ADVERTISEMENT

ಬೋನಾಳ ಪಕ್ಷಿಧಾಮದ ಜೀವವೈವಿದ್ಯತೆಯ ಸಂರಕ್ಷಣೆ: ₹ 20 ಕೋಟಿ ಸಮಗ್ರ ಯೋಜನೆ ಸಿದ್ಧ

ಮಲ್ಲಿಕಾರ್ಜುನ ನಾಲವಾರ
Published 10 ಅಕ್ಟೋಬರ್ 2025, 1:24 IST
Last Updated 10 ಅಕ್ಟೋಬರ್ 2025, 1:24 IST
ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಬೋನಾಳ ಕೆರೆ ಪಕ್ಷಿಧಾಮ
ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಬೋನಾಳ ಕೆರೆ ಪಕ್ಷಿಧಾಮ    

ಯಾದಗಿರಿ: ರಾಜ್ಯದ ಎರಡನೇ ದೊಡ್ಡ ಪಕ್ಷಿಧಾಮವಾಗಿರುವ ಸುರಪುರ ಸಮೀಪದ ಬೋನಾಳ ಪಕ್ಷಿಧಾಮದಲ್ಲಿನ ಜೀವವೈವಿಧ್ಯದ ಸಂರಕ್ಷಣೆ, ಸಮಗ್ರ ಅಭಿವೃದ್ಧಿ ಹಾಗೂ ಪರಿಸರ ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಯಾದಗಿರಿ ಪ್ರಾದೇಶಿಕ ಅರಣ್ಯ ವಿಭಾಗವು ₹ 20 ಕೋಟಿ ಮೊತ್ತದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದೆ.

ಬೋನಾಳ ಪಕ್ಷಿಧಾಮ 676 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು, ಜಲಮೂಲದ ಸುತ್ತಲೂ ವಿಶಾಲವಾದ ಕೃಷಿ ಭೂಮಿ ಮತ್ತು ಕಲ್ಲಿನ ಬಂಡೆಗಳ ಬೆಟ್ಟಗಳಿಂದ ಕೂಡಿದೆ. ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯ ನಾನಾ ಬಗೆಯ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುತ್ತಿದ್ದವು. ಮಾನವನ ಅತಿಯಾದ ಹಸ್ತಕ್ಷೇಪ, ಆಹಾರ ಲಭ್ಯತೆಯ ಕೊರತೆಯಂತಹ ಹಲವು ಕಾರಣಗಳಿಂದ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಇದನ್ನು ಮನಗಂಡಿರುವ ಪ್ರಾದೇಶಿಕ ಅರಣ್ಯ ವಿಭಾಗವು 2030ರ ವರೆಗೆ ಹಂತ– ಹಂತವಾಗಿ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದೆ. ಪಕ್ಷಿಗಳ ಆವಾಸಸ್ಥಾನ ಮತ್ತು ಸುತ್ತಲಿನ ಪರಿಸರ ವ್ಯವಸ್ಥೆಯ ನಿರ್ವಹಣೆಗೆ ₹ 6.35 ಕೋಟಿ, ಪ್ರವಾಸಿಗರ ಸ್ನೇಹಿ ಮೂಲಸೌಕರ್ಯಗಳಿಗೆ ₹ 10.75 ಕೋಟಿ ಹಾಗೂ ಸಿಬ್ಬಂದಿ ನೇಮಕಕ್ಕೆ ₹ 2.90 ಕೋಟಿ ಸೇರಿ ₹ 20 ಕೋಟಿ ಮೊತ್ತದ ಡಿಪಿಆರ್ ತಯಾರಿಸಿದೆ. ಶೀಘ್ರವೇ ಅರಣ್ಯ ಇಲಾಖೆಗೆ ಸಲ್ಲಿಕೆಯೂ ಮಾಡಲಿದೆ.

ADVERTISEMENT

ಅರಣ್ಯ ಇಲಾಖೆಯು ಸಮ್ಮತಿಸಿ ಅನುದಾನ ಮಂಜೂರು ಮಾಡಿಸಿದರೆ 2026ರಲ್ಲಿ ₹ 4.36 ಕೋಟಿ, 2027ರಲ್ಲಿ ₹ 7.39 ಕೋಟಿ, 2028ರಲ್ಲಿ ₹ 4.17 ಕೋಟಿ, 2029ರಲ್ಲಿ ₹ 1.35 ಕೋಟಿ ಹಾಗೂ 2030ರಲ್ಲಿ ₹ 2.73 ಕೋಟಿ ಅನುದಾನವನ್ನು ವಿನಿಯೋಗಿಸುವ ಯೋಜನೆಯನ್ನು ಅಧಿಕಾರಿಗಳು ಹಾಕಿಕೊಂಡಿದ್ದಾರೆ. 

ಕೆರೆಯ ಸುತ್ತಲೂ ಹಣ್ಣಿನ ಮತ್ತು ನೆರಳು ಕೊಡುವ ವಿವಿಧ ಜಾತಿಯ ಮರಗಳು ಮತ್ತು ಪೊದೆ ಗಿಡಗಳನ್ನು ನೆಡುವುದು; ಗೂಡು ಕಟ್ಟಿಕೊಳ್ಳಲು ಹಾಗೂ ಮೊಟ್ಟೆಗಳು ಇರಿಸಲು ಅನುಕೂಲ ಆಗುವಂತೆ ಐದು ಮಣ್ಣಿನ ದ್ವೀಪಗಳ ನಿರ್ಮಾಣ; ಪಕ್ಷಿಗಳ ವಿಶ್ರಾಂತಿ ಹಾಗೂ ವೀಕ್ಷಣೆಗಾಗಿ ಎತ್ತರದ 75 ಕೃತಕ ಪಕ್ಷಿಗಳ ಸ್ಟ್ಯಾಂಡ್ ನಿರ್ಮಾಣ; ಪಕ್ಷಿಗಳಿಗೆ ಜೀವಕ್ಕೆ ಎರವಾಗುವ ಪ್ರಭೇದಗಳ ನಿರ್ಮೂಲನೆ; ನೀರಿನ ಗುಣಮಟ್ಟ ಕಾಪಾಡಿ ಹಾಗೂ ಆವಾಸಸ್ಥಾನದ ಸ್ವಾಸ್ಥ್ಯ ಸುಧಾರಣೆಗೆ ಒಟ್ಟು ₹ 6.35 ಕೋಟಿ ಬೇಕಾಗುತ್ತದೆ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರವಾಸಿಗರ ಸ್ನೇಹಿಯಾದ ಮೂರು ಪಕ್ಷಿ ವೀಕ್ಷಣೆ ಗೋಪುರ ನಿರ್ಮಾಣ, ಬೋಟಿಂಗ್ ಬೇ, ಕ್ಯಾಂಟೀನ್ ಮತ್ತು ಶೌಚಾಲಯ, ಕೃತಕ ಕಾರಂಜಿಗಳು, ಟಿಕೆಟ್ ಕೌಂಟರ್, ಪ್ರವೇಶದ್ವಾರ ಸೇರಿ ಇತರೆ ಮೂಲಸೌಕರ್ಯಗಳಿಗೆ ₹ 10.75 ಕೋಟಿ ಅಗತ್ಯವಿದೆ. ದೋಣಿ ನಡೆಸುವವರು, ಸ್ವಚ್ಛತಾ ಕಾರ್ಮಿಕರು, ಭದ್ರತಾ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್‌ಗಳನ್ನು ನಿಯೋಜನೆಗೆ ಸುಮಾರು ₹ 2.90 ಕೋಟಿಯ ಅವಶ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಪಿಆರ್ ಮಾಹಿತಿ ಪಡೆದು ಅರಣ್ಯ ಇಲಾಖೆಯ ಸಚಿವರ ಜೊತೆಗೆ ಚರ್ಚಿಸಿ ಅನುದಾನ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ. ಅರಣ್ಯದ ಚಟುವಟಿಕೆಗಳಿಗೆ ಈಗಾಗಲೇ ಕೆಕೆಆರ್‌ಡಿಬಿಯ ಅನುದಾನ ಕೊಡಲಾಗಿದೆ
ಶರಣಬಸಪ್ಪ ದರ್ಶನಾಪುರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.