ADVERTISEMENT

ಯಾದಗಿರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ಭಯವಾಗಿ ಎದುರಿಸಿ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಐ ಶಾಂತಗೌಡ ಪಾಟೀಲ ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 16:26 IST
Last Updated 24 ಮಾರ್ಚ್ 2022, 16:26 IST
ಶಾಂತಗೌಡ ಪಾಟೀಲ
ಶಾಂತಗೌಡ ಪಾಟೀಲ   

ಯಾದಗಿರಿ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಅವರು ಗುರುವಾರ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದ ಸಂಶಯಗಳನ್ನು ಪರಿಹರಿಸಿದರು.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಹೇಗಿದೆ? ಕಳೆದ ಬಾರಿಗಿಂತ ಈ ಸಲ ಪರೀಕ್ಷಾ ವಿಧಾನ ಹೇಗಿರುತ್ತದೆ? ಪರೀಕ್ಷೆ ಎದುರಿಸುವುದು ಹೇಗೆ? ಕೋವಿಡ್‌ ಮುನ್ನಚ್ಚರಿಕೆ ಕ್ರಮಗಳೇನು ಮುಂತಾದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಶಾಲೆಗಳಲ್ಲಿನ ಸಮಸ್ಯೆಗಳು, ಶಿಕ್ಷಕರ ಬದಲಾವಣೆ, ಬಾಹ್ಯ ಅಭ್ಯರ್ಥಿಗಳು ಪರೀಕ್ಷೆ ಎದುರಿಸುವ ಬಗ್ಗೆಯೂ ಅವರು ಮಾಹಿತಿ ನೀಡಿದರು.

l ಪ್ರಶ್ನೆ: ಶಿವನಗೌಡ ಪಾಟೀಲ, ಕೆಂಭಾವಿ: ಕೆಂಭಾವಿಯ ಜ್ಯೂನಿಯರ್‌ ಕಾಲೇಜಿನ ಜೊತೆಗೆ ಜಿಲ್ಲೆಯಲ್ಲಿ ಎಲ್ಲ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

ADVERTISEMENT

ಉತ್ತರ: ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕುಡಿವ ನೀರಿನ ಮಾಡುವಂತೆ ಈಗಾಗಲೇ ನಮ್ಮ ಅಧಿಕಾರಿಗಳಿಗೆ ಸೂಚಿಸಲಾಗಿದೆ.

l ರಾಘವೇಂದ್ರ ಭಕ್ರಿ, ಸುರಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಹೇಗೆ ಮಾಡಿಕೊಂಡಿದ್ದೀರಿ? ಕೋವಿಡ್ ನಿಯಮಗಳೆನು?
ಉ: ಮಾರ್ಚ್ 28ರಂದು ಪ್ರಾರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಕರ್ಯಗಳು ಕಲ್ಪಿಸಲು ಸೂಚಿಸಲಾಗಿದೆ. ಕೋವಿಡ್ ನಿಯಮದಂತೆ ಪರೀಕ್ಷೆ ನಡೆಯುವುದು.

l ಬಸವರಾಜ ದೊಡ್ಮನಿ, ಮುಡಬೂಳ: ನಮ್ಮ ಗ್ರಾಮದ ಶಾಲೆಯ ಮುಖ್ಯ ಗುರುಗಳನ್ನು ವರ್ಗಾವಣೆ ಮಾಡುವಂತೆ ಮನವಿಪತ್ರ ಸಲ್ಲಿಸಿದ್ದೇವೆ. ಅದರ ಕುರಿತು ಇನ್ನೂ ಯಾವುದೇ ಮಾಹಿತಿ ಬಂದಿಲ್ಲ?
ಉ: ನೀವು ನೀಡಿದ ದೂರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತರಲಾಗಿದೆ. ಅವರು ತನಿಖೆ ನಡೆಸಿ, ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ.

l ಮಂಜುನಾಥ, ಸುರಪುರ: ಬಾಹ್ಯ ಅಭ್ಯರ್ಥಿಗಳು ಯಾವ ಪರೀಕ್ಷೆ ಕೇಂದ್ರದಲ್ಲಿ ಬರೆಯಬೇಕು?
ಉ: ಬಾಹ್ಯ ಅಭ್ಯರ್ಥಿಗಳಿಗೆ ಕೇಂದ್ರ ಜಿಲ್ಲಾ ಕೇಂದ್ರಸ್ಥಾನದಲ್ಲಿ ಪರೀಕ್ಷೆ ಕೇಂದ್ರ ಇರಲಿದೆ. ಅಲ್ಲಿ ಪರೀಕ್ಷೆ ಬರೆಯಬೇಕು.

ದೇವಿಂದ್ರಪ್ಪ ಚಲುವಾದಿ, ಗೌಡೂರು: ನಮ್ಮ ಗ್ರಾಮದ ಶಾಲೆಯ ಜಾಗದ ಕುರಿತು ಇರುವ ಸಮಸ್ಯೆ ಪರಿಹರಿಸಿ.
ಉ: ನಿಮ್ಮ ಗ್ರಾಮದ ಶಾಲೆಯ ಜಾಗದ ಕುರಿತು ಈಗಾಗಲೇ ಕೋರ್ಟ್‌ನಲ್ಲಿದೆ. ತೀರ್ಮಾನ ಬರುವವರೆಗೂ ಕಾಯಬೇಕು.

l ಶರಭು ನಾಟೇಕಾರ, ಯಾದಗಿರಿ: ಪರೀಕ್ಷೆ ವೇಳೆ ಹಿಜಾಬ್ ಸಮಸ್ಯೆ ತಲೆದೋರಿದರೆ, ಏನು ಮಾಡುವಿರಿ?
ಉ: ಜಿಲ್ಲೆಯ ಯಾವುದೇ ಪ್ರೌಢಶಾಲೆಯಲ್ಲಿ ಹಿಜಾಬ್ ಕುರಿತು ಸಮಸ್ಯೆ ಬಂದಿಲ್ಲ. ನ್ಯಾಯಾಲಯದ ಆದೇಶ ಅನುಸಾರ ಪರೀಕ್ಷೆ ನಡೆಸುತ್ತೇವೆ.

l ಬಸವರಾಜ, ಗುರಮಠಕಲ್: ಪ್ರವೇಶಪತ್ರದಲ್ಲಿ ನನ್ನ ಹೆಸರು ಬದಲಾವಣೆಯಾಗಿದೆ. ಅದನ್ನು ಹೇಗೆ ಸರಿಪಡಿಸಬೇಕು ?
ಉ: ಪ್ರಾಥಮಿಕ ಶಾಲೆಯಲ್ಲಿ ಇದ್ದ ಹೆಸರಿನಂತೆ ನಿಮ್ಮ ಹೆಸರನ್ನು ಪರೀಕ್ಷಾ ಮಂಡಳಿಗೆ ಕಳಿಸಿರುತ್ತಾರೆ. ಅದರಂತೆ ಪ್ರವೇಶಪತ್ರ ಬರುತ್ತದೆ. ಹೆಸರನ್ನು ಬದಲಿಸಬೇಕಿದ್ದರೆ, ಕೋರ್ಟ್‌ಗೆ ಹೋಗಬೇಕು.

l ರಾಘವೇಂದ್ರ, ಸುರಪುರ: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುತ್ತಾರಾ?
: ಎಲ್ಲಾ ಪರೀಕ್ಷೆ ಕೇಂದ್ರದ ಎದುರು ಮತ್ತು ಮುಖ್ಯ ಅಧೀಕ್ಷಕರ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇರುತ್ತದೆ.

l ಸಂತೋಷ, ಸಗರ: ಶಾಲೆ ತಡವಾಗಿ ಆರಂಭವಾಗಿದೆ. ಇದರಿಂದ ಪರೀಕ್ಷೆ ಬರೆಯಲು ತೊಂದರೆ ಆಗುವುದಿಲ್ಲವೇ? ಉ: ಎಲ್ಲಾ ವಿಷಯದಲ್ಲಿ ಶೇ 20ರಷ್ಟು ಕಡಿಮೆ ಮಾಡಿ, ಶೇ 80ರಷ್ಟು ಪಠ್ಯಾಧಾರಿತ ವಿಷಯ ಬೋಧಿಸಲಾಗಿದೆ. ಅದರಂತೆ ಪರೀಕ್ಷೆ ನಡೆಸಲಾಗುತ್ತದೆ. ಭಯಪಡದೆ ಪರೀಕ್ಷೆ ಬರೆಯಬಹುದು.

l ರಾಜಾ ಅಪ್ಪರಾವ ನಾಯಕ, ಸುರಪುರ: ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಅದರಲ್ಲೂ ಯಾದಗಿರಿ ಜಿಲ್ಲೆಯು ಅತಿ ಹಿಂದುಳಿದ ಜಿಲ್ಲೆಯಾಗಿದೆ. ಪ್ರಗತಿ ಯಾವಾಗ ಆಗುತ್ತದೆ?
ಉ: ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮಾದರಿ ಪರೀಕ್ಷೆ ನಡೆದಿದೆ. ಪರೀಕ್ಷೆಗೆ ಮಕ್ಕಳ ಹಾಜರಾತಿ ಕಡಿಮೆಯಾಗುತ್ತದೆ. ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಪರೀಕ್ಷೆಗೆ ಹಾಜರಾಗಲು ಕ್ರಮ ಕೈಗೊಳ್ಳಲಾಗಿದೆ.

l ಪರಮಣ್ಣ, ಕಕ್ಕೇರಾ: ಕೋವಿಡ್‌ ನಿಯಮದಂತೆ ಪರೀಕ್ಷಾ ನಡೆಯುವುದೇ?
ಉ:
ಕಳೆದ ವರ್ಷದಂತೆಯೇ ಈ ವರ್ಷವೂ ಕೋವಿಡ್‌ನ ಎಲ್ಲ ಕ್ರಮಗಳನ್ನು ಅಳವಡಿಸಿಕೊಂಡು ಪರೀಕ್ಷೆ ನಡಸಲಾವುದು. ಆರೋಗ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಇರುತ್ತಾರೆ.

l ಈರಣ್ಣ ಮಕಾಶಿ, ಬೀರನೂರ: ಪರೀಕ್ಷಾ ಕೇಂದ್ರದಲ್ಲಿ ಯಾವ ರೀತಿ ಕೊರೊನಾ ನಿಯಮಗಳು ಇರುತ್ತವೆ?
ಉ:
ಒಂದು ಕೋಣೆಯಲ್ಲಿ 20 ಮಕ್ಕಳಿಗೆ ಆಸನದ ವ್ಯವಸ್ಥೆ ಇರಲಿದೆ. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು. ಪರಸ್ಪರ ಅಂತರ ಕಾಪಾಡಿಕೊಂಡು ಪರೀಕ್ಷೆ ನಡೆಸಲಾಗುವುದು.

l ಅರವಿಂದ, ಸಗರ: ನಮ್ಮ ಗ್ರಾಮದ ಪರೀಕ್ಷೆ ಕೇಂದ್ರದಲ್ಲಿ ಸೌಲಭ್ಯಗಳು‌ ಇಲ್ಲ. ಮೈದಾನ ಅಚ್ಚುಕಟ್ಟು ಇಲ್ಲ.
ಉ:
ಸೌಲಭ್ಯಗಳ ಕೊರತೆ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತನ್ನಿ. ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳುತ್ತಾರೆ. ಅಧಿಕಾರಿಗಳಿಗೂ ಇದರ ಬಗ್ಗೆ ತಿಳಿಸುವೆ.

l ಛಾಯಾ, ಚಾಮನಾಳ: ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವುದು ಹೇಗೆ?
ಉ:
ನೀವು ಸರಿಯಾಗಿ ಓದಿದ್ದರೆ ಯಾವುದೇ ಭಯ ಪಡುವುದು ಬೇಡ. ನೀವು ಇತ್ತೀಚೆಗೆ ಬರೆದ ಪೂರ್ವ ಸಿದ್ಧತಾ ಪರೀಕ್ಷೆ ಮಾದರಿಯಲ್ಲೇ ಮುಖ್ಯ ಪರೀಕ್ಷೆಯು ಇರಲಿದೆ.

l ಭಾಗ್ಯಶ್ರೀ, ಯಾದಗಿರಿ: ಯಾದಗಿರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಸುಧಾರಿಸಲು ಯಾವುದಾದರೂ ವಿಶೇಷ ತರಬೇತಿ ಕಾರ್ಯಕ್ರಮ ನಡೆಸಿದ್ದೀರಾ?
ಉ:
ಫಲಿತಾಂಶ ಸುಧಾರಿಸಲೆಂದೇ ಈಗಾಗಲೇ ಮೂರು ಪರೀಕ್ಷೆ ನಡೆಸಲಾಗಿದೆ. ಅದರಂತೆ ಮುಂದಿನ ಪರೀಕ್ಷೆ ನಡೆಸಲಾಗುವುದು.

l ಲಕ್ಷ್ಮಿ ಕೋಳಿವಾಡ, ಯಾದಗಿರಿ: ಪರೀಕ್ಷೆ ಕೇಂದ್ರಕ್ಕೆ ಕೊರೊನಾ ಲಸಿಕೆ ಪ್ರಮಾಣಪತ್ರ ತರಬೇಕೆ?
ಉ:
ಕೊರೊನಾ ಲಸಿಕೆ ಪ್ರಮಾಣ ಪತ್ರ ತರುವುದು ಬೇಡ. ಕೇವಲ ಪ್ರವೇಶಪತ್ರ ತಂದರೆ ಸಾಕು.

l ದೇವರಾಜ ನಂದಿಹಳ್ಳಿ: ನನ್ನ ಹಾಜರಾತಿ ಸಂಖ್ಯೆ ಕಡಿಮೆ ಇದೆ. ಇದರಿಂದ ನನಗೆ ಪರೀಕ್ಷೆಗೆ ಹಾಜರಾಗಲು ಪ್ರವೇಶಪತ್ರ ಸಿಗುವುದೆ?
ಉ:
ನೀವು ಶಾಲೆಗೆ ಹೋಗಿ ಶಿಕ್ಷಕರಿಂದ ಪ್ರವೇಶ ಪತ್ರ ಪಡೆಯಿರಿ.

l ಸಂಜಯಕುಮಾರ ಕೌಲಿ, ಮುಂಡರಗಿ: ಕೆಲ ಖಾಸಗಿ ಶಾಲೆಗಳಲ್ಲಿ ಶುಲ್ಕ ತುಂಬಿದರೆ ಮಾತ್ರ ಪ್ರವೇಶ ಪತ್ರ ನೀಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.
ಉ:
ಯಾವ ಶಾಲೆಗಳೂ ಪ್ರವೇಶ ಪತ್ರ ನಿರಾಕರಿಸುವಂತಿಲ್ಲ. ಆದರೆ, ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಶುಲ್ಕದಿಂದಲೇ ಅಧ್ಯಾಪಾಕರಿಗೆ ವೇತನ ಇನ್ನಿತರ ಸೌಲಭ್ಯಗಳು ನೀಡುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಶುಲ್ಕ ಭರಿಸಬೇಕು. ಒಂದು ವೇಳೆ ಪ್ರವೇಶಪತ್ರ ನೀಡದಿದ್ದರೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು

***

ಪಠ್ಯ ಶೇ 20ರಷ್ಟು ಕಡಿತ

2021ರ ಆಗಸ್ಟ್‌ 21ರಿಂದ ಶಾಲೆಗಳು ಪುನಾರಂಭಗೊಂಡಿದ್ದು, ಇದರಿಂದ ಪಠ್ಯಪುಸ್ತಕ ಶೇ 20ರಷ್ಟ ಕಡಿತ ಮಾಡಲಾಗಿದೆ. ಕೋವಿಡ್‌ ಕಾರಣ ಜೂನ್‌, ಜುಲೈನಲ್ಲಿ ಶಾಲೆ ಆರಂಭ ತಡವಾಗಿದೆ.

ಕಳೆದ ಬಾರಿ ಕೋವಿಡ್‌ ಕಾರಣ ಬಹುಆಯ್ಕೆಯ ಪ್ರಶ್ನೆ ಪತ್ರಿಕೆ ಇತ್ತು. ಆದರೆ, ಈ ಬಾರಿ ಅದರ ಬದಲು ಮೊದಲಿನಂತೆ ಪ್ರಶ್ನೆಪತ್ರಿಕೆ ಇರಲಿದೆ. ಕೋರ್‌ ಸಬ್ಜೆಕ್ಟ್‌ಗಳಿಗೆ 3 ಗಂಟೆ 15 ನಿಮಿಷ ಪರೀಕ್ಷಾ ಅವಧಿ ಇರಲಿದೆ. 15 ನಿಮಿಷ ಪ್ರಶ್ನೆ ಪತ್ರಿಕೆ ಓದಿಕೊಳ್ಳಲು ಸಮಯ ನಿಗದಿ ಮಾಡಲಾಗಿದೆ. ಕಳೆದ ಬಾರಿ ಕೋವಿಡ್‌ ಕಾರಣ ಹೆಚ್ಚುವರಿ 15 ನಿಮಿಷಗಳ ಅವಧಿ ಇರಲಿಲ್ಲ.

ನೇರ ವಿದ್ಯಾರ್ಥಿಗಳು 80 ಅಂಕಗಳಿಗೆ ಉತ್ತರಿಸಬೇಕಿದೆ. ಶೇ 20ರಷ್ಟು ಪಠ್ಯೇತರ ಚಟುವಟಿಕೆಗೆ ಇರಲಿದೆ. ಬಾಹ್ಯ ಅಭ್ಯರ್ಥಿಗಳು 100 ಅಂಕಗಳಿಗೆ ಉತ್ತರಿಸಬೇಕು.
*******
ಹಾಲ್‌ ಟಿಕೆಟ್‌ ತೋರಿಸಿದರೆ ಉಚಿತ ಪ್ರಯಾಣ

ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಪ್ರವೇಶಪತ್ರ ತೋರಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಬಸ್‌ ಮಾರ್ಗ ವ್ಯವಸ್ಥೆಯಿರದ ಕಡೆ ವಿದ್ಯಾರ್ಥಿಗಳೇ ವ್ಯವಸ್ಥೆ ಕಲ್ಪಿಸಿಕೊಂಡು ಬರಬೇಕು.

ಹಾಜರಾತಿ ಕಡ್ಡಾಯವಲ್ಲ

ಕೋವಿಡ್‌ ಕಾರಣ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಹಾಜರಾತಿ ಕಡಿಮೆ ಇದೆ ಎಂದು ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಯಾರಿಗೂ ಪರೀಕ್ಷಾ ಪ‍್ರವೇಶ ಪತ್ರ ನಿರಾಕರಿಸುವಂತಿಲ್ಲ. ಈ ಬಾರಿ ಹಾಜರಾತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ.
***
ಪರೀಕ್ಷೆಗೆ ಅಗತ್ಯ ಸಿದ್ಧತೆ

ಜಿಲ್ಲೆಯಲ್ಲಿ 122 ಸರ್ಕಾರಿ, 15 ಅನುದಾನಿತ, 78 ಅನುದಾನ ರಹಿತ, 29 ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿ ಒಟ್ಟು 244 ಪ್ರೌಢಶಾಲೆಗಳಿವೆ.

71 ಪರೀಕ್ಷಾ ಕೇಂದ್ರಕ್ಕೆ ತಲಾ ಒಬ್ಬರನ್ನು ಮುಖ್ಯ ಅಧೀಕ್ಷಕರನ್ನು ನೇಮಿಸಲಾಗಿದೆ. ಪ್ರಶ್ನೆಪತ್ರಿಕೆ ಕಸ್ಟೋಡಿಯನ್ 71, ಜಾಗೃತದಳ ಅಧಿಕಾರಿಗಳು 71, ಮೊಬೈಲ್ ಸ್ವಾಧೀನಾಧಿಕಾರಿಗಳಾಗಿ 71 ಮಂದಿಯನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಒಟ್ಟು 4 ಜಾಗೃತ ತಂಡಗಳನ್ನು ನೇಮಿಸಲಾಗಿದೆ.

250 ವಿದ್ಯಾರ್ಥಿಗಳಿಗೆ ಒಂದು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. 20 ವಿದ್ಯಾರ್ಥಿಗಳಿಗೆ 1 ಕೋಣೆ ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 923 ಕೋಣೆಗಳನ್ನು ಪರೀಕ್ಷೆಗಾಗಿ ನಿಗದಿ ಮಾಡಲಾಗಿದೆ.
***
ಕೋವಿಡ್‌ ನಿಯಮ ಪಾಲನೆ

ಪ್ರಮಾಣಿತ ಕಾರ್ಯನಿರ್ವಹಣಾ ಪದ್ಧತಿ (ಎಸ್‌ಒಪಿ) ನಿಯಮ ಈ ಸಲವೂ ಮುಂದುವರಿಯಲಿದೆ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪರಸ್ಪರ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿ ಮುಖ್ಯಸ್ಥರು ಸೇರಿ ಎಲ್ಲರೂ ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ವಿದ್ಯಾರ್ಥಿಗಳು ಕೇಂದ್ರಕ್ಕೆ ಬರುವಾಗ ಮಾಸ್ಕ್‌ ಧರಿಸಬೇಕು. ಒಂದು ವೇಳೆ ಮರೆತು ಬಂದರೆ ಪರೀಕ್ಷಾ ಕೇಂದ್ರದಲ್ಲಿ ನೀಡಲಾಗುವುದು. ಈಗಾಗಲೇ ಪೊಲೀಸ್‌, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಸಭೆ ನಡೆಸಿ ಪರೀಕ್ಷೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
***
ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ
ಮಾರ್ಚ್‌ 28; ಪ್ರಥಮ ಭಾಷೆ
ಮಾರ್ಚ್‌ 30; ದ್ವಿತೀಯ ಭಾಷೆ
ಏಪ್ರಿಲ್‌ 04; ಗಣಿತ
ಏಪ್ರಿಲ್‌ 06; ಸಮಾಜ ವಿಜ್ಞಾನ
ಏಪ್ರಿಲ್‌ 08; ತೃತೀಯ ಭಾಷೆ
ಏಪ್ರಿಲ್‌ 11;ವಿಜ್ಞಾನ
***
ಜಿಲ್ಲೆಯ ಪರೀಕ್ಷಾ ಕೇಂದ್ರಗಳ ವಿವರ
ತಾಲ್ಲೂಕು;ಸಂಖ್ಯೆ
ಯಾದಗಿರಿ:32
ಶಹಾಪುರ: 21
ಸುರಪುರ:18
ಒಟ್ಟು;71

***

ಫೋನ್‌ ಇನ್‌ ಕಾರ್ಯಕ್ರಮ ನಿರ್ವಹಣೆ:

ಬಿ.ಜಿ.ಪ್ರವೀಣಕುಮಾರ, ರಾಜಕುಮಾರ ನಳ್ಳಿಕರ, ಪರಮೇಶ ರೆಡ್ಡಿ, ದೇವಿಂದ್ರಪ್ಪ ಕ್ಯಾತನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.