ADVERTISEMENT

ಯಾದಗಿರಿ| ಶಿವಾಜಿಯ ಹೋರಾಟದ ಬದುಕು ಸ್ಫೂರ್ತಿದಾಯಕ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:50 IST
Last Updated 20 ಫೆಬ್ರುವರಿ 2026, 4:50 IST
ಯಾದಗಿರಿ ನಗರದಲ್ಲಿ ಗುರುವಾರ ಛತ್ರಿಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಅವರ ಮೂರ್ತಿಗೆ ಪೂಜೆ ಸಲ್ಲಿಸಿದ ಗಣ್ಯರು
ಯಾದಗಿರಿ ನಗರದಲ್ಲಿ ಗುರುವಾರ ಛತ್ರಿಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಅವರ ಮೂರ್ತಿಗೆ ಪೂಜೆ ಸಲ್ಲಿಸಿದ ಗಣ್ಯರು   

ಯಾದಗಿರಿ: ‘ಛತ್ರಪತಿ ಶಿವಾಜಿ ಮಹಾರಾಜರ ಹೋರಾಟದ ಬದುಕು, ತ್ಯಾಗ ಮತ್ತು ಬಲಿದಾನಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.

ನಗರದ ಭವಾನಿ ದೇವಸ್ಥಾನ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಅವರನ್ನು ದೈವತ್ವಕ್ಕೆ ಹೋಲಿಸಿ ಗೌರವದಿಂದ ಕಾಣಲಾಗುತ್ತಿದೆ. ಅವರ ಜೀವನ ಪರಾಕ್ರಮ, ಸ್ವರಾಜ್ಯಕ್ಕೆ ನಡೆಸಿದ ಹೋರಾಟಗಳು ಇಂದಿನ ಪೀಳಿಗೆಗೂ ಮಾದರಿಯಾಗಿ, ಅವರ ಸಂಘರ್ಷದ ಬದುಕನ್ನು ಸ್ಮರಿಸಲಾಗುತ್ತಿದೆ’ ಎಂದರು.

ADVERTISEMENT

‘ಔರಂಗಜೇಬನ ವಿರುದ್ಧ ಹೋರಾಟ ಮಾಡಿ ಮರಾಠ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿದರು. ಎಲ್ಲ ಸಮಾಜದವರಿಗೆ ಮರಾಠ ಸಾಮ್ರಾಜ್ಯದ ಸೈನ್ಯದಲ್ಲಿ ಉನ್ನತ ಸ್ಥಾನಗಳನ್ನು ಕೊಟ್ಟಿದ್ದರು. ಹೀಗಾಗಿ, ಇಂದಿಗೂ ಶಿವಾಜಿ ಅವರನ್ನು ಎಲ್ಲ ಸಮಾಜದವರು ಗೌರವದಿಂದ ಕಾಣುತ್ತಾರೆ’ ಎಂದು ಹೇಳಿದರು.

ಉಪನ್ಯಾಸಕಿ ಪಾರ್ವತಿ ಎಸ್‌.ಬೂದುರು ಮಾತನಾಡಿ, ‘ವೈಭವದಲ್ಲಿ ಮೆರೆದಿದ್ದ ಹಿಂದೂ ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಛತ್ರಪತಿ ಶಿವಾಜಿ ಮಹಾರಾಜರು ಅಂತಹುದ್ದೆ ಹಿಂದೂ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು’ ಎಂದು ಹೇಳಿದರು.

‘ತಾಯಿ ಜೀಜಾಬಾಯಿ ಚಿಕ್ಕ ವಯಸ್ಸಿನಲ್ಲಿ ಶಿವಾಜಿಗೆ ಮಹಾಭಾರತ, ರಾಮಾಯಣದ ಕಥೆಗಳನ್ನು ಹೇಳಿ, ದೇಶಾಭಿಮಾನ, ಧೈರ್ಯ, ಸ್ಥೈರ್ಯ, ಮಹಿಳೆಯರ ಬಗ್ಗೆ ಗೌರವ ಭಾವನೆಗಳನ್ನು ತುಂಬಿದರು. ರಾಜಕೀಯ ಗುರು ಕತ್ತಿವರಸೆ, ರಾಜನೀತಿಗಳನ್ನು ಕಲಿಸಿದರೆ, ಸಮರ್ಥ ರಾಮದಾಸರು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು’ ಎಂದರು.

‘ಶಿವಾಜಿ ಅವರು ಜನರನ್ನು ಒಗ್ಗೂಡಿಸಿ ಗೆರಿಲ್ಲಾ ಮಾದರಿ ಯುದ್ಧ ತಂತ್ರವನ್ನು ಅನುಸರಿಸಿ ಒಂದೊಂದೆ ಕೋಟೆಗಳನ್ನು ವಶಪಡಿಸಿಕೊಳ್ಳುತ್ತಾ 300 ಕೋಟೆಗಳನ್ನು ಗೆದ್ದು ಮರಾಠ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿದರು. ಆಗ್ರಾದಲ್ಲಿ ಬಂಧಿತನಾಗಿದ್ದರೂ ಮೋಘಲರ ಮದ್ದು ಗುಂಡುಗಳ ತಯಾರಿ, ಫಿರಂಗಿ ಬಳಕೆಯ ಬಗ್ಗೆ ತಿಳಿದುಕೊಂಡರು. ಹೂವಿನ ಬುಟ್ಟಿಯಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಮತ್ತೆ ತನ್ನ ಸಾಮ್ರಾಜ್ಯವನ್ನು ವಶಕ್ಕೆ ಪಡೆದು ಛತ್ರಪತಿ ಎಂಬ ಬಿರುದು ಪಡೆದರು’ ಎಂದು ಹೇಳಿದರು.

‘ಶಿವಾಜಿ ಆಡಳಿತಕ್ಕೂ ಮುನ್ನ ದೇಶದಲ್ಲಿ ಚಾಣಕ್ಯ ನೀತಿ ಅನುಸಾರ ಬೆಳಿಗ್ಗೆಯಿಂದ ಸಂಜೆವರೆಗೆ ಯುದ್ಧ ನಡೆಯುತ್ತಿದ್ದವು. ಶಿವಾಜ ಯುದ್ಧ ತಂತ್ರವನ್ನು ಬದಲಾಯಿಸಿದರು. ಸೋಲಿನ ಸುಳಿವು ಸಿಗುತ್ತಿದ್ದಂತೆ ಮರೆಯಾಗಿ ರಾತ್ರಿ ಗೆರಿಲ್ಲಾ ಮಾದರಿಯಲ್ಲಿ ದಾಳಿ ಮಾಡುತ್ತಿದ್ದರು. ಸ್ವಧರ್ಮ ರಕ್ಷಣೆ ಹಾಗೂ ಪರಕಿಯರ ದಾಳಿ ತಡೆಗೆ ಗೆರಿಲ್ಲಾ ತಂತ್ರ ಮೊರೆ ಹೋಗಿದ್ದರು’ ಎಂದರು.

ಕಾರ್ಯಕ್ರಮದಲ್ಲಿ ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಸಮಾಜದ ಮರಾಠ ಸಮಾಜದ ಜಿಲ್ಲಾ ಅಧ್ಯಕ್ಷ ರಾಜಕುಮಾರ ಢವಳೆ, ಮುಖಂಡರಾದ ದಿಲೀಪ್‌ ಜಾಧವ, ಗಣೇಶ ಬಾಪಕರ್ ಸೇರಿ ಇತರರು ಉಪಸ್ಥಿತರಿದ್ದರು.

ಯಾದಗಿರಿ ನಗರದಲ್ಲಿ ಗುರುವಾರ ಛತ್ರಿಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಮಹಿಳೆಯರು ಶಿವಾಜಿ ತೊಟ್ಟಿಲೋತ್ಸವ ಆಚರಣೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.