ADVERTISEMENT

ಜಿಲ್ಲೆಯಾದ್ಯಂತ ನಿರ್ಗತಿಕರ ಕೇಂದ್ರ ಆರಂಭ

ಆಯುಷ್‌ ಆಸ್ಪತ್ರೆಯಲ್ಲಿ ಗುಳೆಯಿಂದ ವಾಪಸ್ಸಾದವರ ಜ್ವರ ತಪಾಸಣೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 16:42 IST
Last Updated 30 ಮಾರ್ಚ್ 2020, 16:42 IST
ಗುಳೆಯಿಂದ ವಾಪಾಸು ಬಂದವರ ಜ್ವರ ತಪಾಸಣೆಗಾಗಿ ಯಾದಗಿರಿಯ ಆಯುಷ್‌ ಆಸ್ಪತ್ರೆ ಬಳಿ ಜನರು ಸಾಲಾಗಿ ನಿಂತಿದ್ದರು
ಗುಳೆಯಿಂದ ವಾಪಾಸು ಬಂದವರ ಜ್ವರ ತಪಾಸಣೆಗಾಗಿ ಯಾದಗಿರಿಯ ಆಯುಷ್‌ ಆಸ್ಪತ್ರೆ ಬಳಿ ಜನರು ಸಾಲಾಗಿ ನಿಂತಿದ್ದರು   

ಯಾದಗಿರಿ: ನಗರದ ಆರ್‌ಟಿಒ ಕಚೇರಿ ಪಕ್ಕದಲ್ಲಿ ಜಿಲ್ಲಾಡಳಿತದಿಂದ ನಿರ್ಗತಿಕರ ಕೇಂದ್ರ ಆರಂಭವಾಗಿದ್ದು, ನಿತ್ಯ ಅನ್ನದಾಸೋಹ ಕಲ್ಪಿಸಲಾಗುತ್ತಿದೆ.

ಜಿಲ್ಲೆಯ ಆರು ಕಡೆ ಕಡೆ ಜಿಲ್ಲಾಡಳಿತದಿಂದ ನಿರ್ಗತಿಕರ ಕೇಂದ್ರ ಆರಂಭಿಸಲಾಗಿದೆ. ಗುರುಮಠಕಲ್‌ನ ಸರ್ಕಾರಿ ಪ್ರಾಥಮಿಕ ಶಾಲೆ, ಹುಣಸಗಿಯ ಮಾಳೂರು, ಕೆಂಭಾವಿಯ ಸಂಜೀವಜನಗರ, ಶಹಾಪುರದ ಆಶ್ರಯ ಕಾಲೊನಿ, ಸುರಪುರದ ದರ್ಬಾರು ಶಾಲೆಯಲ್ಲಿ ಕೇಂದ್ರ ಆರಂಭಿಸಲಾಗಿದೆ.

ಬೇರೆಡೆಯಿಂದ ಗ್ರಾಮೀಣ/ನಗರ ಪ್ರದೇಶಕ್ಕೆ ಬಂದಿರುವವರನ್ನು ಜ್ವರ ತಪಾಸಣೆ ಮಾಡಿ ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ ತಮ್ಮ ಊರುಗಳಿಗೆ ಕಳಿಸಿಕೊಡಲಾಗುತ್ತಿದೆ. ಲಕ್ಷಣಗಳನ್ನು ಹೊಂದಿದವರನ್ನು ಮಾತ್ರ ಕ್ವಾರಂಟೈನ್‌ ಮಾಡಲು ವೈದ್ಯರು ಸೂಚಿಸುತ್ತಿದ್ದಾರೆ.

ADVERTISEMENT

ಸಂಚಾರಿ ಜ್ವರ ತಪಾಸಣೆ ತಂಡ:
‘ಗುಳೆ ಹೋಗಿ ಜಿಲ್ಲೆಗೆ ಆಗಮಿಸಿರುವ ಜನರಿಗೆ ಒಂದು ವೇಳೆ ಜಿಲ್ಲೆಯಲ್ಲಿ ತೆಗೆದಿರುವ ಜ್ವರ ತಪಾಸಣೆ ಕೇಂದ್ರದಲ್ಲಿ ಸ್ಕ್ರೀನಿಂಗ್‌ ಆಗದಿದ್ದರೆ ಸಂಚಾರಿ ಜ್ವರ ತಪಾಸಣಾ ತಂಡದಿಂದ ಅಂಥವನ್ನು ಗುರುತಿಸಿ ತಪಾಸಣೆ ನಡೆಸಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳನ್ನು ಒಳಗೊಂಡ 3 ತಂಡಗಳನ್ನು ರಚಿಸಲಾಗಿದೆ. ಒಂದು ತಂಡದಲ್ಲಿ ನಾಲ್ಕು ಜನರಿದ್ದು, ಇಬ್ಬರು ಪುರುಷರು, ಇಬ್ಬರು ಮಹಿಳೆಯರುಇರಲಿದ್ದಾರೆ. ಇವರ ಮೂಲಕ ತಪಾಸಣೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್-19 ಕೊರೊನಾ ವೈರಾಣುವಿನ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಯಾದಗಿರಿ ಆಯುಷ್‌ ಆಸ್ಪತ್ರೆ, ಭೀಮರಾಯನಗುಡಿ ಯುಕೆಪಿ ಆಸ್ಪತ್ರೆ ಮತ್ತು ಸುರಪುರದ ನಗರ ಆರೋಗ್ಯ ಕೇಂದ್ರದಲ್ಲಿ ಜ್ವರ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ:08473-252580 ಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.