ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಕೇಶ್ವಾರ ಗ್ರಾಮದಲ್ಲಿ ಬುಧವಾರ (ಮೇ 10) ರಂದು ಮಧ್ಯಾಹ್ನದ ವೇಳೆ ಬಿಜೆಪಿ, ಜೆಡಿಎಸ್ ನಡುವೆ ಕಲ್ಲು ತೂರಾಟದ ಘಟನೆಯಿಂದ ಸದ್ಯ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ಸ್ಥಿತಿಯಿದೆ.
‘ಶುಕ್ರವಾರ ಬೆಳಿಗ್ಗೆ (ಮೇ 12) ಗ್ರಾಮದ ಯುವಕನೊಬ್ಬ ಬಹಿರ್ದೆಸೆಗೆ ಹೋದಲ್ಲಿ ನಾಲ್ಕು ಜನ ಹಲ್ಲೆ ನಡೆಸಿ ತಲೆ ಹೊಡೆದಿದ್ದು, ಇದರಿಂದ ಕೇಶ್ವಾರದಲ್ಲಿ ಮತ್ತೆ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಗ್ರಾಮದಲ್ಲಿ ಉದ್ವಿಗ್ನತೆಯಿಂದ ಪರಿಸ್ಥಿತಿ ವಿಕೋಪಗೊಳ್ಳದಂತೆ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಶುಕ್ರವಾರ ನಡೆದ 'ಘಟನೆಗೆ ಸಂಬಂಧಿಸಿ ಎಂಟು ಜನರನ್ನು ಪೊಲೀಸ್ ವಶಕ್ಕೆ ಪಡೆದು, ವಿಚಾರಿಸಲಾಗುತ್ತಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿದವು.
‘ಚುನಾವಣೆ ಸಮಯ ಮೂಡಿದ ಕಾವಿನಿಂದ ಗ್ರಾಮದಲ್ಲಿನ್ನೂ ಒಳ ಬೇಗುದಿ ಮುಂದುವರೆದಿದೆ. ಇದು ಗ್ರಾಮದಲ್ಲಿ ಪ್ರಕ್ಷುಬ್ಧತೆ ಹೆಚ್ಚಿಸುತ್ತಿದ್ದು, ಯಾವಾಗ ಮತ್ತೆ ಭುಗಿಲೇಳಲಿದೆಯೋ ತಿಳಿಯದಂತಾಗಿದೆ. ಇದು ಗ್ರಾಮವನ್ನು ಇಬ್ಬಾಗವಾಗಿಸಿ, ಹಿಂಸಾಚಾರಗಳು ಮರುಕಳಿಸದಂತೆ ಈಗಲೇ ಸರಿಪಡಿಸಿದರೆ’ ಉತ್ತಮ ಎಂದು ಕೆಲ ಗ್ರಾಮಸ್ಥರು ಅಳಲು ತೋಡಿಕೊಂಡರು.
ಬುಧವಾರ ಕೇಶ್ವಾರ ಗ್ರಾಮದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಹತ್ತು ಜನರ ವಿರುದ್ಧ ಗುರುವಾರ ಸ್ವಯಂಪ್ರೇರಿತ ಪ್ರಕರಣ (ಸು–ಮೋಟೊ) ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.