ADVERTISEMENT

ಆಡಿಯೊ ಸೃಷ್ಟಿ ಸಿಎಂಗೆ ಕರಗತ

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಟೀಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 15:07 IST
Last Updated 9 ಫೆಬ್ರುವರಿ 2019, 15:07 IST
ಎನ್‌.ರವಿಕುಮಾರ್
ಎನ್‌.ರವಿಕುಮಾರ್   

ಯಾದಗಿರಿ:‘ಆಪರೇಷನ್ ಕಮಲ ಹೆಸರಿನಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಜೆಡಿಎಸ್ ಶಾಸಕರೊಬ್ಬರ ಪುತ್ರರೊಂದಿಗೆ ನಡೆಸಿದರೆನ್ನಲಾದ ಆಡಿಯೊ ಕೃತಕ. ಅದನ್ನು ಸಿನಿಮಾ ಆಡಿಯೋ ರೀತಿಯಲ್ಲಿ ಸೃಷ್ಟಿಸಲಾಗಿದೆ. ಇದು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕರಗತ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಟೀಕಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಆಪರೇಷನ್ ಕಮಲದಲ್ಲಿ ಸಭಾಪತಿಗೆ ₹25 ಕೋಟಿ ನೀಡಲಾಗಿದೆ ಎಂಬುದಾಗಿ ಬಿ.ಎಸ್‌.ಯಡಿಯೂರಪ್ಪ ಸಿಡಿಯಲ್ಲಿ ಮಾತನಾಡಿದ್ದಾರೆ ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲೇ ಹೇಳಿದ್ದರು. ಆದರೆ, ಮರುದಿನ,‘ ನಾನು ಯಡಿಯೂರಪ್ಪ ಅವರ ಹೆಸರು ಉಚ್ಚರಿಸಿಲ್ಲ’ ಎಂದು ಮಾತು ಬದಲಾಯಿಸುತ್ತಿದ್ದಾರೆ. ಇಷ್ಟರಲ್ಲೇ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಂಥಾ ಮಾತಿನ ಮಲ್ಲರು ಎಂಬುದು ಗೊತ್ತಾಗುತ್ತದೆ’ ಎಂದರು.

‘ಈ ಹಿಂದೆ ಮಂಜುನಾಥಸ್ವಾಮಿ ಮೇಲೆ ಆಣೆ ಮಾಡಿ ರಾಜಕೀಯ ಏಳುಬೀಳಿಗೆ ಕಾರಣವಾಯಿತು. ಹಾಗೆ ನಾವು ಮಾಡಿದ್ದು ತಪ್ಪು ಎಂಬುದು ಗೊತ್ತಾಗಿದೆ ಎಂಬುದಾಗಿ ಕುಮಾರಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲ ಸಿಡಿ ವಿಷಯದಲ್ಲೂ ಅವರು ಕಟ್ಟುಕತೆ ಕಟ್ಟಿರುವುದು ತನಿಖೆಯಿಂದ ಗೊತ್ತಾಗಲಿದೆ. ಅವರು ನಡೆಸಿರುವ ಲಂಚಾವತಾರಗಳ ಬಗ್ಗೆಯೂ ಬಿಡುಗಡೆ ಆಗಿರುವ ಸಿಡಿಗಳನ್ನು ತನಿಖೆಗೊಳಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸಮ್ಮಿಶ್ರ ಸರ್ಕಾರದಲ್ಲಿರುವ ಕಾಂಗ್ರೆಸ್‌ನ 20 ಮಂದಿ ಶಾಸಕರು ಕುಮಾರಸ್ವಾಮಿ ನಮ್ಮ ಸಿಎಂ ಅಲ್ಲ, ಸಿದ್ದರಾಮಯ್ಯ ನಮ್ಮ ಸಿಎಂ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿನ ದೋಸ್ತಿ ಸರಿಯಿಲ್ಲ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?’ ಎಂದರು.

‘ಜೆಡಿಎಸ್‌ ಸೂಟ್‌ಕೇಸ್‌ ಪಕ್ಷ ಎಂಬುದಾಗಿ ಅವರ ಕುಡಿ ಪ್ರಜ್ವಲ್ ರೇವಣ್ಣ ಅವರೇ ಬಹಿರಂಗಪಡಿಸಿದ್ದಾರೆ. ವಿಜಯಪುರದ ವಿಜುಗೌಡ ಕೂಡ ಈ ಕಾರಣಕ್ಕಾಗಿಯೇ ಜೆಡಿಎಸ್ ತೊರೆದು ಬಿಜೆಪಿಗೆ ಬಂದರು ಎಂಬುದನ್ನು ಕುಮಾರಸ್ವಾಮಿ ಮರೆತುಬಿಟ್ಟಿದ್ದಾರೆ. ಅವರು ಮೊದಲು ತಾಜ್‌ ಹೋಟಲಿನಿಂದ ನಡೆಸುತ್ತಿರುವ ಆಡಳಿತವನ್ನು ಕೃಷ್ಣಾ ಇಲ್ಲವೇ ಕಾವೇರಿಯಿಂದ ವಿಧಾನಸೌಧಕ್ಕೆ ತರಲಿ. ಹೋಟೆಲ್‌ ಆಡಳಿತದಲ್ಲಿ ಏನು ನಡೆಯುತ್ತಿದೆ? ಎಂಬುದು ಎಲ್ಲರಿಗೂ ತಿಳಿಸಿದೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.