ಯಾದಗಿರಿ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಜಿಲ್ಲೆಯ ವಿವಿಧ ವಸತಿ ನಿಲಯ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ, ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಹೊಸಳ್ಳಿ ಕ್ರಾಸ್ ಸಮೀಪದ ಮೆಟ್ರಿಕ್ ನಂತರ ಇಂದಿರಾಗಾಂಧಿ ನರ್ಸಿಂಗ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು. ವಿದ್ಯಾರ್ಥಿಗಳು, ನಿಯಲದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಇರುವುದು, ಶೌಚಾಲಯದಲ್ಲಿ ನೈರ್ಮಲ್ಯದ ಕೊರತೆ, ಊಟ ಸರಿಯಾಗಿ ನೀಡದಿರುವುದು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕೋಸಂಬೆ ಗಮನಕ್ಕೆ ತಂದರು. ಹಾಸ್ಟೆಲ್‌ನ ಅಡುಗೆ ಕೋಣೆಗೆ ತೆರಳಿ, ಆಹಾರ ಸಾಮಗ್ರಿಗಳ ಸಂಗ್ರಹ ಪರಿಶೀಲಿಸಿದರು.
ಆಹಾರ ಸಾಮಗ್ರಿಗಳ ಕೊರತೆ ಇರುವುದನ್ನು ಕಂಡು ಗರಂ ಆದರು. ಶೌಚಾಲಯ ಸ್ವಚ್ಛತೆ ಕಾಪಾಡದೇ ನಿರ್ಲಕ್ಷ್ಯ ವಹಿಸಿದ್ದಿರಿ ಎಂದು ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು. ಬಿಸಿ ನೀರು ಸರಿಯಾಗಿ ಪೂರೈಕೆ ಆಗದಿರುವುದನ್ನು ಗಮನಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗೆ ವಾರ್ಡನ್‌ಗೆ ನೋಟಿಸ್ ನೀಡಿ, ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ನಂತರ ಜಿಲ್ಲಾಕ್ರೀಡಾಂಗಣದ ಯುವಜನ ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಊಟ, ಉಪಾಹಾರ, ಜ್ಯೂಸ್ ನೀಡದಿರುವ ಬಗ್ಗೆ ವಿದ್ಯಾರ್ಥಿಗಳು ಗಮನಕ್ಕೆ ತಂದರು.
ಟೂತ್ ಪೇಸ್ಟ್, ಬೇಡ್ ಶೀಟ್, ಸೊಳ್ಳೆ ಪರದೆ ನೀಡದಿರುವ ಬಗ್ಗೆ, ಮಧ್ಯಾಹ್ನ ಮಾಡಿರುವ ಚಪಾತಿ ರಾತ್ರಿ ಚಪಾತಿ ಕೊಡುವುದು ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಸದಸ್ಯರ ಮುಂದೆ ನೋವು ತೊಡಿಕೊಂಡರು. ಹಾಸ್ಟೆಲ್ ಗೇಟ್‌ಗೆ ಅಳವಡಿಸಿರುವ ಸೂಚನೆ ಫಲಕದಲ್ಲಿ ತಪ್ಪಿರುವುದು ಕಂಡಿತು. ಮಕ್ಕಳ ಸಹಾಯವಾಣಿ ನಂಬರ್ 1098 ಬದಲು..! 1099 ಎಂದು ಬರೆಸಿದ್ದಕ್ಕೆ ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ ಅವರ ವಿರುದ್ಧ ಗರಂ ಆಗಿ ತಿಳಿ ಹೇಳಿದರು. ದೇಶದಲ್ಲಿ ಎಲ್ಲಿಯೂ ಮಕ್ಕಳ ಸಹಾಯವಾಣಿ ನಂಬರ್ 1099 ಇಲ್ಲ. ನೀವು ಏಕೆ ತಪ್ಪು ನಂಬರ್ ಹಾಕಿದ್ದಿರಿ, ನಿಮಗೆ ಗೊತ್ತಾಗಲ್ವಾ! ಎಡಿ ಅವರೇ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ನೀಡಿ, ಅವರಿಗೆ ಸರ್ಕಾರದ ಸೌಲಭ್ಯ ಸರಿಯಾಗಿ ನೀಡಬೇಕು. ನೀವು ಬಂದು ಹೋದರೆ ಸಾಲದು ಮಕ್ಕಳ ಸಮಸ್ಯೆ ಆಲಿಸಬೇಕು’ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ, ಬಿಸಿಎಂ ಇಲಾಖೆ ಡಿಡಿ ಸದಾಶಿವ ನಾರಾಯಣ, ಸಮಾಜ ಕಲ್ಯಾಣ ಇಲಾಖೆ ಡಿಡಿ ಚನ್ನಬಸಪ್ಪ, ಡಿಎಚ್‌ಒ ಡಾ.ಮಹೇಶ್ ಬಿರಾದಾರ, ಡಾ.ರಿಜ್ವಾನಾ, ಡಾ.ಕುಮಾರ್ ಅಂಗಡಿ ಭಾಗವಹಿಸಿದ್ದರು.
ಕ್ರೀಡಾಂಗಣದಲ್ಲಿ ಗಾಜಿನ ಪುಡಿ ನಂತರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಂಗಣದಲ್ಲಿನ ಸೌಲಭ್ಯ ನೋಡಿದರು. ಮಳೆ ಬಂದಾಗ ನೀರು ಸಂಗ್ರಹವಾಗುವ ತರಾಟೆಗೆ ತೆಗೆದುಕೊಂಡರು. ಹೀಗಾದರೆ ಕ್ರೀಡಾಪಟುಗಳು ಹೇಗೆ ಆಡುತ್ತಾರೆ. ಕ್ರೀಡಾಂಗಣದಲ್ಲಿ ಒಡೆದ ಗಾಜಿನ ಪುಡಿ ಹಾಗೂ ಮೊಳೆಗಳು ಬಿದ್ದಿರುವದನ್ನು ನೋಡಿ ಅಧಿಕಾರಿಗೆ ಸ್ವಚ್ಛತೆ ಕಾಪಾಡಲು ಸೂಚಿಸಿದರು. ನೀವು ಉತ್ತಮ ಕೆಲಸ ಮಾಡಿ ಮಾದರಿಯಾಗಬೇಕು ಎಂದರು.
ತಾಯಿ–ಮಕ್ಕಳ ಆಸ್ಪತ್ರೆಗೆ ಭೇಟಿ ಯಾದಗಿರಿ ನಗರದ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ವಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಅಪೌಷ್ಟಿಕತೆ ನಿವಾರಣೆ ಮಕ್ಕಳ ಘಟಕ ಪರಿಶೀಲನೆ ಮಾಡಿ ಮಕ್ಕಳ ದಾಖಲಾಗಿದ್ದು ಅವರಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ಮಕ್ಕಳ ಸಂಖ್ಯೆ ಕಡಿಮೆ ಇರುವುದಕ್ಕೆ ಕಾರಣದ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಬಗ್ಗೆ ಪರಿಶೀಲನೆ ಮಾಡಿದರು. ನಂತರ ಆಸ್ಪತ್ರೆಯಲ್ಲಿ ಸರಿಯಾಗಿ ಸ್ವಚ್ಛತೆ ಕಾಪಾಡಬೇಕು. ಚರಂಡಿ ನೀರು ಹರಿದು ಹೋಗಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ಮಕ್ಕಳ ಘಟಕದಲ್ಲಿ ಅವ್ಯವಸ್ಥೆ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವಿಶೇಷ ನವಜಾತ ಶಿಶು ಆರೈಕೆ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನವಜಾತ ಘಟಕದಲ್ಲಿ ಮಳೆ ನೀರು ಸೋರಿಕೆಯಾಗಿ ಗೊಡೆಯು ತಂಪಾಗಿ ಹಾಳಾಗಿರುವ ಹಾಗೂ ಕೆಲ ಎಸಿಗಳು ಕಾರ್ಯನಿರ್ವಹಣೆ ಆಗದೆ ಬಂದ್ ಆಗಿರುವುದನ್ನು ಕಂಡರು. ಹೀಗಿದ್ದರೆ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಕೆಳಭಾಗದಲ್ಲಿ ಘಟಕ ಆರಂಭ ಮಾಡಲಾಗುತ್ತಿದೆ. ಅಲ್ಲಿ ಸ್ಥಳಾಂತರ ಮಾಡುತ್ತೇವೆ ಎಂದರು. ಸಖಿ ಓನ್ ಸ್ಟಾಪ್ ಕೇಂದ್ರಕ್ಕೆ ಭೇಟಿ ನೀಡಿ ಸಿಬ್ಬಂದಿಯಿಂದ ಅಗತ್ಯ ಮಾಹಿತಿ ಪಡೆದರು.
Cut-off box - ಸುರಪುರಕ್ಕೆ ಕೋಸಂಬೆ ಭೇಟಿ ತಾಲ್ಲೂಕಿನ ದೇವಾಪುರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಭೇಟಿ ನೀಡಿ ಪರಿಶೀಲಿಸಿದರು. ಎರಡು ವಾರದ ಹಿಂದೆ ಬಾಲಕಿಯರು ಊಟ ಸೇವಿಸಿ ಅಸ್ವಸ್ಥರಾದ ಘಟನೆ ಹಿನ್ನಲೆ ಆಸ್ಪತ್ರೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಧರ್ ಕೋಸಂಬೆ ಅವರು ಭೇಟಿ ನೀಡಿ ಮಕ್ಕಳಿಗೆ ನೀಡುವ ಸೌಲಭ್ಯ ಪರಿಶೀಲನೆ ಮಾಡಿದರು. ಮಕ್ಕಳಿಗೆ ಉತ್ತಮ ಆಹಾರ ನೀಡುವುದರ ಜೊತೆ ಸ್ನಾನಕ್ಕೆ ಬಿಸಿ ನೀಡಬೇಕು. ಕುಡಿಯಲು ಶುದ್ಧ ಕುಡಿಯುವ ನೀರು ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಮಕ್ಕಳ ಹಾಜರಾತಿ ಬಗ್ಗೆ ಗಮನಿಸುವಾಗ ಹಾಜರಾತಿ ಪುಸ್ತಕ ಇಲ್ಲದ ಕಾರಣಕ್ಕೆ ಬೇಸರ ವ್ಯಕ್ತಪಡಿಸಿದರು. ಮಕ್ಕಳ ಸಹಾಯವಾಣಿ ಫಲಕ ವಿದ್ಯಾರ್ಥಿ ನಿಲಯದ ಹೊರಗಡೆ ಗೋಡೆ ಬರಹದಲ್ಲಿ ಬರೆಸಬೇಕು. ಮಕ್ಕಳ ಹಕ್ಕುಗಳ ನೀತಿ 2016ರ ಅನುಷ್ಠಾನ ಸರಿಯಾಗಿ ಜಾರಿಗೊಳಿಸಬೇಕು. ಸಲಹಾ ಪೆಟ್ಟಿಗೆಗಳು ಅಳವಡಿಸಬೇಕು ಎಂದು ಹೇಳಿದರು.
ಬಾಲ ಕಾರ್ಮಿಕನ ರಕ್ಷಣೆ ಸುರಪುರ ತಾಲ್ಲೂಕಿನ ದೇವಾಪುರ ಗ್ರಾಮದಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕನನ್ನು ಕಂಡ ಶಶಿಧರ್ ಕೋಸಂಬೆ ಅವರು ಮಗುವಿಗೆ ತಕ್ಷಣವೇ ರಕ್ಷಣೆ ಮಾಡಿದರು. ಬಾಲ ಮಂದಿರಕ್ಕೆ ಹಾಜರು ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಕ್ರಮವಹಿಸಲು ಸೂಚನೆ ನೀಡಿದರು. ಶಹಾಪುರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪೊಲೀಸ್ ಠಾಣೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸುಂಬೆ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆ ಮತ್ತು ವಸತಿ ನಿಲಯದಲ್ಲಿನ ಅವ್ಯವಸ್ಥೆಗಳ ಕಂಡು ಬೇಸರ ವ್ಯಕ್ತಪಡಿಸಿದರು. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಹೆರಿಗೆ ಕೋಣೆ ಔಷಧ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು ತಾಲ್ಲೂಕಿನಲ್ಲಿ 129 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆಯಲ್ಲಿ ಏನ್‌ಆರ್‌ಸಿ ಮಕ್ಕಳ ಅಪೌಷ್ಟಿಕ ಪುನಶ್ಚೇತನ ಘಟಕ ಆರಂಭಿಸುವಂತೆ ಅರೋಗ್ಯ ಇಲಾಖೆಯ ಆಯುಕ್ತರಿಗೆ ಪತ್ರ ಬರಿಯುವಂತೆ ಎಎಂಒ ಅವರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.