ಸುರಪುರ: ನಗರಸಭೆ ವ್ಯಾಪ್ತಿಯ ಹಸನಾಪುರದಲ್ಲಿರುವ ಹೊಲಗಾಲುವೆ (ಕಾಡಾ) ವಿಭಾಗೀಯ ಕಚೇರಿ ಸಂಖ್ಯೆ 2ರ ಸ್ಥಳಾಂತರ ರದ್ದುಪಡಿಸುವಂತೆ ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ವೇದಿಕೆಯ ಮುಖಂಡರು ಗುರುವಾರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡ ನಿಂಗಣ್ಣ ಗೋನಾಲ ಮಾತನಾಡಿ, ಈ ಕಚೇರಿಯನ್ನು 35ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಇದರ ವ್ಯಾಪ್ತಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗೆ ಒಳಪಡುತ್ತದೆ. ಏಕಾಏಕಿ ಕಚೇರಿಯನ್ನು ಬಾಗಲಕೋಟೆಗೆ ಸ್ಥಳಾಂತರಿಸಿ ಇಲ್ಲಿನ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಮುಖಂಡ ಹಣಮಂತ್ರಾಯ ಚಂದಲಾಪುರ ಮಾತನಾಡಿ, ವಿತರಣಾ ಕಾಲುವೆಯ ಮುಖಾಂತರ ಹೊಲಗಳಿಗೆ ನೀರು ಮುಟ್ಟಿಸಲು ಕಾಡಾ ಕಾಲುವೆ ನಿರ್ಮಾಣ, ನಿರ್ವಹಣೆ, ಪರಿಶಿಷ್ಟ ಸಮೂದಾಯದ ಜನರ ಯೋಜನೆಗಳ ಅನುಷ್ಠಾನ, ರಸ್ತೆಗಳ ನಿರ್ಮಾಣ ಈ ಕಚೇರಿಯ ಜವಾಬ್ದಾರಿಯಾಗಿತ್ತು. ಇದಕ್ಕೆ ಹೆಚ್ಚಿನ ಅನುದಾನವೂ ಬರುತ್ತಿತ್ತು. ಕಚೇರಿ ಸ್ಥಳಾಂತರದಿಂದ ಈ ಎಲ್ಲ ಕಾರ್ಯಗಳು ಸ್ಥಗಿತಗೊಳ್ಳಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದರಲ್ಲಿದೆ. ಅಷ್ಟರಲ್ಲಿಯೇ ಸ್ಥಳಾಂತರ ರದ್ದುಪಡಿಸಿ ಯಥಾಸ್ಥಿತಿ ಮುಂದುವರಿಸಬೇಕು. ಇಲ್ಲದಿದ್ದರೆ ಸ್ಥಳಾಂತರ ಆದೇಶ ರದ್ದು ಪಡಿಸಲು ಸಮಸ್ಯೆಯಾಗುತ್ತದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕು ಎಂದು ಮುಖಂಡ ರಾಹುಲ ಹಲಿಮನಿ ಒತ್ತಾಯಿಸಿದರು.
ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ಮಾಳಪ್ಪ ಕಿರದಳ್ಳಿ, ಭೀಮರಾಯ ಸಿಂಧಗಿರಿ ಸೇರಿದಂತೆ ರೈತರು, ಮುಖಂಡರು
ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.