
ಗುರುಮಠಕಲ್: ‘ಮುಂದಿನ ಕೆಲವು ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭಗೊಳ್ಳಲಿವೆ. ಹೀಗಾಗಿ ನಿಮಗೆ ಕಠಿಣವೆನ್ನಿಸಿದ ವಿಷಯಗಳ ಅಭ್ಯಾಸವನ್ನು ಪುನರಾವರ್ತಿಸಿ ಮತ್ತು ಮನನ ಮಾಡುತ್ತಿರಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲವೀಶ್ ಒರಾಡಿಯಾ ಅವರು ವಿದ್ಯಾರ್ಥಿಗಳಿಗ ಸಲಹೆ ನೀಡಿದರು.
ತಾಲ್ಲೂಕಿನ ಯಲ್ಸತ್ತಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ್ದ ಅವರು ವಿದ್ಯಾರ್ಥಿಗಳೊಡನೆ ಚರ್ಚಿಸಿ, ಉತ್ತಮ ತಯಾರಿಯೊಡನೆ ಪರೀಕ್ಷೆ ಎದುರಿಸಿ ಅತ್ಯುತ್ತಮ ಫಲಿತಾಂಶ ಪಡೆಯುವಂತೆ ಹೇಳಿದರು.
ಅಂಗನವಾಡಿ ಮತ್ತು ಶಾಲಾ ಕಟ್ಟಡಗಳು, ಶಾಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಹಂತದ ಶೌಚಾಲಯಗಳನ್ನು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ದಾಖಲೆಗಳನ್ನು ಪರಿಶೀಲಿಸಿದರು.
ಕೂಲಿ ಕಾರ್ಮಿಕರಿಗೆ ಶೀಘ್ರವೇ ಎನ್‌ಎಂಆರ್ ಮಾಡುವ ಮೂಲಕ ಕೆಲಸ ಕಲ್ಪಿಸುವುದು, ಸ್ವಚ್ಛವಾಹಿನಿ ಮೂಲಕ ಗ್ರಾಮದ ಸ್ವಚ್ಛತೆಗೆ ಕ್ರಮ, ಕರವಸೂಲಿ, ಎನ್‌ಆರ್‌ಎಲ್‌ಎಂ ಮೂಲಕ ಮಹಿಳಾ ಒಕ್ಕೂಟಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಕುರಿತು ಮಾಹಿತಿ ಪಡೆದು, ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದ ನೀರು ಶುದ್ಧೀಕರಣ ಘಟಕವನ್ನು ಸಂಪೂರ್ಣ ದುರಸ್ಥಿಗೊಳಿಸಿ,ಶೀಘ್ರವೇ ಜನರ ಬಳಕೆಗೆ ಅನುಕೂಲಕ ಮಾಡುವಂತೆ ತಾಕೀತು ಮಾಡಿದರು.
ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳು ಮತ್ತು ಅಧ್ಯಯನ ಸಾಮಾಗ್ರಿಗಳು, ಕಾದಂಬರಿ ಸೇರಿದಂತೆ ಇತರೆ ಪ್ರಕಾರದ ಪುಸ್ತಕಗಳನ್ನು ಪ್ರತ್ಯೇಕವಾಗಿರಿಸಿದರೆ ಓದುಗರಿಗೆ ಮತ್ತು ನಿರ್ವಹಣೆಗೂ ಅನುಕೂಲವಾಗಲಿದೆ. ಆದ್ದರಿಂದ ಪುಸ್ತಕಗಳ ವರ್ಗೀಕರಣಕ್ಕೆ ತಕ್ಕಂತೆ ವ್ಯವಸ್ಥಿತವಾಗಿರಿಸಲು ಗ್ರಂಥಪಾಲಕರಿಗೆ ಸಲಹೆ ನೀಡಿದರು.
ಗ್ರಾಮದಲ್ಲಿನ ಕೋತಿಗಳ ಕಾಟದ ಸಮಸ್ಯೆ ಪರಿಹಾರಕ್ಕೆ ಅರಣ್ಯ ಇಲಾಖೆಗೆ ಮಾತನಾಡಿ, ಕೋತಿಗಳನ್ನು ಹಿಡಿದು, ಸ್ಥಳಾಂತರಿಸುವ ಕುರಿತು ಚರ್ಚಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಪಂಚಾಯಿತಿಯ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ತಾಲ್ಲೂಕು ಪಂಚಾಯಿತಿ ಇಒ ಅಂಬರೀಶ ಪಾಟೀಲ, ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ, ಸಹಾಯಕ ಕೃಷಿ ನಿರ್ದೇಶಕ ಸುರೇಶ, ಪಿಡಿಒ ಸೈಯದ್ ಅಲಿ ಸೇರಿದಂತೆ ವಿಎಒ, ಪಂಚಾಯಿತಿ ಮತ್ತು ನರೇಗಾ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.