ADVERTISEMENT

ಯಾದಗಿರಿ| ಕಾಂಗ್ರೆಸ್‌ ಶಾಸಕರ ಅಮಾನತಿಗೆ ಒತ್ತಾಯ: ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 7:12 IST
Last Updated 25 ಜನವರಿ 2026, 7:12 IST
ಯಾದಗಿರಿ ನಗರದಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಯಾದಗಿರಿ ನಗರದಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಯಾದಗಿರಿ: ವಿಧಾನಸೌಧದಲ್ಲಿ ರಾಜ್ಯಪಾಲರಿಗೆ ಅಗೌರವ ತೋರಿ, ಗೂಂಡಾಗಿರಿ ಪ್ರದರ್ಶಿಸಿದ ಕಾಂಗ್ರೆಸ್‌ ಶಾಸಕರನ್ನು ಅಮಾನತುಗೊಳಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ನೇತಾಜಿ ಸುಭಾಷ್‌ಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸೇರಿ ಇತರರ ವಿರುದ್ಧ ಕ್ರಮಕ್ಕೂ ಆಗ್ರಹಿಸಿದರು. 

ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ‘ಕೇಂದ್ರ ಸರ್ಕಾರದ ಬಗ್ಗೆ ತಪ್ಪಾಗಿ ಉಲ್ಲೇಖಿಸಿರುವ ಅಂಶಗಳನ್ನು ತೆಗೆಯುವಂತೆ ರಾಜ್ಯಪಾಲರು ಹೇಳಿದ್ದರು. ನಾವು ಬರೆದಿದ್ದನ್ನು ಓದಲೇಬೇಕು ಎಂದು ರಾಜ್ಯ ಸರ್ಕಾರ ಹಠ ಹಿಡಿದಿತ್ತು. ಜನರಿಗೆ ತಪ್ಪು ಮಾಹಿತಿ ಕೊಡಬಾರದೆಂದು ರಾಜ್ಯಪಾಲರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ವಿರೋಧ ಪಕ್ಷದಲ್ಲಿ ಇದ್ದಾಗ ರಾಜ್ಯಪಾಲರಿಗೆ ಮರ್ಯಾದೆ ಕೊಡಬೇಕು ಎಂದಿದ್ದ ಕಾಂಗ್ರೆಸ್ಸಿಗರು ಈಗ ಅಧಿಕಾರಕ್ಕೆ ಬರುತ್ತಿದಂತೆ ಮಾತು ಬದಲಾಯಿಸುತ್ತಿದ್ದಾರೆ. ರಾಜ್ಯವನ್ನು ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಕನಿಷ್ಠ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರಿಗೆ ಗೌರವ ಕೊಡುವುದನ್ನು ಕಲಿಯಿರಿ’ ಎಂದರು.

ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಶ್ರೀಧರ ಸಾಹುಕಾರ ಮಾತನಾಡಿ, ‘ಕರ್ನಾಟಕದ ದೇಗುಲದಂತೆ ಇರುವ ವಿಧಾನಸೌಧವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರದ ವೇದಿಕೆಯಾಗಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿತ್ತು’ ಎಂದು ಆರೋಪಿಸಿದರು.

‘ಕಾಂಗ್ರೆಸ್ಸಿಗರು ರಾಜ್ಯಪಾಲರ ಬಗ್ಗೆ ಏಕವಚನದಲ್ಲಿ ಮಾತನಾಡಿ ಅಗೌರವ ತೋರಿದ್ದಾರೆ. ಬಳ್ಳಾರಿಯಲ್ಲಿ ಬೀದಿ ರೌಡಿಗಳಂತೆ ವರ್ತಿಸಿದವರು ಈಗ ವಿಧಾನಸೌಧದಲ್ಲಿಯೂ ಅದೆ ದುರ್ವರ್ತನೆ ಮುಂದುವರಿಸಿದ್ದಾರೆ. ರಾಜ್ಯಪಾಲರಿಗೆ ಕ್ಷಮೆ ಕೇಳದೆ ಇದ್ದರೆ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಬೇಕಾಗುತ್ತದೆ’ ಎಂದರು.

ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಮಾತನಾಡಿ, ‘ಕೇಂದ್ರ ಸರ್ಕಾರದ ಬಗ್ಗೆ ಸುಳ್ಳಿನ ಕೂಡಿದ್ದ ಭಾಷಣವನ್ನು ಓದದೆ ರಾಜ್ಯಪಾಲರು ತಮ್ಮ ಜವಾಬ್ದಾರಿಯನ್ನು ತೋರಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಶಾಸಕರು ಅಗೌರವವಾಗಿ ನಡೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಗೋವಿಂದಪ್ಪ ಕೊಂಚಟ್ಟಿ, ನಾಗರೆಡ್ಡಿ, ಶರಣಗೌಡ ಅಲಿಪುರ್, ಮಾರುತಿ ಕಲಾಲ್, ಬಸವರಾಜಪ್ಪ ಸೊನ್ನದ, ಮಲ್ಲಿಕಾರ್ಜುನ ಹೊನಗೇರಾ, ವಿಜಯಲಕ್ಷ್ಮಿ ನಾನಕ, ಹನುಮಂತ ವಲ್ಲಾಪುರೆ, ಮಲ್ಲು ಕೋಲಿವಾಡ, ಮಂಜುನಾಥ ಗುತ್ತೇದಾರ, ವಿಕಾಸ ಚವ್ಹಾಣ, ಚನ್ನಯ್ಯ ಸ್ವಾಮಿ, ಅಪ್ಪಣ್ಣ ಜೈನ್, ಲಕ್ಷ್ಮಿಪುತ್ರ ಮಾಲಿಪಾಟೀಲ, ಸುನಿತಾ ಚವ್ಹಾಣ್, ವೀಣಾ ಮೋದಿ, ಸ್ನೇಹಾ ರಸಾಳಕರ್, ಭೀಮಬಾಯಿ ಶೇಂಡಗಿ, ಶಕುಂತಲಾ ಗುಂಜಲೂರು, ಹಣಮಂತ ಬಂದಳ್ಳಿ, ಪವನ್ ಲಿಂಗೇರಿ ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.