
ಶಹಾಪುರ: ಇಲ್ಲಿನ ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ₹ 6.16ಕೋಟಿ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಐಡಿ ತಂಡವು ಶಹಾಪುರ ಕೋರ್ಟ್‌ಗೆ ಬ್ಯಾಂಕಿನ 4 ಸಿಬ್ಬಂದಿಯ ವಿರುದ್ಧ ದೋಪಾರೋಪ ಪಟ್ಟಿ(ಚಾರ್ಜ್ ಶೀಟ್) ಸಲ್ಲಿಸಿದೆ.
ಬ್ಯಾಂಕಿನ ವ್ಯವಸ್ಥಾಪಕ ಚನ್ನಬಸವ ಬೆನಕ, ಲೆಕ್ಕಾಧಿಕಾರಿ ಗುರುಲಿಂಗಪ್ಪ ಪಾಟೀಲ , ಎಫ್‌ಡಿಸಿ ಭೀಮಸಿಂಗ್ ಹಾಗೂ ಎಸ್‌ಡಿಸಿ ಯಂಕಣ್ಣ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆದರೆ ಅಂದು ಸೇವೆ ಸಲ್ಲಿಸುತ್ತಿದ್ದ ಬ್ಯಾಂಕಿನ ಲೆಕ್ಕಾಧಿಕಾರಿ ಶರಣಬಸವ ಅವರು ಮೃತಪಟ್ಟಿದ್ದರಿಂದ ಪ್ರಕರಣದಿಂದ ಕೈ ಬಿಡಲಾಗಿದೆ.
‘ಅದರಂತೆ ವ್ಯವಸ್ಥಾಪಕ ಚೆನ್ನಬಸವ ಅವರು ₹ 42.59 ಲಕ್ಷ, ಗುರುಲಿಂಗಪ್ಪ ಪಾಟೀಲ ₹ 30 ಲಕ್ಷ, ಭೀಮಸಿಂಗ್ ₹ 44.37ಲಕ್ಷ, ಯಂಕಣ್ಣ ₹ 36.77ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಐಡಿ ತಂಡವು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ನಮೂದಿಸಿದ್ದಾರೆ. ಅಲ್ಲದೆ ಶರಣಬಸವ (ಮೃತಪಟ್ಟಿದ್ದು) ಅವರು ₹ 1.45ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರು ಮೃತಪಟ್ಟಿದ್ದರಿಂದ ಪ್ರಕರಣದಿಂದ ಕೈ ಬಿಡಲಾಗಿದೆ’ ಎಂದು ಶಹಾಪುರ ಕೋರ್ಟ್‌ಗೆ ಡಿ.15ರಂದು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ನಮೂದಿಸಿದ್ದಾರೆ.
ಏನಿದು ಪ್ರಕರಣ: ಇಲ್ಲಿನ ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ₹ 6.16 ಕೋಟಿ ಹಣ ದುರ್ಬಳಕೆಯಾಗಿದೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜೆಎಂಎಫ್ ಸಿ ಕೋರ್ಟ್‌ನಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸೇರಿ ಒಟ್ಟು 19 ಜನರ ವಿರುದ್ಧ 2023ರಲ್ಲಿ ದೂರುದಾರ ಬಸವರಾಜ ಅರುಣಿ ಖಾಸಗಿ ದೂರು ಸಲ್ಲಿಸಿದ್ದರು.
ಬ್ಯಾಂಕಿನ ಆಡಳಿತ ಮಂಡಳಿಯು ಇದನ್ನು ಪ್ರಶ್ನಿಸಿ ಕಲಬುರಗಿ ಸಂಚಾರಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಿತ್ತು. ಆಗ ಹೈಕೋರ್ಟ್ ಆಡಳಿತ ಮಂಡಳಿಯ 15 ಜನರ ವಿರುದ್ಧ ಎಫ್‌ಐಆರ್ ರದ್ದುಗೊಳಿಸಿತು.
ಇವೆಲ್ಲದರ ನಡುವೆ ಸ್ಥಾಯಿ ಆದೇಶದಂತೆ ಪ್ರಕರಣದ ಕಡತವನ್ನು ಮುಂದಿನ ತನಿಖೆ ಕುರಿತು ಸಿಐಡಿ ಬೆಂಗಳೂರಿಗೆ ವರ್ಗಾಯಿಸುವಂತೆ ಅಂದಿನ ಜಿಲ್ಲಾ ಎಸ್‌ಪಿ ಅವರು ಬೆಂಗಳೂರಿನ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಅದರಂತೆ ಪ್ರಕರಣ ಮುಂದಿನ ತನಿಖೆಗೆ ಸಿಐಡಿ ಘಟಕಕ್ಕೆ ವರ್ಗಾವಣೆಗೊಂಡಿತು. ಆಗ ಪ್ರಕರಣದ ತನಿಖಾಧಿಕಾರಿಯನ್ನಾಗಿ ದಾಳೇಗೌಡ ಡಿ. ಅವರನ್ನು ನೇಮಿಸಿತ್ತು. ಅದರಂತೆ ತನಿಖಾಧಿಕಾರಿ ದಾಳೇಗೌಡ ಡಿ ಅವರು ತನಿಖೆ ನಡೆಯಿಸಿ ನಾಲ್ವರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ.
ಹಣ ದುರ್ಬಳಕೆ ಪ್ರಕರಣದ ಬಗ್ಗೆ ‘ಪ್ರಜಾವಾಣಿ’ ಹಲವು ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಬ್ಯಾಂಕಿನ ಹಣ ದುರ್ಬಳಕೆ ಸಾಬೀತಾಗಿದ್ದರಿಂದ ಬ್ಯಾಂಕಿನ ನಾಲ್ಕು ಸಿಬ್ಬಂದಿಯ ವಿರುದ್ಧ ಕೋರ್ಟಿಗೆ ಒಂದು ಸಾವಿರಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.ದಾಳೇಗೌಡ ಡಿ ಸಿಐಡಿ ಪಿ.ಐ ಬೆಂಗಳೂರು
ಕಲಬುರಗಿ ಹೈಕೋರ್ಟ್ ಪೀಠವು 15 ಮಂದಿ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಪ್ರಕರಣ ಇನ್ನು ಇತ್ಯಾರ್ಥವಾಗಿಲ್ಲ.ಬಸವರಾಜ, ಅರುಣಿ ದೂರುದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.