ADVERTISEMENT

ಯಾದಗಿರಿ ಜಿಲ್ಲಾಸ್ಪತ್ರೆ 300 ಹಾಸಿಗೆಯಾಗಿ ಮೇರ್ಲರ್ಜೆಗೆ

ಚಂಡರಕಿ ಗ್ರಾಮದ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 11:12 IST
Last Updated 21 ಜೂನ್ 2019, 11:12 IST
ಯಾದಗಿರಿ ಜಿಲ್ಲೆ ಚಂಡರಕಿ ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯಕ್ಕೆ ಬಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಅವರು ಗ್ರಾಮದಲ್ಲಿ ಪಾದಯಾತ್ರೆ ನಡೆಸಿದರುಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್‌.ಜಿ
ಯಾದಗಿರಿ ಜಿಲ್ಲೆ ಚಂಡರಕಿ ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯಕ್ಕೆ ಬಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಅವರು ಗ್ರಾಮದಲ್ಲಿ ಪಾದಯಾತ್ರೆ ನಡೆಸಿದರುಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್‌.ಜಿ   

ಯಾದಗಿರಿ: 100 ಹಾಸಿಗೆ ಸೌಲಭ್ಯವನ್ನು ಹೊಂದಿರುವ ಜಿಲ್ಲಾಸ್ಪತ್ರೆಯನ್ನು 300 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು.

ಗುರುಮಠಕಲ್‌ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ಶುಕ್ರವಾರ ಗ್ರಾಮವಾಸ್ತವ್ಯದ ಅಂಗವಾಗಿ ನಡೆದ ಜನತಾ ದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ’ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣದ ಬೇಡಿಕೆಯನ್ನು ಇಲ್ಲಿನ ಜನಪ್ರತಿನಿಧಿಗಳು ಇಟ್ಟಿದ್ದರು. ಆದರೆ, ಕಾಲೇಜು ನಿರ್ಮಾಣಕ್ಕೆ ₹ 600 ಕೋಟಿ ಹಣಕಾಸು ಅಗತ್ಯವಿದೆ. ಅಲ್ಲದೇ, ನುರಿತ ವೈದ್ಯಕೀಯ ಸಿಬ್ಬಂದಿ ಹಾಗೂ ಪ್ರಾಧ್ಯಾಪಕರು ಬೇಕಾಗುತ್ತಾರೆ. ಅದರ ಬದಲಾಗಿ ಜಿಲ್ಲಾ ಆಸ್ಪತ್ರೆಯನ್ನು 300 ಹಾಸಿಗೆಗೆ ಮೇರ್ಲರ್ಜೆಗೆ ಏರಿಸಲಾಗುವುದು‘ ಎಂದು ಹೇಳಿದರು.

‘ಜಿಲ್ಲಾ ಆಸ್ಪತ್ರೆಗೆ ಹೋಗುವ ಮಾರ್ಗವು ಖಾಸಗಿಯವರಿಗೆ ಸೇರಿದೆ. ಹಾಗಾಗಿ, ಅದನ್ನು ಭೂಸ್ವಾಧೀನ ಮಾಡಲು ಅಗತ್ಯವಿರುವ ₹ 1.5 ಕೋಟಿ ಹಣವನ್ನು ಬಿಡುಗಡೆ ಮಾಡಲು ಆದೇಶಿಸಿದ್ದೇನೆ‘ ಎಂದರು.

ADVERTISEMENT

‘ಶಹಾಪುರ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಹಣ ಬಿಡುಗಡೆ ಮಾಡುವಂತೆ ಅಲ್ಲಿನ ಶಾಸಕ ಶರಣಬಸಪ್ಪ ದರ್ಶನಾಪುರ ಮನವಿ ಮಾಡಿದ್ದಾರೆ. ಶಹಾಪುರ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಡಿಪಿಆರ್‌ ತಯಾರಿಸುವಂತೆ ಬೆಳಿಗ್ಗೆಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ, ಯಾದಗಿರಿ ನಗರದಲ್ಲಿ ಕೇವಲ 30ರಷ್ಟು ಒಳಚರಂಡಿ ಕೆಲಸ ಪೂರ್ಣಗೊಂಡಿದೆ ಎಂದು ಸಚಿವರು ಗಮನಕ್ಕೆ ತಂದರು. ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಆದೇಶ ನೀಡಿದ್ದೇನೆ‘ ಎಂದು ಕುಮಾರಸ್ವಾಮಿ ಸಭೆಯಲ್ಲಿ ಘೋಷಿಸಿದರು.

ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಸೈದಾಪುರ ಗ್ರಾಮದ ಕೆರೆಗೆ ನೀರು ತುಂಬಿಸುವ ಉದ್ದೇಶದಿಂದ ಪಾದಯಾತ್ರೆ ನಡೆಸಿದ್ದರು. ಜಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು. ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ನದಿಯ ನೀರನ್ನು ನಲ್ಲಿಯ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕೆಲ ಯುವಕರು ಭೇಟಿ ಮಾಡಿ ತಾವು ಐಐಟಿ, ಡಿಪ್ಲೊಮಾ ಓದಿದ್ದು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮನವಿ ಮಾಡಿದರು. ಈಗಾಗಲೇ ಬೀದರ್, ಕಲಬುರ್ಗಿ, ಕೊಪ್ಪಳ, ಬಳ್ಲಾರಿ, ಬೆಳಗಾವಿ ಸೇರದಂತೆ 9 ಕಡೆ ಕೈಗಾರಿಕಾ ಕ್ಲಸ್ಟರ್‌ಗಳನ್ನು ರಚಿಸಲಾಗಿದೆ. ಹಲವು ಉದ್ಯಮಗಳು ಅಲ್ಲಿ ಬರಲಿದ್ದು, ಉದ್ಯೋಗಾವಕಾಶಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ನಂತರ ಜನತಾದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.ಆ ಬಳಿಕ ಜಿಲ್ಲೆಯ ₹ 320 ಕೋಟಿ ಮೊತ್ತದ 20 ಯೋಜನೆಗಳಿಗೆ ಚಾಲನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ತೇಲ್ಕೂರ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಗಣಿ ಮತ್ತು ಭೂವಿಜ್ಞಾನ ಸಚಿವ ವೆಂಕಟರಾವ್‌ ನಾಡಗೌಡ, ಶಾಸಕರಾದ ನಾಗನಗೌಡ ಕಂದಕೂರ, ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಎಚ್.ಕೋನರಡ್ಡಿ, ಕಲಬುರ್ಗಿ ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌, ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್‌, ಜಿಲ್ಲಾ ಪಂಚಾಯಿತಿ ಸಿಇಒ ಕವಿತಾ ಮನ್ನಿಕೇರಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.