ADVERTISEMENT

‘ಮುಖ್ಯಮಂತ್ರಿ ಜನತಾ ದರ್ಶನಕ್ಕೆ 10ರಿಂದ 15 ಸಾವಿರ ಭಾಗವಹಿಸುವ ನಿರೀಕ್ಷೆ’

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:41 IST
Last Updated 20 ಜೂನ್ 2019, 19:41 IST
ಚಂಡರಕಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಸಚಿವ ರಾಜಶೇಖರ ಪಾಟೀಲ ಪರಿಶೀಲಿಸಿದರು
ಚಂಡರಕಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಸಚಿವ ರಾಜಶೇಖರ ಪಾಟೀಲ ಪರಿಶೀಲಿಸಿದರು   

ಯಾದಗಿರಿ: ಜಿಲ್ಲೆಯ ಚಂಡರಕಿಯಲ್ಲಿ ಶುಕ್ರವಾರ ನಡೆಯುವ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಸುಮಾರು 10 ರಿಂದ 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಹೇಳಿದರು.

ಗುರುಮಠಕಲ್ ತಾಲ್ಲೂಕಿನ ಚಂಡರಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು 2006 ರಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಅದು ಜನರಿಗೆ ಹತ್ತಿರವಾಗಿ ನೇರವಾಗಿ ಜನರೊಟ್ಟಿಗೆ ಬೆರೆಯುವ ಕಾರ್ಯಕ್ರಮ ಆಗಿತ್ತು. ಆದರಂತೆ ಈಗ ಯಾದಗಿರಿ ಜಿಲ್ಲೆಯಿಂದ ಗ್ರಾಮ ವಾಸ್ತವ್ಯ ಆರಂಭಿಸುತ್ತಿದ್ದಾರೆ. ಇದು ಒಳ್ಳೆಯ ಕಾರ್ಯಕ್ರಮ ಎಂದರು.

ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ಬೇರೆ ಜಿಲ್ಲೆಗಳಿಂದಲೂ ಜನರು ಅಹವಾಲು ಸಲ್ಲಿಸಲು ಬರುವ ನಿರೀಕ್ಷೆ ಇದೆ. ಹಿಂದುಳಿದ ಜಿಲ್ಲೆಗೆ ಮುಖ್ಯಮಂತ್ರಿಗಳೇ ಬಂದು ಜನರ ಅಹವಾಲು ಆಲಿಸುವುದು ಸಾಮಾನ್ಯ ವಿಷಯವಲ್ಲ. ಯಾವುದೇ ಆಡಂಬರಕ್ಕೆ ಒತ್ತು ಕೊಡದೆ ಸರಳವಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದರು.

ಕೆಪಿಸಿಸಿ ವಿಸರ್ಜನೆ ಸ್ವಾಗತಾರ್ಹ:ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೆಪಿಸಿಸಿ ಘಟಕವನ್ನು ವಿಸರ್ಜಿಸಿದ್ದು ಸ್ವಾಗತಾರ್ಹ ಎಂದರು. ಅಧ್ಯಕ್ಷರೇ ಇದನ್ನು ವಿಸರ್ಜಿಸಿರುವಾಗ ಅದಕ್ಕೆ ವಿರೋಧ ಮಾಡುವುದು ಸರಿಯಲ್ಲ ಎಂದರು.

ಜಿಲ್ಲಾಡಳಿತ ಹಮ್ಮಿಕೊಂಡಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಾಲ್ಗೊಳ್ಳುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಆಗಮನಕ್ಕಾಗಿ ಯಾದಗಿರಿ, ಗುರುಮಠಕಲ್‌, ಚಂಡರಕಿಯಲ್ಲಿ ದಾರಿಯುದ್ದಕ್ಕೂ ಜೆಡಿಎಸ್ ಫ್ಲೆಕ್ಸ್, ಬಾವುಟ, ಬ್ಯಾನರ್ ಅಳವಡಿಸಲಾಗಿದೆ. ಆದರೆ, ಕಾಂಗ್ರೆಸ್ ಬಾವುಟ ಒಂದು ಕಾಣದಿರುವ ಬಗ್ಗೆ ಪ್ರಶ್ನಿಸಿದಾಗ, ಇಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಹೀಗಾಗಿ ಇಲ್ಲಿನ ಕಾರ್ಯಕರ್ತರು ಫ್ಲೆಕ್ಸ್ ಅಳವಡಿಸಿದ್ದಾರೆ ಎಂದು ಸಮುಜಾಯಿಸಿ ನೀಡಿದರು.

ಇದಕ್ಕೂ ಮುನ್ನ ಸಿಎಂ ವಾಸ್ತವ್ಯ ಮಾಡುವ ಶಾಲೆ, ಜನತಾ ದರ್ಶನ ಬಗ್ಗೆ ಸಚಿವರು ಸಿದ್ಧತೆ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.