ADVERTISEMENT

ಭತ್ತ ಬೆಳೆದ ರೈತರ ನೆಮ್ಮದಿ ಮೋಡ ಕವಿದ ವಾತಾವರಣ

ಭೀಮಶೇನರಾವ ಕುಲಕರ್ಣಿ
Published 29 ನವೆಂಬರ್ 2021, 14:20 IST
Last Updated 29 ನವೆಂಬರ್ 2021, 14:20 IST
ಹುಣಸಗಿ ಪಟ್ಟಣದ ಹೊರವಲಯದಲ್ಲಿ ಬೆಳೆದಿರುವ ಭತ್ತ ಕಾಳುಕಟ್ಟಿ ನಿಂತಿರುವದು
ಹುಣಸಗಿ ಪಟ್ಟಣದ ಹೊರವಲಯದಲ್ಲಿ ಬೆಳೆದಿರುವ ಭತ್ತ ಕಾಳುಕಟ್ಟಿ ನಿಂತಿರುವದು   

ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲಡೆ ಉಂಟಾದ ಶೀತ ಗಾಳಿ ಹಾಗೂ ಜಿಟಿ ಜಿಟಿ ಮಳೆ ಮತ್ತು ಮೋಡ ಕವಿದ ವಾತಾವರಣ ಭತ್ತ ಬೆಳೆಗಾರರರನ್ನು ಮತ್ತೆ ಚಿಂತೆಗೆ ದೂಡಿದೆ.

ಕಳೆದ ಎರಡು ವಾರಗಳ ಹಿಂದೆ ತಂಪಾದ ಗಾಳಿ ಮತ್ತು ಆಗಾಗ ಜಿಟಿ ಮಳೆ ಇತ್ತು. ಇದರಿಂದಾಗಿ ಅಲ್ಲಲ್ಲಿ ಭತ್ತ ನೆಲಕ್ಕೆ ಬಿದ್ದಿತ್ತು, ಅಲ್ಲದೇ ಭತ್ತ ಕಟಾವಿಗೆ ವಿಳಂಬ ಮಾಡಲಾಗಿತ್ತು. ಇದೇ ಸ್ಥಿತಿ ಮುಂದುವರಿದ ಕಾರಣ ಅಳಿದುಳಿದ ಕೈಗೆ ಬಂದ ತುತ್ತು ಎಲ್ಲ ಮತ್ತೆ ಕೈ ಜಾರಿ ಹೋಗುತ್ತದೆಯೋ ಎಂಬ ಭೀತಿ ನಮ್ಮಲ್ಲಿ ಮನೆ ಮಾಡಿದೆ ಎಂದು ಗೆದ್ದಲಮರಿ, ರಾಜನಕೋಳೂರ, ಬೊಮ್ಮನಗುಡ್ಡ, ಗುಳಬಾಳ ಗ್ರಾಮದ ರೈತರು ತಿಳಿಸಿದರು.

ಪ್ರಸಕ್ತ ವಾರದಲ್ಲಿಯೂ ತಾಲ್ಲೂಕಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸೂರ್ಯನ ಕಿರಣಗಳು ಕಾಣುತ್ತಿಲ್ಲ. ಅಲ್ಲದೇ ದಿನದ ಬಹುತೇಕ ಸಮಯ ಮಂಜು ಕವಿದ ವಾತಾವರಣ ಇದ್ದುದರಿಂದಾಗಿ ಧಾರಣೆ ಕೂಡಾ ಸಿಗುವು ವಿಶ್ವಾಸ ನಮಗಿಲ್ಲ ಎಂದು ರೈತರಾದ ಸಿದ್ದಣ್ಣ ಮೇಟಿ ಹೇಳಿದರು.

ADVERTISEMENT

ಇನ್ನೂ ಅಲ್ಲಲ್ಲಿ ಕಟಾವು ಮಾಡಿದ ಭತ್ತ ಕೂಡಿ ಹಾಕಲಾಗಿದೆ. ಆದರೆ ಅದೇ ಸ್ಥಿತಿಯಲ್ಲಿ ಕೂಡಿ ಹಾಕಿದರೇ ಭತ್ತದ ಬಣ್ಣ ಕಪ್ಪಾಗಿ ತಿರುಗಿದರೇ, ಮೊಳಕೆಯಾದರೇ ನಮ್ಮ ಭತ್ತ ಯಾರೂ ಕೇಳದಂತಾಗುವ ಭೀತಿ ಎದುರಾಗಿದೆ ಎಂದು ಅರಕೇರಾ.ಜೆ ಗ್ರಾಮದ ರೈತರಾದ ಗೋಪಾಲ ಅಮಲಿಹಾಳ ಹಾಗೂ ಹುಸೇನಬಾಷಾ ಆತಂಕ ವ್ಯಕ್ತಪಡಿಸಿದರು.

ಮೊಡಕವಿದ ವಾತಾವರಣದಿಂದಾಗಿ ಭತ್ತದ ರಾಶಿ ಮಾಡಲು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಭತ್ತದ ಯಂತ್ರಗಳಿಗೆ ಭಾರಿ ಬೇಡಿಕೆಯುಂಟಾಗುತ್ತಿದೆ.

ಪ್ರತಿ ವರ್ಷವೂ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೃಷ್ಣಾ ಅಚ್ಚಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯುತ್ತೇವೆ. ಆದರೆ ಭತ್ತ ನಾಟಿಯಿಂದ ಹಿಡಿದು ಕಟಾವು, ಮಾರಾಟದವರೆಗೂ ಚಿಂತೆಗಳ ಸರಮಾಲೆಯಲ್ಲಿಯೇ ನಮ್ಮ ಜೀವನ ಸಾಗಿಸುವಂತಾಗಿದೆ. ಎಲ್ಲ ಖರ್ಚು ಲೆಕ್ಕ ಹಾಕಿದರೇ ಸಾಲವೇ ಉಳಿಯುತ್ತದೆ. ಆದ್ದರಿಂದ ಕೃಷಿಯಲ್ಲಿ ಪಾಲ್ಗೊಳ್ಳುವದೇ ದೊಡ್ಡ ಸಮಾಲಾಗಿದೆ ಎಂದು ವಜ್ಜಲ ಗ್ರಾಮದ ರೈತ ನಿಂಗನಗೌಡ ಬಸನಗೌಡ್ರ ತಮ್ಮ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.