ADVERTISEMENT

ಯಾದಗಿರಿ। ಮುಂದಿನ 10 ವರ್ಷಗಳ ಅವಧಿ ನೀರಾವರಿ ದಶಕವೆಂದು ಘೋಷಿಸಿದ ಸಿಎಂ

‘ಹನಿ ನೀರಿನಿಂದಲೂ ಹೆಚ್ಚು ಫಸಲು’ ನಮ್ಮ ಸರ್ಕಾರದ ಗುರಿ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 13:51 IST
Last Updated 19 ಜನವರಿ 2023, 13:51 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಹೊರವಲಯದಲ್ಲಿ ಗುರುವಾರ ಏರ್ಪಡಿಸಿದ್ದ ₹10,863ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಮಾತನಾಡಿದರು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಹೊರವಲಯದಲ್ಲಿ ಗುರುವಾರ ಏರ್ಪಡಿಸಿದ್ದ ₹10,863ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಮಾತನಾಡಿದರು   

ಯಾದಗಿರಿ/ ಹುಣಸಗಿ: ‘ಮುಂದಿನ 10 ವರ್ಷಗಳ ಅವಧಿಯನ್ನು ನೀರಾವರಿ ದಶಕವೆಂದು ಘೋಷಿಸಲಾಗುವುದು. ಈ ಮೂಲಕ 10 ವರ್ಷಗಳಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಹೊರವಲಯದಲ್ಲಿ ಗುರುವಾರ ಏರ್ಪಡಿಸಿದ್ದ ₹10,863ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 40.66ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶದ ಗುರಿ ಇದ್ದು, ಇದುವರೆಗೆ 30 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಲಾಗುತ್ತಿದೆ. ಬಾಕಿ ಭೂಮಿಯನ್ನು ನೀರಾವರಿಗೆ ಒಳಪಡಿಸಲು ಕ್ರಮಕೈಗೊಳ್ಳಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 2012ರ ಅವಧಿಯಲ್ಲಿ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು’ ಎಂದು ತಿಳಿಸಿದರು.

ADVERTISEMENT

‘ಸುರಪುರ ಸಂಸ್ಥಾನದ ರಾಜರಿಗೆ ನನ್ನ ನಮನಗಳು. ದಕ್ಷಿಣ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಈ ಭಾಗದ ರಾಜರ ಕೊಡುಗೆ ಅಪಾರ. ನಾಲ್ವಡಿ ರಾಜಾ ವೆಂಕಟಪ್ಪ ನಾಯಕ 1857 ರ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿಹಾಡಿದ್ದರು’ ಎಂದರು.

‘ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ಪುನಃಶ್ಚೇತನ ಹಾಗೂ ಆಧುನೀಕರಣ ಯೋಜನೆ ಮತ್ತು ಸ್ಕಾಡಾ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಜಮೀನುಗಳಿಗೆ ನೀರು ಒದಗಿಸಲಾಗುತ್ತಿದೆ. ಸ್ಕಾಡಾ ಯೋಜನೆ ಯುಪಿಎ ಸರ್ಕಾರದಲ್ಲಿ ಯೋಜನೆ ಜಾರಿಗೆ ತಂದರೂ ನಮ್ಮ ಸರ್ಕಾರ ಇದಕ್ಕೆ ಅನುದಾನ ನೀಡಿದೆ. ಕೇಂದ್ರದ ಪಾಲು 40, ರಾಜ್ಯದ ಪಾಲು 60ರ ಅಡಿಯಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಏಷ್ಯಾದಲ್ಲೇ ಇದು ದೊಡ್ಡದಾದ ಯೋಜನೆಯಾಗಿದೆ’ ಎಂದು ಮಾಹಿತಿ ನೀಡಿದರು.

‘ಹೆಚ್ಚು ನೀರು ಕೊಟ್ಟರೂ ಸವಳು ಜವಳು ಭೂಮಿ ತಪ್ಪಿಸಬಹುದು. ಒಂದು ಹನಿ ನೀರಿನಿಂದ ಹೆಚ್ಚು ಫಸಲು ಪಡೆಯುವುದು ಪ್ರಧಾನಿಯವರ ಆಶಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ನೀರಾವರಿ ಕ್ರಾಂತಿ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಈ ಸ್ಕಾಡಾ ತಂತ್ರಜ್ಞಾನದಿಂದಾಗಿ ಉತ್ತರ ಕರ್ನಾಟಕದ ಬರಪೀಡಿತ ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 4.50 ಲಕ್ಷ ಹೆಕ್ಟರ್ ಪ್ರದೇಶದಲ್ಲಿ 1ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ ಅಂದರೇ ಅಚ್ಚುಕಟ್ಟು ಪ್ರದೇಶದ ಕೊನೆಯಂಚಿನ ಈ ರೈತರ ಜಮೀನುಗಳಿಗೆ ಇನ್ಮುಂದೆ ಸಮ ಪ್ರಮಾಣದಲ್ಲಿ ನೀರು ಲಭ್ಯವಾಗಲಿದೆ ಎಂದು ಹೇಳಿದ ಅವರು ಈ ತಂತ್ರಜ್ಞಾನದಿಂದ ನೀರಿನ ಬಳಕೆಯ ದಕ್ಷತೆ ಶೇ 20ರಷ್ಟು ಹೆಚ್ಚಾಗಲಿದೆ‘ ಎಂದರು.

‘ಸ್ಕಾಡಾ ಯೋಜನೆಯಿಂದ ಇಂಡಿ, ಜೇವರ್ಗಿ, ಶಹಾಪುರ, ಮುಡಬೂಳ ಸೇರಿದಂತೆ ಎಲ್ಲ ಶಾಖಾ ಕಾಲುವೆಗಳಿಗೆ ನೀರು ತಲುಪಲಿದೆ. ಇದು ನಮ್ಮ ಸರ್ಕಾರದ ಸಾಧನೆಯಾಗಿದೆ. ಯಾರೂ ಕೂಡ ನೀರಾವರಿಯಿಂದ ವಂಚಿತರಾಗಬಾರದು ಎನ್ನುವುದು ನಮ್ಮ ಆಶಯವಾಗಿದೆ‘ ಎಂದರು.

‘ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲಿ ಅನುದಾನ ಮಂಜೂರು ಮಾಡಿಕೊಂಡು ಬರಲಿಲ್ಲ. ಆದರೆ, ನಮ್ಮ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ಸ್ಕಾಡಾ ಉದ್ಘಾಟನೆಯಾಗಿದೆ‘ ಎಂದರು.

ಶಾಸಕ ರಾಜೂಗೌಡ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ಎ.ಎಸ್.ಪಾಟೀಲ ನಡಹಳ್ಳಿ,ರಮೇಶ ಭೂಸನೂರ ಸಿಂದಗಿ, ಸೋಮನಗೌಡ ಪಾಟೀಲ ಹಿಪ್ಪರಗಿ ಇದ್ದರು.

****

‘ವಿಶ್ವಗುರು ಬಸವಣ್ಣ ನೆನಪಿಸುವ ಸಂಪುಟ’

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಪ್ರಧಾನಿಯವರ ಸಂಪುಟ ವಿಶ್ವಗುರು ಬಸವಣ್ಣ ಅವರನ್ನು ನೆನಪಿಸುತ್ತದೆ. ಎಲ್ಲ ವರ್ಗದ ಜನೆತೆಗೆ ಪ್ರಧಾನಿ ಸಂಪುಟದಲ್ಲಿ ಸ್ಥಾನಮಾನ ಸಿಕ್ಕಿದೆ. ಕೊಡೇಕಲ್ಲನಂತ ಸಣ್ಣ ಹಳ್ಳಿಗೆ ಪ್ರಧಾನಿಯವರು ಬಂದು ಘನತೆಯನ್ನು ತೋರಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ನೀರಾವರಿ ಯೋಜನೆಗಳಲ್ಲಿ ಅದರಲ್ಲೂ ಕೃಷ್ಣಾ ಅಚ್ಚುಕಟ್ಟು ಪ್ರದೇಶ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ₹1,010 ಕೋಟಿ ಅನುದಾನ ನೀಡಿದ್ದು, ಅದನ್ನು ಬಳಸಿಕೊಂಡು ಎಡದಂಡ ಕಾಲುವೆ ವಿಸ್ತರಣೆ ಹಾಗೂ ಪುನಃಶ್ಚೇತನ ಮಾಡಲಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಶೇ 40ರಷ್ಟು ನೀರಾವರಿ ಪ್ರದೇಶ ಮಾಡಬೇಕು ಎನ್ನುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.