ADVERTISEMENT

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ಕಂದಕೂರ

ಸೈದಾಪುರ: ಮಾದರಿ ನಾಡ ಕಚೇರಿ ಉದ್ಘಾಟನೆ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 15:46 IST
Last Updated 14 ಮಾರ್ಚ್ 2024, 15:46 IST
ಸೈದಾಪುರ ಪಟ್ಟಣದಲ್ಲಿ ಮಾದರಿ ನಾಡ ಕಚೇರಿ ನೂತನ ಕಟ್ಟಡ ಉದ್ಘಾಟನೆ ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು
ಸೈದಾಪುರ ಪಟ್ಟಣದಲ್ಲಿ ಮಾದರಿ ನಾಡ ಕಚೇರಿ ನೂತನ ಕಟ್ಟಡ ಉದ್ಘಾಟನೆ ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು   

ಸೈದಾಪುರ: ‘ನಮ್ಮ ತಂದೆಯ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಕ್ಷೇತ್ರದ ಜನ ನನಗೆ ಆಶೀರ್ವದಿಸಿದ್ದಾರೆ. ಅವರ ಋಣ ತೀರಿಸಲು ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ’ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಪಟ್ಟಣದಲ್ಲಿ ₹ 60 ಲಕ್ಷದ ವೆಚ್ಚದಲ್ಲಿ ಮಾದರಿ ನಾಡ ಕಚೇರಿ ಕಟ್ಟಡ, 2023-24ನೇ ಸಾಲಿನ ಕೆಕೆಆರ್‌ಡಿಬಿಯ ಅಂದಾಜು 50 ಲಕ್ಷ ಅನುದಾನದಲ್ಲಿ ಮುಚ್ಚು ಚರಂಡಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆ ನಿರ್ಮಾಣ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಣ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ ಮಾಡದೇ ಉನ್ನತ ಶಿಕ್ಷಣ ನೀಡಬೇಕು ಎಂದು ಹೇಳಿದರು.

ADVERTISEMENT

‘ಮುಂದಿನ ಐದು ವರ್ಷದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು. ಈಗ ಕೈಗೆತ್ತಿಕೊಂಡ ಕಾಮಗಾರಿಗಳನ್ನು ನಿರ್ದಿಷ್ಟ ಅವಧಿಯೊಳಗೆ ಉತ್ತಮ ಗುಣಮಟ್ಟದಿಂದ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ: ಇಲ್ಲಿನ ಕಡೇಚೂರು-ಬಾಡಿಯಾಲ ಕೈಗಾರಿಕ ಪ್ರದೇಶದಲ್ಲಿ ಆರಂಭವಾಗಿರುವ ಕಾರ್ಖಾನೆಗಳ ಜತೆ ಕೆಲ ದಿನಗಳ ಹಿಂದೆ ಸಭೆ ಮಾಡಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ತಿಳಿಸಲಾಗಿದೆ. ಇವುಗಳನ್ನು ಸ್ಥಳೀಯರು ಉತ್ತಮವಾಗಿ ಬಳಸಿಕೊಂಡು ಗುಳೆ ಹೋಗುವುದನ್ನು ನಿಲ್ಲಿಸಬೇಕು. ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಅಂತಹ ಕೈಗಾರಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.

ಟಾಪರ್‌ ಆಗಿ ಕ್ಷೇತ್ರಕ್ಕೆ ಕೀರ್ತಿ ತನ್ನಿ: ಪ್ರತಿ ಬಾರಿ ಹತ್ತನೇ ಮತ್ತು ಪಿಯುಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆಯ ಹೆಸರು ಕೊನೆಯಲ್ಲಿ ಕಾಣುತ್ತಿರುವುದು ವೈಯಕ್ತಿಕವಾಗಿ ನನಗೆ ಬೇಸರವಿದೆ.  ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಅಭ್ಯಾಸ ಮಾಡಿ ಟಾಪ್ 10ರಲ್ಲಿ ಕಾಣಿಸಿಕೊಳ್ಳಬೇಕು. ಆ ಮೂಲಕ ನಮ್ಮ ಜಿಲ್ಲೆ ಮತ್ತು ಕ್ಷೇತ್ರಕ್ಕೆ ಕೀರ್ತಿ ತರಬೇಕು ಎಂದು ಶಾಸಕ ಕಂದಕೂರ ಮನವಿ ಮಾಡಿದರು.

ಈ ವೇಳೆ ಯಾದಗಿರಿ ತಹಶೀಲ್ದಾರ್‌ ನಾಗಮ್ಮ ಎಂ.ಕಟ್ಟಿಮನಿ, ಉಪ ತಹಶೀಲ್ದಾರ್‌ ದಸ್ತಗಿರಿ ನಾಯಕ್, ಸೈದಾಪುರ ಗ್ರಾ.ಪಂ.ಅಧ್ಯಕ್ಷೆ ಮರೆಮ್ಮ ರೆಡ್ಡೆಪ್ಪ, ಉಪಾಧ್ಯಕ್ಷೆ ಕವಿತಾ ಎಂ ಮಿರಿಯಾಲ್, ಹಿರಿಯ ಮುಖಂಡ ಬಸವರಾಜಪ್ಪ ಗೊಂದಡಗಿ, ಬಸವರಾಜಪ್ಪಗೌಡ ಬಾಲಛೇಡ್, ಯುವ ಮುಖಂಡ ಚಂದ್ರುಗೌಡ ಸೈದಾಪುರ, ಮಲ್ಲೇಶ ಕೂಡಲೂರು, ಸುದರ್ಶನ ಜೈಗ್ರಾಂ, ಬಸರೆಡ್ಡಿ ಹೆಗ್ಗಣಗೇರಾ, ಶಮಿ ಸಾಹುಕಾರ್ ಕಡೇಚೂರು, ಸಂಗರೆಡ್ಡಿಗೌಡ ಸೈದಾಪುರ, ಮಹಿಪಾಲರೆಡ್ಡಿ ಮುನಗಾಲ್, ತಾಯಪ್ಪ ಬದ್ದೇಪಲ್ಲಿ, ಮಾಳಪ್ಪ ಅರಿಕೇರಿ, ಶಿವರಾಜ ಉಡೆದ್, ಕಿರಣಕುಮಾರ, ಶಾಲೆಯ ಶಿಕ್ಷಕರು, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಜರಿದ್ದರು.

ಸೈದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಭೂಮಿಪೂಜೆ ನೆರವೇರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.