ಬಳಿಚಕ್ರ (ಸೈದಾಪುರ): ಬಳಿಚಕ್ರ ಗ್ರಾಮದಲ್ಲಿ ಭಕ್ತಿಲಿಂಗೇಶ್ವರ ಜಾತ್ರೆಯ ಅಂಗವಾಗಿ 6 ಗಾಲಿಯ ಭವ್ಯ ರಥೋತ್ಸವ ಕಾರ್ಯಕ್ರಮದಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಸುಮಾರು 10 ಜನ ಗ್ರಾಮಸ್ಥರ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮೀಪದ ಬಳಿಚಕ್ರ ಗ್ರಾಮದಲ್ಲಿ 15ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಜರುಗಿದ ಭಕ್ತಿಲಿಂಗೇಶ್ವರ ಜಾತ್ರೆಯಲ್ಲಿ ಕೋವಿಡ್ ನಿಯಮಗಳನ್ನು ಹಾಗೂ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಗ್ರಾಮಸ್ಥರು ಜಾತ್ರೆ ಕೈಗೊಂಡಿದ್ದರು.
ರಥೋತ್ಸವ ಸಂದರ್ಭದಲ್ಲಿ ಭಕ್ತರು ರಥವನ್ನು ವೇಗವಾಗಿ ಎಳೆದ ಪರಿಣಾಮವಾಗಿ ರಥವು ಎರಡು ತುಂಡಾಗಿ ಮುರಿದು ಬಿದ್ದು ಅವಘಡ ಸಂಭವಿಸಿತ್ತು. ಈ ದುರಂತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ರಾಯಚೂರಿನ ನಂದಿನಿ ಆಸ್ಪತ್ರೆಯಲ್ಲಿ ಒಬ್ಬರು, ಬಾಲಂಕು ಆಸ್ಪತ್ರೆಯಲ್ಲಿ ಮತ್ತೊಬ್ಬರು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇನ್ನುಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶನಿವಾರ ಈ ದುರಂತ ಸಂಭವಿಸಿದ್ದರಿಂದ ಭಾನುವಾರ ಸೈದಾಪುರ ಪೊಲೀಸ್ ಠಾಣೆಯ ಪಿಎಸ್‍ಐ ಭೀಮರಾಯ ಬಂಕ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿ ದುರಂತದ ಕುರಿತಾಗಿ ಸಂಪೂರ್ಣವಾದ ಮಾಹಿತಿಯನ್ನು ಪಡೆದಿದ್ದಾರೆ.
‘ಗ್ರಾಮದ ಪ್ರಮುಖ 10 ಜನರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.