ADVERTISEMENT

ಯಾದಗಿರಿ | ಕ್ರಿಸ್‌ಮಸ್ ರಂಗು: ಎಲ್ಲೆಡೆ ಯೇಸು ಸ್ಮರಣೆ

ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಶುಭಾಶಯಗಳ ವಿನಿಮಯ; ಕಣ್ಮನ ಸೆಳದ ಆಕರ್ಷಕ ಗೋದಲಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 2:39 IST
Last Updated 26 ಡಿಸೆಂಬರ್ 2021, 2:39 IST
ಯಾದಗಿರಿ ನಗರದ ಕೇಂದ್ರ ಮೆಥೋಡಿಸ್ಟ್ ಚರ್ಚ್‌ನಲ್ಲಿ ಶನಿವಾರ ಕ್ರೈಸ್ತಗೀತೆಗಳನ್ನು ಹಾಡಿ ಸಂಭ್ರಮಿಸಿದ್ದು ಕಂಡುಬಂದಿತು
ಯಾದಗಿರಿ ನಗರದ ಕೇಂದ್ರ ಮೆಥೋಡಿಸ್ಟ್ ಚರ್ಚ್‌ನಲ್ಲಿ ಶನಿವಾರ ಕ್ರೈಸ್ತಗೀತೆಗಳನ್ನು ಹಾಡಿ ಸಂಭ್ರಮಿಸಿದ್ದು ಕಂಡುಬಂದಿತು   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.‌

ನಗರದ ವಿವಿಧ ಚರ್ಚ್‌ಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಚರ್ಚ್‌ಗಳ ಆವರಣದಲ್ಲಿ ಆಕರ್ಷಕವಾದ ಗೋದಲಿ ನಿರ್ಮಿಸಲಾಗಿತ್ತು. ಕ್ರೈಸ್ತರ ಮನೆಗಳ ಮೇಲೆ ನಕ್ಷತ್ರ ಮಾದರಿಯ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು, ಕೊರೆಯುವ ಚಳಿ ಮಧ್ಯೆಯೂ ಕ್ರಿಸ್‌ಮಸ್‌ ಕ್ಯಾರಲ್‌ ಗಾಯನ
ಜನರ ಮನ ತಣಿಸಿತು.

ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತರು ಭಾಗವಹಿಸಿ ಯೇಸು ಕ್ರಿಸ್ತರ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ತಾತಾ ಸೀಮಂಡ್ಸ್ ಮೆಮೊರೀಯಲ್‌ ಚರ್ಚ್‌ ಆವರಣದಲ್ಲಿ ಗೋದಲಿ ನಿರ್ಮಾಣ ಮಾಡಿ ಅದರಲ್ಲಿ ಯೇಸು ಕ್ರಿಸ್ತನ ಜನನಕ್ಕೆ ಸಂಬಂಧಿಸಿದ ಗೊಂಬೆಗಳನ್ನು ಇಡಲಾಗಿತ್ತು.

ADVERTISEMENT

ಕೇಂದ್ರ ಮೆಥೋಡಿಸ್ಟ್ ಚರ್ಚ್: ‘ಜನರನ್ನು ಪವಿತ್ರಗೊಳಿಸಲೆಂದು ಜನಿಸಿದ ದೇವರ ಮಗ ಯೇಸು ಕ್ರಿಸ್ತನ ದಯೆಯಿಂದ ನಮ್ಮ ಪ್ರಿಯ ಭಾರತ ದೇಶವು ಕೋವಿಡ್ ಸಾಂಕ್ರಾಮಿಕದಿಂದ ಸಂಪೂರ್ಣ ಮುಕ್ತವಾಗಿ, ಜನ ಜೀವನವು ಮೊದಲಿನಂತೆ ಆತಂಕವಿಲ್ಲದೆ ಶಾಂತಿ ನೆಲೆಸುವಂತಾಗಲಿ’ ಎಂದು ಮೆಥೋಡಿಸ್ಟ್ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ಸತ್ಯಮಿತ್ರ ಪ್ರಾರ್ಥಿಸಿದರು.

‘ನಮ್ಮನ್ನೆಲ್ಲಾ ಉದ್ಧಾರ ಮಾಡಿ, ರಕ್ಷಣೆಯನ್ನು ನೀಡಲೆಂದು ಯೇಸುಕ್ರಿಸ್ತನು ಜನಿಸಿದ್ದ. ಜಾಗತಿಕವಾಗಿ ಜನ ಜೀವನವನ್ನು ಅಸ್ತವ್ಯಸ್ಥಗೊಳಿಸಿದ ಕೊರೋನಾ ವೈರಾಣುವಿನ ಭೀತಿಯಿಂದ ನಮ್ಮನ್ನೆಲ್ಲಾ ಪಾರು ಮಾಡಿ, ರಕ್ಷಣೆಯನ್ನು ನೀಡಲಿ ಎಂದು ಎಲ್ಲರೂ ಯೇಸುವಿನ ಮೂಲಕ ದೇವರಲ್ಲಿ ಪ್ರಾರ್ಥಿಸೋಣ’ ಎಂದು ಕರೆ ನೀಡಿದರು.

ಸಮಾಜದ ಮುಖಂಡರಾದ ವೈಎಸ್ ಸ್ಯಾಮುವೇಲ್, ಡಾ.ಎಸ್.ರೆಡಸನ್, ಇಮ್ಯಾನುವೇಲ್ ಕಾಳಬೆಳಗುಂದಿ, ಶಾದ್ರಕ ಬಡಿಗೇರ್, ದಿಲೀಪ್ ಮುಳ್ಳಗಸಿ, ಉದಯ ದೋಡ್ಮನಿ, ಜೇಮ್ಸ್ ಆಲ್‌ಪ್ರೈಡ್. ರಾಜಪಾಲ್, ಜೆ.ಶಾಂತ, ರಾಜು ದೋಡ್ಮನಿ, ಸ್ನೇಹ ಲತಾ, ರೀಟಾ ದೀಪಕ್, ಡಿವೀಡ್ ತಿಮೋತಿ, ಮೇಘನಾಥ, ಪ್ರಸಾದ ಮಿತ್ರಾ ಇದ್ದರು.

ತಾತಾ ಸಿಮೆಂಡ್ಸ್ ಮೆಮೊರಿಯಲ್ ಚರ್ಚ್: ನಗರದ ತಾತಾ ಸೀಮಂಡ್ಸ್ ಮೆಮೋರಿಯಲ್ ಚರ್ಚ್‌ನಲ್ಲಿ ರೆ.ಶ್ಯಾಮಸನ್ ಪ್ರಾರ್ಥನೆ ಸಲ್ಲಿಸಿ, ಸಂದೇಶ ನೀಡಿದರು.

ಯೇಸು ಕ್ರಿಸ್ತನು ಜನರ ಪಾಪಗಳನ್ನು ಕಳೆದು, ಲೋಕದ ರಕ್ಷಕನಾಗಿ ಜನಿಸಿದ್ದಾನೆ. ಯೇಸು ಕ್ರಿಸ್ತನ ಪ್ರೀತಿಯ ಜ್ಯೋತಿ ಎಲ್ಲಾ ಕಡೆ ಪ್ರಜ್ವಲಿಸಬೇಕಾದರೆ ನಮ್ಮಲ್ಲಿ ಕ್ರೀಯಾಶೀಲತೆ, ತ್ಯಾಗ, ಸೇವಾ ಮನೋಭಾವವನ್ನು ಬೆಳಿಸಿಕೊ ಳ್ಳಬೇಕಾಗಿದೆ. ಎಂದು ಕರೆ ನೀಡಿದರು.

ಮುಖಂಡರಾದ ವಿಜಯರತ್ನ, ಸುತಾನರೆಡ್ಡಿ, ಮೇಘನಾಥ ಬೆಳ್ಳಿ, ಗಿದೋನ್ ಮೋಸಜಸ್, ಬೆಂಜಮೇನ್ ಕಾನನ್, ಕಸ್ತೂರಿನ ವಿಜಯರತ್ನನ, ದೀನಾ, ಇಮಾನುವೇಲ್ ಮೈಗೂರ್ ಹಾಗೂ ಪ್ರಮುಖರು ಇದ್ದರು.

*ಯೇಸುವಿನ ಬೋಧನೆಗಳು ಹಾಗೂ ಜೀವನ ಎರಡರಲ್ಲೂ ಏಕತ್ವವಿದೆ.ನಾವೆಲ್ಲಾ ಯೇಸುವಿನ ಮಾರ್ಗದಲ್ಲಿ ಜೀವನ ನಡೆಸೋಣ. ಸರ್ವರ ಹಿತಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ

- ರೆ.ಸತ್ಯಮಿತ್ರ, ಮೇಲ್ವಿಚಾರಕ, ಮೆಥೋಡಿಸ್ಟ್ ಚರ್ಚ್‌

*ಕ್ರಿಸ್‌ಮಸ್‌ ಶಾಂತಿ ಸೌಹಾರ್ದತೆ ಸಾರುವ ಹಬ್ಬ. ಕ್ರಿಸ್ತನ ಸಂದೇಶವನ್ನು ಪತ್ರಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ಪರಸ್ಪರ ಪ್ರೀತಿಯಿಂದ ಬೆಸೆದುಕೊಳ್ಳೋಣ. ಕೊರೊನಾ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದ್ದೇವೆ

- ರೆ.ಯೇಸುನಾಥ, ಸಹಾಯಕ ಸಭಾ ಪಾಲಕ

*ಕ್ರಿಸ್‌ಮಸ್‌ ಹಬ್ಬವೆಂದರೆ ದೇವರ ಮಗನಾದ ಯೇಸುಕ್ರಿಸ್ತರ ಜನ್ಮದಿನ. ಈ ಹಬ್ಬದಿಂದ ನಮ್ಮ ಮನೆ ಹಾಗೂ ಮನಸ್ಸುಗಳಲ್ಲಿ ಶಾಂತಿ, ಪ್ರೀತಿ ಮತ್ತು ಬಾಂಧವ್ಯ ಹೆಚ್ಚಾಗಲಿ. ಸೌಹಾರ್ದ ಹರಡಲಿ.

- ವೈ.ಎಸ್.ಸ್ಯಾಮುವೇಲ್, ನಿವೃತ್ತ ಪೊಲೀಸ್ ಅಧಿಕಾರಿ

*ಹಬ್ಬದ ದಿನದಂದು ಸಂಭ್ರಮದಿಂದ ಪ್ರಾರ್ಥನೆ ಸಲ್ಲಿಸಿದ್ದೇವೆ. ಯೇಸುಕ್ರಿಸ್ತನ ಮೂಲಕ ದೇವರಲ್ಲಿ ನಮ್ಮೆಲ್ಲರ ಭೀತಿಯನ್ನು ಕಳೆದು, ನಮ್ಮನ್ನು ಪರಿಶುದ್ಧಗೊಳಿಸಲು ಪ್ರಾರ್ಥಿಸಿದ್ದೇವೆ

- ಡಾ.ಎಸ್.ರೆಡಸನ್, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.