಸುತ್ತಿರುವುದು ಯಾವ ರಾಜಕಾರಣಿಗೂ ಶೋಭೆ ತರುವಂಥದಲ್ಲ’ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸುಗೌಡ ಬಿಳ್ಹಾರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ‘ನಾರಾಯಣ ಸ್ವಾಮಿಯವರು ಕಾಂಗ್ರೆಸ್ ಪಕ್ಷದಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಿ, ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲದಿಂದಲೇ ಅಧಿಕಾರ ಅನುಭವಿಸಿ ರಾಜಕೀಯವಾಗಿ ಬೆಳೆದಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಬಿಜೆಪಿ ಸೇರ್ಪಡೆಗೊಂಡು ದೇಶದ ಪ್ರಧಾನಮಂತ್ರಿಯನ್ನು ಪ್ರಶ್ನೆ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಯಾರು ಎಂದು ಕೇಳುತ್ತಿರುವ ನಾರಾಯಣಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ, ದೇಶದ ಪ್ರಜಾಪ್ರಭುತ್ವದ ತಳಹದಿ ಮರೆತಿದ್ದಾರೆ ಎನ್ನಿಸುತ್ತದೆ. ದೇಶದ ಸಾಮಾನ್ಯ ನಾಗರಿಕನೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಬಹುದು ಎಂಬ ಸಾಮಾನ್ಯ ಜ್ಞಾನ ಇವರಿಗಿಲ್ಲದಿರುವುದು ಹಾಸ್ಯಾಸ್ಪದ’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.