ಸುರಪುರ: ‘ಬೌದ್ಧ ಧರ್ಮ ಜಗತ್ತಿನ ಏಕೈಕ ವೈಜ್ಞಾನಿಕ ಧರ್ಮ. ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ಅವರೇ ಇದನ್ನು ಹೇಳಿದ್ದು. ನಾವುಗಳು ಅರ್ಥ ಮಾಡಿಕೊಳ್ಳಬೇಕು. ಬೇರೆ ಯಾವ ಧರ್ಮವು ಹೇಳದಂತಹ ವೈಜ್ಞಾನಿಕ ಸತ್ಯವನ್ನು ಬೌದ್ಧ ಧರ್ಮ ಹೇಳಿದೆ. ಈ ಧರ್ಮದಲ್ಲಿ ತರ್ಕ, ಪ್ರಯೋಗ ಇದೆ. ಯಾವುದೇ ಊಹೆಗಳಿಗೆ ಅವಕಾಶ ಇಲ್ಲ’ ಎಂದು ಕಲಬುರಗಿಯ ಅಂಬೇಡ್ಕರ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅರುಣ ಜೋಳದಕೂಡ್ಲಿಗಿ ಹೇಳಿದರು.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಬುದ್ಧರ ಜಯಂತಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
‘ಭಗವಾನ್ ಬುದ್ಧನ ಆಲೋಚನೆಗೆ ಮಾನವೀಯ ಸ್ಪರ್ಶ ಇರುವುದೇ ಅದರ ಸಾರ್ವಕಾಲಿಕತೆಗೆ ಕಾರಣ. ಅವರು ಜಗತ್ತಿಗೆ ಸಾರಿದ ಶಾಂತಿ, ಕರುಣೆ, ಜ್ಞಾನ ಮತ್ತು ಅಹಿಂಸೆಯ ಸಂದೇಶ ಪ್ರತಿಯೊಬ್ಬರ ಜೀವನದ ಮಾರ್ಗದರ್ಶನವಾಗಬೇಕು’ ಎಂದರು.
‘ಭಗವಾನ್ ಬುದ್ಧ ಮಾನವ ಜಗತ್ತಿಗೆ ಸರ್ವ ಶ್ರೇಷ್ಠ ಚಿಂತನೆ ನೀಡಿದ ಮಹಾನ್ ದಾರ್ಶನಿಕ. ಬುದ್ಧನನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ವಿಶ್ವದ ಎಲ್ಲ ಕಡೆ ಬುದ್ಧನ ಆರಾಧನೆ ನಡೆಯುತ್ತದೆ. ಅವರು ಬೇಷರತ್ತಾಗಿ ಆರಾಧಿಸುವ ಏಕೈಕ ವ್ಯಕ್ತಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಚ್.ಎ. ಸರಕಾವಸ್ ಮಾತನಾಡಿ, ‘ಬುದ್ಧ ಅಂದರೆ ತಿಳಿವಳಿಕೆ. ಬುದ್ಧ ಎಂದರೆ ಅರಿವನ್ನು ಸಂಪಾದಿಸಿದವನು ಎಂದರ್ಥ. ಜ್ಞಾನದ ಬೆಳಕು ಕಂಡ ವಿನಾ ಎದ್ದೇಳುವುದಿಲ್ಲ ಎಂದು ಭಗವಾನ್ ಬುದ್ಧರು ಪಣತೊಟ್ಟು ಬೋಧಿವೃಕ್ಷದ ಕೆಳಗೆ ಕುಳಿತು ತಪಸ್ಸು ಮಾಡಿದರು. ಬುದ್ಧರಲ್ಲಿದ್ದ ಮೌನ, ಧ್ಯಾನ ಮತ್ತು ನಗು ವಿಶ್ವವನ್ನೇ ಜಯಿಸಿದವು’ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಬುದ್ಧರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ವೇದಿಕೆಯಲ್ಲಿದ್ದರು.
ಶಿವರಾಜ ಬೊಮ್ಮನಳ್ಳಿ, ಮಾನಪ್ಪ ಕಟ್ಟಿಮನಿ, ನಿಂಗಣ್ಣ ಗೋನಾಲ, ಶಿವಶಂಕರ ಬೊಮ್ಮನಳ್ಳಿ, ಬಸವರಾಜ ದೊಡ್ಡಮನಿ ಶೆಳ್ಳಗಿ, ಹಣಮಂತ ಕಟ್ಟಿಮನಿ ಬೊಮ್ಮನಳ್ಳಿ, ವೀರಭದ್ರ ತಳವಾರಗೇರಾ, ಖಾಜಾ ಹುಸೇನ್ ಗುಡಗುಂಟಿ, ಯಲ್ಲಪ್ಪ ಹುಲಿಕಲ್, ಬಸವರಾಜ ಬೆನಕನಹಳ್ಳಿ, ದೇವಿಂದ್ರಪ್ಪ ಬಾದ್ಯಾಪುರ, ಜಟ್ಟೆಪ್ಪ ನಾಗರಾಳ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಮೂರ್ತಿ ಬೊಮ್ಮನಳ್ಳಿ ಪಂಚಶೀಲ ಪಠಿಸಿದರು. ಶಿಕ್ಷಕ ಸಾಹೇಬರೆಡ್ಡಿ ಇಟ್ಟಗಿ ನಿರೂಪಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.