ADVERTISEMENT

ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ, ಎಂದಿನಂತೆ ಜನಜೀವನ

ತೆರೆದ ಅಂಗಡಿ ಮುಂಗಟ್ಟುಗಳು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:17 IST
Last Updated 14 ಫೆಬ್ರುವರಿ 2020, 9:17 IST
ಯಾದಗಿರಿಯಲ್ಲಿ ಬಸ್‌ ಸಂಚಾರ ಎಂದಿನಂತೆ ಓಡಾಟ ನಡೆಸಿತು
ಯಾದಗಿರಿಯಲ್ಲಿ ಬಸ್‌ ಸಂಚಾರ ಎಂದಿನಂತೆ ಓಡಾಟ ನಡೆಸಿತು   

ಯಾದಗಿರಿ: ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

‌ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್, ವಡಗೇರಾ, ಸೈದಾಪುರ ಸೇರಿದಂತೆ ವಿವಿಧ ಕಡೆ ಯಾವುದೇ ಪರಿಣಾಮ ಬೀರಿಲ್ಲ. ಆಟೊ, ಸಾರಿಗೆ, ಅಂಗಡಿ ಮುಂಗಟ್ಟುಗಳು ತೆರೆದಿತ್ತು. ಎಂದಿನಂತೆ ಜನಜೀವನ ಸಾಗಿತ್ತು.

ಶಾಲಾ ಕಾಲೇಜಿಗೆ ರಜೆ ಘೋಷಿಸಿರಲಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಎಂದಿನಂತೆ ಇತ್ತು. ಬಸ್‌ ನಿಲ್ದಾಣದಲ್ಲಿ ಬಸ್‌ಗಳ ಓಡಾಟ ಸಮಾನ್ಯವಾಗಿತ್ತು.

ADVERTISEMENT

ಕೆಲ ಕನ್ನಡ ಪರ ಸಂಘಟನೆಗಳು ಮಾತ್ರ ಸುಭಾಷ ವೃತ್ತದಲ್ಲಿ ಬಂದ್‌ಗೆ ಬೆಂಬಲಿಸಿ ಪ್ರತಿಭಟನೆ ನಡೆಸಿದವು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದವು.

ನವೀನ ರೂಪದಲ್ಲಿ ಜಾರಿಗೊಳಿಸಿ: ಸುಮಾರು ಎರಡು ದಶಕಗಳಿಗೂ ಹಳೆಯದಾದ ಸರೋಜಿನಿ ಮಹಿಷಿ ವರದಿಯನ್ನು ಇಂದಿನ ದಿನಮಾನಗಳಿಗೆ ಅನುಗುಣವಾಗಿ ಮಾರ್ಪಾಡಿಸಿ ಜಾರಿಗೊಳಿಸಬೇಕೆಂದು ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸಿದರು.

ಗುರುವಾರ ನಗರದ ಜಿಲ್ಲಾ ಕಾರ್ಯಾಲಯದಲ್ಲಿ ಜರುಗಿದ ಜಿಲ್ಲಾ ಕರವೇ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಂದ್‌ಗೆ ಬೆಂಬಲ ಇಲ್ಲ. ಆದರೆ, ವಿಷಯಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ ಅವರು, ಮುಂದಿನ ತಿಂಗಳು ನಾರಾಯಣಗೌಡರ ನೇತೃತ್ವದಲ್ಲಿ ಕನ್ನಡಿಗರ ಶಕ್ತಿಪ್ರದರ್ಶನ ಮಾಡಲಿದ್ದು, ಸರ್ಕಾರಕ್ಕೆ ಮಹಿಷಿ ವರದಿ ಜಾರಿಗೆ ಒತ್ತಾಯಿಸಲು ಕರವೇ ನಿರ್ಣಯಿಸಿದೆ ಎಂದು ತಿಳಿಸಿದರು.

ಶನಿವಾರ ಸುರಪುರಿಗೆ ನಾರಾಯಣಗೌಡ: ಜಿಲ್ಲೆಯ ಸುರಪುರ ತಾಲ್ಲೂಕು ಘಟಕದಿಂದ ಕನ್ನಡಿಗರ ಜಾಗೃತಿ ಸಮಾವೇಶ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ನಗರ ಘಟಕದ ಅಧ್ಯಕ್ಷರಾಗಿ ಅಂಬರೀಶ ಹತ್ತಿಮನಿ ಅವರನ್ನು ಇದೇ ವೇಳೆ ನೇಮಕ ಮಾಡಿ ಆದೇಶ ಹೊರಡಿಸಿದರು.

ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ತೇಜರಾಜ್ ರಾಠೋಡ, ಮಹಾವೀರ ಲಿಂಗೇರಿ, ಚೌಡಯ್ಯ ಬಾವೂರ, ಅಬ್ದುಲ್ ಚಿಗಾನೂರು, ವೆಂಕಟೇಶ ರಾಠೋಡ, ಸಾಹೇಬಗೌಡ ನಾಯಕ, ಸಿದ್ದಪ್ಪ ಕ್ಯಾಸಪನಳ್ಳಿ, ಸಿದ್ದಪ್ಪ ಕುಲೂರ, ಭೀಮು ಮಡ್ಡಿ ಸೇರಿದಂತೆ ಇನ್ನಿತರರು ಇದ್ದರು.

‌ಯಥಾವತ್ ಜಾರಿಗೊಳಿಸಿ: ಸರೋಜಿನಿ ಮಹಿಷಿ ವರದಿ ಯಥಾವತ್ ಜಾರಿಗೊಳಿಸುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಗ್ರಹಿಸಿದೆ.

ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಕರೆಯ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಮನವಿ ಸಲ್ಲಿಸಿ, ರಾಜ್ಯದಲ್ಲಿ ಅನ್ಯ ರಾಜ್ಯ ದೇಶಗಳಿಂದ ಬರುವ ಕಂಪನಿಗಳು ಇಲ್ಲಿನ ಪ್ರಾಕೃತಿಕ ಸಂಪತ್ತು ಬಳಕೆ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿರುವುದಲ್ಲದೇ ಕನ್ನಡಿಗರಿಗೆ ಉದ್ಯೋಗ ನೀಡದೇ ಅವಮಾನಿಸುತ್ತಿರುವುದು ಖಂಡನೀಯ ಎಂದು ವೇದಿಕೆ ಜಿಲ್ಲಾಧ್ಯಕ್ಷ ಖಾಜಾ ಮೈನುದ್ದಿನ್ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಲಕ್ಷ್ಮಣ ಚವ್ಹಾಣ, ಬಾಬು ರಾಠೋಡ, ಜಿತ್ತು ರಾಠೋಡ, ವಿಶಾಲ ಪವಾರ, ಶಂಕರಬಾಬು ರಾಠೋಡ, ಕಿರಣ ಚವ್ಹಾಣ ಸೇರಿದಂತೆ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.