ADVERTISEMENT

ಸ್ಕಾಡಾ ಗೇಟ್ ಸ್ಥಿತಿಗತಿ ಅಧ್ಯಯನ, ಸದನ ಸಮಿತಿಯಿಂದ ಕಾಮಗಾರಿಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 12:04 IST
Last Updated 26 ಫೆಬ್ರುವರಿ 2021, 12:04 IST
ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಸ್ಕಾಡಾ ಗೇಟ್ ಕಂಟ್ರೋಲ್ ಕೇಂದ್ರಕ್ಕೆ  ಸದನ ಸಮಿತಿ ತಂಡ ಭೇಟಿ ಪರಿಶೀಲನೆ ನಡೆಸಿದರು
ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಸ್ಕಾಡಾ ಗೇಟ್ ಕಂಟ್ರೋಲ್ ಕೇಂದ್ರಕ್ಕೆ  ಸದನ ಸಮಿತಿ ತಂಡ ಭೇಟಿ ಪರಿಶೀಲನೆ ನಡೆಸಿದರು   

ನಾರಾಯಣಪುರ (ಹುಣಸಗಿ): ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲದ ನವೀಕರಣದ ಬಳಿಕ ಸ್ವಯಂ ಚಾಲಿತ ಸ್ಕಾಡಾ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಈ ಕಾಮಗಾರಿಯು ಎಷ್ಟು ಪ್ರಭಾವಿಯಾಗಿ ಕೆಲಸ ನಿರ್ವಹಿಸಲಾಗುತ್ತದೆ ಹಾಗೂ ಇದು ರೈತರಿಗೆ ಸಹಕಾರಿಯಾಗಿದೆಯೇ ಎಂದು ಪರಿಶೀಲನೆ ನಡೆಸಲು ತಂಡ ಭೇಟಿ ನೀಡಿದೆ ಎಂದು ಖರ್ಚು ವೆಚ್ಚಗಳ ಸದನ ಸಮಿತಿ ಅಧ್ಯಕ್ಷ, ಶಾಸಕ ಅಭಯ ಪಾಟೀಲ ಹೇಳಿದರು.

ಹುಣಸಗಿ ತಾಲ್ಲೂಕಿನ ನಾರಾಯಣಪುರದ ಎಡದಂಡೆ ಮುಖ್ಯ ಕಾಲುವೆಯ ಎಚ್.ಬಿ.ಸಿ ಗೆ ಈಗಾಲಗೇ ಸ್ಕಾಡಾ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಅವುಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವುದಾಗಿ ಹೇಳಿದರು.

ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಶಾಸಕ ಗೋವರ್ಧನ, ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಚಿಣಿ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದುಕೊಂಡಿತು. ಮುಖ್ಯ ಕಾಲುವೆಯ 3ನೇ ಗೇಟನ್ನು ನಿಯಂತ್ರಣ ಕೊಠಡಿಯಿಂದಲೇ ಕಾರ್ಯಾಚರಣೆ ಮಾಡಿ ನೀರಿನ ಹರಿವಿನ ಸ್ಥಿತಿಯ ಕುರಿತು ಪರಿಶೀಲನೆ ನಡೆಸಿದರು.

ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ ಎಸ್.ರಂಗಾರಾಂ, ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್ ನಾಯ್ಕೋಡಿ ಸ್ಕಾಡಾ ಗೇಟ್‌ಗಳ ಮಾಹಿತಿ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮರೇಗೌಡ ಬಯ್ಯಾಪುರ, ಸರ್ಕಾರದಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವಿವಿಧ ಯೋಜನೆಯಡಿ ಸಾಕಷ್ಟು ಅನುದಾನ ಬಿಡಗಡೆ ಮಾಡಲಾಗಿದೆ. ಆದು ಎಷ್ಟು ಸಮರ್ಪಕವಾಗಿ ಸದ್ಬಳಕೆಯಾಗುತ್ತಿದೆ, ರೈತರಿಗೆ ಸಹಕಾರಿಯಾಗಿದೆಯೇ, ಯಾವ ಭಾಗದಲ್ಲಿ ತೊಂದರೆ ಇದೆ, ಹಣ ಪೋಲಾಗುತ್ತಿದೆಯೇ ಎಂದು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ADVERTISEMENT

ಬಳಿಕ ಬಲಶೆಟ್ಟಿಹಾಳ ಗ್ರಾಮದ ಬಳಿಯ ಕಾಲುವೆ ಜಾಲಕ್ಕೆ ಅಳವಡಿಸಲಾಗಿದ್ದ ಗೇಟ್ ಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.