ADVERTISEMENT

ನೇಪಥ್ಯಕ್ಕೆ ಸರಿಯುತ್ತಿರುವ ‘ಚರಗ’

ಎಲ್ಲೆಂದರಲ್ಲಿ ಭತ್ತದ ಗದ್ದೆಗಳು: ಆಧುನಿಕತೆ ಭರಾಟೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 6:55 IST
Last Updated 12 ಜನವರಿ 2024, 6:55 IST

ಸುರಪುರ: ರೈತನ ಪ್ರಧಾನ ಹಬ್ಬಗಳಲ್ಲಿ ಒಂದಾದ ಎಳ್ಳ ಅಮಾವಾಸ್ಯೆ ಆಧುನಿಕತೆಯ ಭರಾಟೆಯಲ್ಲಿ ನೇಪಥ್ಯಕ್ಕೆ ಸರಿಯುತ್ತಿದೆ. ‘ಚರಗ’ ಆಚರಣೆಯನ್ನು ಭತ್ತದ ಗದ್ದೆಗಳು ಕಿತ್ತುಕೊಂಡಿವೆ.

ಎಳ್ಳ ಅಮಾವಾಸ್ಯೆ ಸಮೀಪಿಸುತ್ತಿದ್ದಂತೆ ರೈತ ಕುಟುಂಬದಲ್ಲಿ ಹೊಸ ಹುರುಪು ಮೂಡುತ್ತಿದ್ದ ಕಾಲವಿತ್ತು. 15 ದಿನಗಳ ಮೊದಲೇ ಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು.
ಶೇಂಗಾದ ಹೋಳಿಗೆ, ಸಜ್ಜಿ ರೊಟ್ಟಿ ಇತರ ಬಗೆ ಬಗೆಯ ತಿಂಡಿಗಳ ತಯಾರಿಕೆ ಮಾಡಲಾಗುತ್ತಿತ್ತು. ರೈತರು ಚಕ್ಕಡಿ, ಎತ್ತುಗಳನ್ನು ಸ್ವಚ್ಛಗೊಳಿಸಿ ಸಿಂಗರಿಸುತ್ತಿದ್ದರು.
ಅಮಾವಾಸ್ಯೆಯ ನಸುಕಿನಲ್ಲಿ ವೈವಿಧ್ಯಮಯ ಭಕ್ಷಗಳು, ಪುಂಡಿಪಲ್ಲೆ, ಬಾನಾ, ಎಣ್ಣೆ ಬದನಿಕಾಯಿ, ಅನ್ನ, ಇತರ ಅಡುಗೆ ಮಾಡಿ ಸಿದ್ಧಗೊಳಿಸಲಾಗುತ್ತಿತ್ತು.

ಬಂಧು ಬಳಗದವರನ್ನು, ನೆರೆ ಹೊರೆಯವರನ್ನು ಆಹ್ವಾನಿಸಿ ಚಕ್ಕಡಿಯಲ್ಲಿ ಹೊಲಕ್ಕೆ ಹೋಗುವ ಆನಂದಕ್ಕೆ ಪಾರವೇ ಇರುತ್ತಿರಲಿಲ್ಲ. ನಾ ಮುಂದು ತಾ ಮುಂದು ಎಂದು ಎತ್ತಿನ ಚಕ್ಕಡಿಗಳನ್ನು ಓಡಿಸಲಾಗುತ್ತಿತ್ತು. ಹೊಲದಲ್ಲಿ ಗಿಡದ ಕೆಳಗೆ ಸ್ವಚ್ಛಗೊಳಿಸಿ ಜಮಖಾನೆ ಹಾಸಿ ಸಾಮೂಹಿಕ ಭೋಜನಕ್ಕೆ ಸಿದ್ಧತೆ ಮಾಡುತ್ತಿದ್ದರು. ಊಟಕ್ಕೆ ಮೊದಲು ಭೂತಾಯಿಗೆ ಪೂಜೆ ಸಲ್ಲಿಸಿ ಎಡೆ ಇಟ್ಟ ನೈವೇದ್ಯವನ್ನು ಭೂತಾಯಿಗೆ ‘ಚರಗ’ದ ರೂಪದಲ್ಲಿ ಸಲ್ಲಿಸಲಾಗುತ್ತಿತ್ತು.

ADVERTISEMENT


ಎಲ್ಲರೂ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಮಳೆ, ಬೆಳೆ ಚೆನ್ನಾಗಿ ಆಗಲಿ. ಉತ್ತಮ ಫಸಲು ಬರಲಿ ರೈತ ನೆಮ್ಮದಿಯಿಂದ ಬದುಕುವಂತಾಗಲಿ. ದೇಶ ಸಮೃದ್ಧಿಯಾಗಲಿ ಎಂದು ಬೇಡಿಕೊಳ್ಳುತ್ತಿದ್ದರು.
ನಂತರ ಎಲ್ಲರೂ ಒಂದೆಡೆ ಸೇರಿ ಸವಿಯುತ್ತಿದ್ದ ಭೋಜನ ಬಾಯಿಯಲ್ಲಿ ನೀರೂರಿಸುವಂತೆ ಇರುತ್ತಿತ್ತು. ಪರಸ್ಪರ ಮಾತನಾಡುತ್ತಾ ಭಕ್ಷಗಳನ್ನು ಸವಿಯುತ್ತಾ ಮೈ ಮರೆಯುತ್ತಿದ್ದರು. ಜೋಳದ ಸೀತನಿ, ಸುಟ್ಟ ಶೇಂಗಾ ಬೆಲ್ಲದೊಂದಿಗೆ ತಿನ್ನುತ್ತಿದ್ದರು. ಸಂಜೆ ಹಗುರ ಮನಸ್ಸಿನಿಂದ ಉಲ್ಲಾಸದಿಂದ ಮನೆಗೆ ಮರಳುತ್ತಿದ್ದರು.

ಈಗ ತಾಲ್ಲೂಕಿನ ಎಲ್ಲೆಡೆ ಭತ್ತದ ಗದ್ದೆಗಳು ಆವರಿಸಿಕೊಂಡಿವೆ. ಹೊಲದಲ್ಲಿ ಕೂಡಲು ಸ್ಥಳವಿಲ್ಲ. ಬಿಳಿಜೋಳ, ಸಜ್ಜೆ ಬಿತ್ತುವ ಹೊಲಗಳು ಕಡಿಮೆಯಾಗುತ್ತಿವೆ.

ಆಧುನಿಕತೆ ಈ ಜನಪದ ಸಂಸ್ಕೃತಿಯ ಮೇಲೆ ಸವಾರಿ ಮಾಡುತ್ತಿದೆ. ಹಣದ ಹಿಂದೆ ಬಿದ್ದಿರುವ ಜನರಿಗೆ ಈಗ ಸಂಪ್ರದಾಯ ಆಚರಣೆಗೆ ಸಮಯವಿಲ್ಲ. ಚಕ್ಕಡಿಗಳ ಬದಲಿಗೆ ಟ್ರ್ಯಾಕ್ಟರ್ ಬಂದಿವೆ. ಟಿ.ವಿ., ಮೊಬೈಲ್ ಈ ಆಚರಣೆಗೆ ಸೆಡ್ಡು ಹೊಡೆಯುತ್ತಿವೆ.


ಗುರುವಾರ ತಾಲ್ಲೂಕಿನಲ್ಲಿ ‘ಚರಗ’ ಆಚರಣೆ ಹೆಚ್ಚಾಗಿ ಕಾಣಲಿಲ್ಲ. ಅಲ್ಲೊಂದು ಇಲ್ಲೊಂದು ನಡೆದ ಬಗ್ಗೆ ಮಾಹಿತಿ ಗೊತ್ತಾಯಿತು. ಹೀಗೆ ಮುಂದುವರಿದರೆ ‘ಚರಗ’ ಎಂಬುದು ಇತಿಹಾಸದ ಪುಟಗಳಲ್ಲಿ ಸೇರಬಹುದು ಎಂಬ ಆತಂಕ ಹಿರಿಯರದ್ದು.

ರಾಧಾಬಾಯಿ ಜೋಷಿ
ಸುರಪುರ ತಾಲ್ಲೂಕಿನ ಕೆಂಭಾವಿ ಸೀಮೆಯಲ್ಲಿ ರೈತ ಕುಟುಂಬದವರು ಗುರುವಾರ ಚರಗ ಚೆಲ್ಲಿ ಭೋಜನ ಮಾಡುತ್ತಿರುವುದು
ಭೋಜನಕ್ಕೆ ಸಿದ್ಧತೆಯಲ್ಲಿರುವ ಭಕ್ಷ್ಯಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.