
ಕ್ಯಾತನಾಳ(ಸೈದಾಪುರ): ಮಕ್ಕಳನ್ನು ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠಗೊಳಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡೋಣ ಎಂದು ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ. ಅನಿಲ ಕುಮಾರ ಅಭಿಪ್ರಾಯಪಟ್ಟರು.
ಸಮೀಪದ ಕ್ಯಾತನಾಳ ಗ್ರಾಮದ ಇಂದಿರಾನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಯೊಂದಿಗೆ ಶೀಘ್ರಪತ್ತೆ ಮತ್ತು ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮಕ್ಕಳಲ್ಲಿನ ನ್ಯೂನ್ಯತೆ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಜೊತೆಗೆ ಪ್ರತಿಯೊಂದು ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡು ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಹಾಜರಾತಿಯನ್ನು ಹೆಚ್ಚಿಸುವುದು. ಈ ರೀತಿಯ ಪ್ರಗತಿಯನ್ನು ಸಾಧಿಸಲು ಹುಟ್ಟಿನಿಂದಲೇ ಬರಬಹುದಾದ ಆರೋಗ್ಯ ಸಮಸ್ಯೆಗಳಾದ ಬೆಳವಣಿಗೆ ಕುಂಠಿತ, ಪೌಷ್ಠಿಕಾಂಶದ ಕೊರತೆ, ಅಂಗವಿಕಲತೆ, ರಕ್ತ ಹೀನತೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ ಮುಂಜಾಗ್ರತೆ ಕ್ರಮವಾಗಿ ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸೆಗಳನ್ನು ನೀಡುವುದು. ಇದರಿಂದ ಮಕ್ಕಳ ಜೀವನ ಮಟ್ಟ ಸುಧಾರಿಸುವುದು ಅತ್ಯವಶ್ಯಕ. ಆದ್ದರಿಂದ ಮಕ್ಕಳ ಆರೋಗ್ಯವನ್ನು ಉತ್ತಮವಾಗಿಸಿ, ಮಕ್ಕಳನ್ನು ಸದೃಢ ಸಂಪತ್ತನ್ನಾಗಿ ರೂಪಿಸುವ ಹೊಣೆಯನ್ನು ಭಾರತ ಸರ್ಕಾರ ಹಮ್ಮಿಕೊಂಡಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಶಿಲ್ಪಾ.ಪಿ, ನೇತ್ರಾ ಸಹಾಯಕ ಅಬ್ದುಲ್ ವಾಜಿದ್, ಶೀಭಾ ಶಾಲಿನಿ, ಮುಖ್ಯ ಶಿಕ್ಷಕ ಮಹಾದೇವಪ್ಪ, ಸಹ ಶಿಕ್ಷಕ ತಾಯಪ್ಪ, ಗಂಗಮ್ಮ, ಅತಿಥಿ ಶಿಕ್ಷಕಿ ಕವಿತಾ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.