ADVERTISEMENT

ಯಾದಗಿರಿ: ಮಳೆ ಮಾಪನ ನೀಡುವ ಮಾಹಿತಿ ಗೊಂದಲ

ಕೆಎಸ್‌ಎನ್‌ಡಿಎಂಸಿ, ಹವಾಮಾನ, ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 17:05 IST
Last Updated 1 ಅಕ್ಟೋಬರ್ 2020, 17:05 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಮಳೆ ಮಾಪನ ಪರಿಶೀಲಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಮಳೆ ಮಾಪನ ಪರಿಶೀಲಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ   

ಯಾದಗಿರಿ: ಜಿಲ್ಲೆಯಲ್ಲಿ ಮಳೆ ಮಾಹಿತಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳು ಹಲವಾರು ಗೊಂದಲಗಳಿಗೆ ಕಾರಣವಾಗಿವೆ. ಸಾರ್ವಜನಿಕರು, ರೈತರು ಯಾವುದನ್ನು ಪರಿಗಣಿಸಬೇಕು ಎನ್ನುವ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ), ಹವಾಮಾನ ಇಲಾಖೆ ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಅಂಕಿ ಅಂಶ ವಿಭಿನ್ನವಾಗಿದ್ದು, ಜನತೆಗೆ ಗೊಂದಲು ಉಂಟು ಮಾಡುತ್ತಿವೆ.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಪಂಚಾಯಿತಿ ಕೇಂದ್ರಗಳಲ್ಲಿ ಮಳೆ ಮಾಪಕ ಮತ್ತು ದೂರಸ್ತ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ,ಹವಾಮಾನ ಇಲಾಖೆ ವಿವಿಧ ತಾಲ್ಲೂಕು, ಹೋಬಳಿಗಳಲ್ಲಿ ಮಳೆ ಮಾಪನ ಕೇಂದ್ರಗಳನ್ನು ಹೊಂದಿದ್ದು, ಇವುಗಳ ಅಂಕಿ ಅಂಶಗಳು ಬೇರೆಬೇರೆಯಾಗಿರುತ್ತವೆ ಎನ್ನುವುದು ಸಾರ್ವಜನಿಕರಆರೋಪ. ಹವಾಮಾನ ಇಲಾಖೆ ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಅಂಕಿ ಅಂಶಗಳುನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ ಅಂಶಗಳಿಗೆತದ್ವಿರುದ್ಧವಾಗಿರುತ್ತವೆ.

ADVERTISEMENT

ಈಚೆಗೆ ಶಹಾಪುರ ತಾಲ್ಲೂಕಿನಲ್ಲಿ ಸುರಿದ ಭಾರೀ 300 ಎಂಎಂ ಮಳೆಯಾಗಿದೆ ಎಂದು ತಹಶೀಲ್ದಾರ್‌ ಕಚೇರಿಯಲ್ಲಿ ಅಳವಡಿಸಿರುವ ಮಳೆ ಮಾಪನದಿಂದ ಅಳೆದು ಹೇಳಲಾಗಿತ್ತು. ಆದರೆ, ಸಂಜೆಬಂದ ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ 152 ಎಂಎಂ ಮಳೆ ದಾಖಲಾಗಿದೆ ಎಂದು ತಿಳಿಸಿತ್ತು. ಇದರಿಂದ ಕಳೆದ ತಿಂಗಳಲ್ಲಿಯೂ ಮಳೆ ಮಾಹಿತಿ ಅಂಕಿಗಳು ವಿಭಿನ್ನವಾಗಿದ್ದವು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

‘ಈಚೆಗೆ ಸುರಿದ ಮಳೆಯನ್ನು ಮೂರು ಇಲಾಖೆಯಗಳು ಒಂದೊಂದು ರೀತಿಯ ವಿವರಣೆಯೊಂದಿಗೆ ನೀಡಿದ್ದವು. ಇದರಿಂದ ಯಾವುದು ಸರಿ, ಯಾವುದು ತಪ್ಪು ಎನ್ನುವ ಗೊಂದಲ ಉಂಟಾಗಿದೆ’ ಎಂದು ಕಾಂಗ್ರೆಸ್‌ ಯುವ ಮುಖಂಡ ಡಾ.ಭೀಮಣ್ಣ ಮೇಟಿ ತಿಳಿಸುತ್ತಾರೆ.

ಹವಾಮಾನ ಇಲಾಖೆ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸಿದೆ. ಇವುಗಳಲ್ಲಿ ಬಹಳಷ್ಟುನಿಖರ ಮಾಹಿತಿ ಸಿಗುವುದಿಲ್ಲ.ಈ ಕೇಂದ್ರಗಳಲ್ಲಿ ದಾಖಲಾಗುವ ಮಾಹಿತಿಯನ್ನು ನಿಯೋಜಿತ ವ್ಯಕ್ತಿಯೊಬ್ಬರು ತಾಲ್ಲೂಕು ಕಚೇರಿಗೆ ಕಳಿಸುತ್ತಾರೆ. ಕೆಲವೊಮ್ಮೆ ಮಾಹಿತಿಯೇ ದಾಖಲಾಗುವುದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಮಳೆ ಅಂಕಿ ಅಂಶ ಸಮರ್ಪಕವಾಗಿ ದಾಖಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿಯೇ ಅಂಕಿ ಅಂಶದಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಗ್ರಾಮ ಪಂಚಾಯಿತಿಗಳನ್ನು ಮಳೆ ಮಾಪನ ಕೇಂದ್ರ ಅಳವಡಿಸಿದೆ. ಇದರಿಂದ ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಮಳೆಯಾಗಿದೆ ಎನ್ನುವ ನಿಖರ ಮಾಹಿತಿ ಸಿಗುತ್ತಿದೆ. ಆದರೆ, ಹವಾಮಾನ ಇಲಾಖೆ,ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ತಾಲ್ಲೂಕು, ಹೋಬಳಿಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದರಿಂದ ಸರಿಯಾದ ಅಂಕಿ ಅಂಶ ಸಿಗುವುದಿಲ್ಲ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

‘ರಾಜ್ಯ ಸರ್ಕಾರ ಮಳೆ ಮಾಪನ, ಬೆಳೆ ಪರಿಹಾರ ಮತ್ತು ಇತರೆ ವಿಷಯಗಳಿಗೆ ಕೆಎಸ್‌ಎನ್‌ಡಿಎಂಸಿ ಮಾಹಿತಿಯನ್ನೇ ಅಧಿಕೃತ ಎಂದು ಪರಿಗಣಿಸುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸಿದೆ. ಆದರೆ, ಅಧಿಕಾರಿಗಳೇ ಅನುಸರಿಸುತ್ತಿರುವುದೇ ಬೇರೆಯಾಗಿದೆ’ ಎನ್ನುತ್ತಾರೆ ರೈತ ಮುಖಂಡ ಮಲ್ಲಿಕಾರ್ಜುನ ಕರಣಗಿ.

ಬರ, ಅತಿವೃಷ್ಟಿಯಿಂದ ಎಷ್ಟು ಹಾನಿಯಾಗಿದೆ ಎಂದು ಅಂದಾಜಿಸಲು ಮತ್ತು ಬೆಳೆ ಪರಿಹಾರ ನಿರ್ಧರಿಸಲು ಮಳೆ ಅಂಕಿ ಅಂಶವೇ ಮಾನದಂಡ. ಆದರೆ, ಸರ್ಕಾರದ ಅಧಿಕೃತ ಸಂಸ್ಥೆಗಳ ಅಂಕಿ ಅಂಶಗಳ ನಡುವೆ ಭಾರಿ ವ್ಯತ್ಯಾಸ ಇರುವುದರಿಂದ ಜನಸಾಮಾನ್ಯರಿಗೆ ಗೊಂದಲ ಏರ್ಪಟ್ಟಿದೆ.

***

ಜಿಲ್ಲೆಯಲ್ಲಿರುವ ಮಳೆ ಮಾಪನ ಕೇಂದ್ರಗಳು

ಹಳೆ ತಾಲ್ಲೂಕುಗಳನ್ನು ಒಳಗೊಂಡಂತೆ ಯಾದಗಿರಿ ತಾಲ್ಲೂಕಿನಲ್ಲಿ ಯಾದಗಿರಿ, ಸೈದಾಪುರ, ಗುರುಮಠಕಲ್‌, ಬಳಿಚಕ್ರ, ಹತ್ತಿಕುಣಿ, ಕೊಂಕಲ್‌, ಶಹಾಪುರ ತಾಲ್ಲೂಕಿನಲ್ಲಿ ಶಹಾಪುರ, ಗೋಗಿ, ಭೀಮರಾಯನಗುಡಿ, ಹಯಾಳ್ಯ (ಬಿ), ವಡಗೇರಾ, ದೋರಹನಳ್ಳಿ, ಹತ್ತಿಗೂಡೂರು, ಸುರಪುರ ತಾಲ್ಲೂಕಿನಲ್ಲಿ ಸುರಪುರ, ಕಕ್ಕೇರಾ, ಕೋಡೆಕಲ್‌, ನಾರಾಯಣಪುರ, ಹುಣಸಗಿ, ಕೆಂಭಾವಿಯಲ್ಲಿ ಹವಾಮಾನ ಇಲಾಖೆಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಿದೆ.

***

ಸದ್ಯ ಮಳೆ ಮಾಪನವನ್ನುಹಸ್ತಚಾಲಿತವಾಗಿ ಮಾಡಲಾಗುತ್ತಿದೆ.ಈ ಬಗ್ಗೆ ಪರಿಶೀಲಿಸಿ ಸೂಕ್ತ ಮಾಹಿತಿ ನೀಡಲಾಗುವುದು ಚನ್ನಮಲ್ಲಪ್ಪ ಘಂಟಿ, ತಹಶೀಲ್ದಾರ್ ಯಾದಗಿರಿ

***

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ನೀಡುವ ಮಾಹಿತಿಯೇ ಸರಿಯಾಗಿದ್ದು, ಇದನ್ನು ಅನುಸರಿಸಬೇಕು,ಡಾ.ಶಾಂತವೀರಯ್ಯ, ವಿಷಯ ತಜ್ಞ, ಕೃಷಿ ಹವಾಮಾನ ಶಾಸ್ತ್ರ, ಕವಡಿಮಟ್ಟಿ

***

ಕೆಎಸ್‌ಎನ್‌ಡಿಎಂಸಿ ಕಡೆಯಿಂದ ಮಾಹಿತಿಯನ್ನು ನಾವು ನೀಡುತ್ತೇವೆ. ಆದರೆ, ಗೊಂದಲ ಉಂಟಾಗುವ ಬಗ್ಗೆ ಪರಿಶೀಲಿಸಲಾಗುವುದು

ಸತೀಶ್ ವಾಲಿ, ಸಹಾಯಕ ನಿರ್ದೇಶಕ, ಜಿಲ್ಲಾ ಸಂಖ್ಯೀಕ ಕಚೇರಿ

***

ಮಳೆ ಮಾಪನದಲ್ಲಿ ನಿಖರ ಅಂಕಿ ಅಂಶ ನೀಡುವ ಮೂಲಕ ಜನಸಾಮಾನ್ಯರ ಗೊಂದಲ ಪರಿಹರಿಸಬೇಕು. ಇಲ್ಲದಿದ್ದರೆ ಯಾವುದನ್ನು ನಂಬದ ಸ್ಥಿತಿಗೆ ಬರದಂತೆ ಆಗುತ್ತದೆ

ಡಾ.ಭೀಮಣ್ಣ ಮೇಟಿ, ಯುವ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.