ADVERTISEMENT

ಬಸ್‌ ಮುಷ್ಕರ: ಊರಿಗೆ ತೆರಳಲು ಪ್ರಯಾಣಿಕರ ಪರದಾಟ

ಆರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, 4 ಸಿಬ್ಬಂದಿ ವಜಾ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 16:32 IST
Last Updated 12 ಏಪ್ರಿಲ್ 2021, 16:32 IST
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಸಾರಿಗೆ ನೌಕರರ ಕುಟುಂಬಸ್ಥರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಯಿತು
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಸಾರಿಗೆ ನೌಕರರ ಕುಟುಂಬಸ್ಥರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನಡೆಸುತ್ತಿರುವ ಸಾರಿಗೆ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿಯವರೆಗೆ 4 ಜನ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಯುಗಾದಿ ಊರಿಗೆ ತೆರಳಲು ಪ್ರಯಾಣಿಕರು ಪರದಾಟ ಸಾಮಾನ್ಯವಾಗಿದೆ.

ಸೋಮವಾರ 23 ಬಸ್‌ಗಳು ಕಾರ್ಯಾಚರಣೆ ಮಾಡಿದ್ದು, ಗ್ರಾಮಾಂತರ ಭಾಗಕ್ಕೆ ತೆರಳಲು ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ.

ಶಹಾಪುರ ಡಿಪೊದಲ್ಲಿ ಒಬ್ಬರು, ಯಾದಗಿರಿ ಡಿಪೋದಲ್ಲಿ ಮೂವರನ್ನು ಸೇರಿದಂತೆ ಒಟ್ಟು ನಾಲ್ವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

ADVERTISEMENT

ಬಸ್‌ಗಳಿಗಾಗಿ ಪ್ರಯಾಣಿಕರು ಬಸ್‌ ನಿಲ್ದಾಣಗಳಲ್ಲಿ ಕಾದು ಕುಳಿತುಕೊಂಡಿದ್ದರು. ಆದರೂ ಬಸ್‌ ಬಾರದೆ ಇರುವುದರಿಂದ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಏರಿ ಹೊರಟು ಹೋದರು.

ದಸಂಸಂ ಪ್ರತಿಭಟನೆ: ನಾಲ್ಕು ವಲಯಗಳಲ್ಲಿ ಕೆಲಸ ಮಾಡುತ್ತಿರುವ ಸಾರಿಗೆ ನೌಕರರ ಬೇಡಿಕೆಗಳನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಸಾರಿಗೆ ನೌಕರರ ಕುಟುಂಬಸ್ಥರೊಂದಿಗೆ ಸೇರಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಯಾದಗಿರಿ ಡಿಪೋ ಬಳಿ ಜಮಾಯಿಸಿದ ಕುಟುಂಬಸ್ಥರು, ಪ್ರತಿಭಟನಾಕಾರರು ತಟ್ಟೆ, ಲೋಟ ಸೇರಿದಂತೆ ವಿವಿಧ ಪರಿಕರಗಳನ್ನು ಬಾರಿಸುತ್ತ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರ ಪರಿಹಾರ ಮಾಡಬೇಕು. 6ನೇ ವೇತನ ಆಯೋಗವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಕೆಎಸ್‌ಡಿಎಸ್‌ಎಸ್‌ (ಕ್ರಾಂತಿಕಾರಿ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ನಿಂಗಣ್ಣ ಮಳ್ಳಳ್ಳಿ, ಅಜೀಜ್‌ ರಸೂಲ್‌ ಸಾಬ್‌, ಮಾನಪ್ಪ ಬಿಜಾಸಪುರ, ಮಹಾದೇವಪ್ಪ ಬಿಜಾಸಪುರ, ಮರೆಪ್ಪ ಹಾಲಗೇರಾ, ಮಲ್ಲಿಕಾರ್ಜುನ ಕುರಕುಂದಿ, ಬಸವರಾಜ ವೈ ಬಿಜಾಸಪುರ, ಚಂದಪ್ಪ ತಳಕ, ರಮೇಶ ಹುಂಡೇಕಲ್‌, ಪಾಲರೆಡ್ಡಿ ಆಂಧ್ರ, ಮಹ್ಮದ್‌ ಹನೀಫ್‌ ಹತ್ತಿಕುಣಿ ಇದ್ದರು.

***

ಕರ್ತವ್ಯಕ್ಕೆ ಹಾಜರಾಗಲು ಸೂಚನೆ

ಯಾದಗಿರಿ: ಸಾರಿಗೆ ಮುಷ್ಕರದಲ್ಲಿ ಭಾಗವಹಿಸಿ ಕರ್ತವ್ಯದ ಮೇಲೆ ತರಬೇತಿಗೆ ಅನಧಿಕೃತವಾಗಿ ಗೈರು ಹಾಜರಾಗಿರುವ ನಾಲ್ವರು, ಕರೆ ಪತ್ರ ತಲುಪಿದ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ (ನೇಮಕಾತಿ ಪ್ರಾಧಿಕಾರಿ) ಸೂಚಿಸಿದ್ದಾರೆ.

ಕಾರ್ಯಸ್ಥಳ ಸುರಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತರಬೇತಿಯ ಚಾಲಕ/ನಿರ್ವಾಹಕ ಭೀಮಶಪ್ಪ ಅವರು ಏಪ್ರಿಲ್ 10ರಿಂದ ಗೈರಾಗಿದ್ದಾರೆ. ಕಾರ್ಯಸ್ಥಳ ಯಾದಗಿರಿಯ ತರಬೇತಿ ಚಾಲಕ/ನಿರ್ವಾಹಕ ಅಶ್ವಿನ್ ಕುಮಾರ್ ಮತ್ತು ತರಬೇತಿ ಕಿರಿಯ ಸಹಾಯಕ ಶರಣಪ್ಪ ಅವರು ಏಪ್ರಿಲ್ 8 ರಿಂದ ಹಾಗೂ ಶಹಾಪುರದ ತರಬೇತಿ ಚಾಲಕ/ನಿರ್ವಾಹಕ ರಫಿಕ್ ಅಹ್ಮದ್ ಸವಾರ ಅವರು ಏಪ್ರಿಲ್ 10ರಿಂದ ಕರ್ತವ್ಯಕ್ಕೆ ಗೈರಾಗಿದ್ದಾರೆ. ಕರ್ತವ್ಯಕ್ಕೆ ಹಾಜರಾಗದಿದ್ದರೆ ಸಂಸ್ಥೆಯ ನಿಯಮದಂತೆ ನಾಲ್ವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.