
ಯಾದಗಿರಿ: ಜಿಲ್ಲೆಯಲ್ಲಿನ ಬಾಲಕಾರ್ಮಿಕರ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಜಿಲ್ಲೆಯ ಹಲವು ಗ್ರಾಮಗಳಲ್ಲಿ ಶಾಲೆಯ ಸಮಯದಲ್ಲಿ ಮಕ್ಕಳನ್ನು ಶಾಲೆ ಬಿಡಿಸಿ ನಿತ್ಯ ಹತ್ತಿ ಬಿಡಿಸುವುದಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಆಟೊ, ಬೊಲೆರೊ, ಪಿಕಪ್ ವಾಹನಗಳಲ್ಲಿ ಪೋಷಕರ ಜೊತೆಗೆ ಮಕ್ಕಳನ್ನು ಕೂರಿಸಿಕೊಂಡು ಹೋಗುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಣ ಪಡೆಯಬೇಕಾದ ಮಕ್ಕಳು ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಕಾನೂನಿಗೂ ವಿರುದ್ಧವಾಗಿದೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು. ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುತ್ತಿರುವ ವಾಹನಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕು ಎಂದಿದ್ದಾರೆ.
ಮಕ್ಕಳನ್ನು ಶಾಲೆಗೆ ಮರು ಪ್ರವೇಶಿಸಲು ಶಿಕ್ಷಣ ಇಲಾಖೆ ಹಾಗೂ ಬಾಲಕಲ್ಯಾಣ ಇಲಾಖೆ ಸಂಯೋಜಿತ ಕಾರ್ಯಾಚರಣೆ ನಡೆಸಬೇಕು. ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಇಲಾಖೆ ಮಟ್ಟದಲ್ಲಿ ಪರಿಶೀಲನೆ ಮಾಡಬೇಕು. ಮಕ್ಕಳ ಭವಿಷ್ಯ ರಕ್ಷಿಸಲು ಮತ್ತು ಶೋಷಣೆ ತಡೆಯಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಕೋರಿದರು.
ಈ ವೇಳೆ ವೇದಿಕೆಯ ಜಿಲ್ಲಾಧ್ಯಕ್ಷ ನಾಗಪ್ಪ ಬಿ. ಹೊನಗೇರಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ಯಾದಗಿರಿ, ಪ್ರಮುಖರಾದ ಶರಣಪ್ಪ ಖಾನಾಪುರ, ಭೀಮಾಶಂಕರ ರಾಯಪ್ಪನೋರ್, ಆದೆಪ್ಪ ಹೊನಗೇರಾ, ಅಂಬರೇಶ್, ಅನಿಲ್ ಕುಮಾರ ತಡಿಬಿಡಿ, ಸುರೇಶ ಹೊಸಮನಿ, ಆಕಾಶ, ಶರಣು, ಮಲ್ಲಿಕಾರ್ಜುನ, ಮರೆಪ್ಪ ಕಡಿಮನಿ, ದೇವಪ್ಪ ಅಲ್ಲಿಪುರ, ಭೀಮರಾಯ ಎಸ್.ಕೆ., ನಾಗರಾಜ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.