ADVERTISEMENT

ಯಾದಗಿರಿ | ಕಾಂಗ್ರೆಸ್‌ ಕಾರ್ಯಕರ್ತರಿಂದ ಶಾಸಕರ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 5:35 IST
Last Updated 16 ಸೆಪ್ಟೆಂಬರ್ 2025, 5:35 IST
ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ವಿರುದ್ಧ ಕಾಂಗ್ರೆಸ್‌ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶಾಂತಗೌಡ ಬಿರಾದಾರ ಅವರಿಗೆ ಮನವಿಪತ್ರ ಸಲ್ಲಿಸಿದರು
ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ವಿರುದ್ಧ ಕಾಂಗ್ರೆಸ್‌ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶಾಂತಗೌಡ ಬಿರಾದಾರ ಅವರಿಗೆ ಮನವಿಪತ್ರ ಸಲ್ಲಿಸಿದರು   

ಗುರುಮಠಕಲ್‌: ಪ್ರಜಾಸೌಧ ಅಡಿಗಲ್ಲು ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರಿಗೆ ಏಕವಚನದಲ್ಲಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಗುರುಮಠಕಲ್‌ ಮತ್ತು ಸೈದಾಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಸಹಯೋಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಶಾಂತಗೌಡ ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಗಂಗಾ ಪರಮೇಶ್ವರಿ ವೃತ್ತ (ಮಿಟ್ಟಿಬೌಡಿ) ಯಿಂದ ಬಸವೇಶ್ವರ ವೃತ್ತ (ಹಳೇ ತಹಶೀಲ್ದಾರ್‌ ಕಚೇರಿ) ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಸರೆಡ್ಡಿಗೌಡ ಅನಪುರ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೃಷ್ಣ ಚಪೆಟ್ಲಾ ಮಾತನಾಡಿ, ‘ಸೆ.7 ರಂದು ನಡೆದ ಪ್ರಜಾಸೌಧ ಅಡಿಗಲ್ಲು ಸಮಾರಂಭದಲ್ಲಿ ಶಾಸಕರು ಬಾಬುರಾವ ಚಿಂಚನಸೂರ ‍ಅವರ ಕುರಿತು ‘ಎಂಎಲ್‌ಎ ನಾನಾ ಅವನಾ’ ಎಂದು ಏಕವಚನದಲ್ಲಿ ಅವಮಾನ ಮಾಡಿದ್ದು ಸರಿಯಲ್ಲ. ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿದರೆ ‘ನೇಪಾಳದ ಪರಿಸ್ಥಿತಿ’ ಶಾಸಕರಿಗೂ ಬರಲಿದೆ’ ಎಂದರು.

‘ಶಾಸಕರು ಯಾವುದರಲ್ಲಿ ಹೆಚ್ಚಿನ ಪರ್ಸೆಂಟೇಜ್‌ ಕಮಿಷನ್‌ ಬರುತ್ತದೋ ಅದಕ್ಕೆ ತಮ್ಮ ಅನುದಾನ ಮಾರಿ ಕೊಳ್ಳುತ್ತಾರೆ. ಗ್ರಾಮಗಳಲ್ಲಿ ಅಳವಡಿಸಿದ ಹೈಮಾಸ್ಟ್‌ ಸೋಲಾರ್ ದೀಪಗಳಲ್ಲಿ ಶೇ.50ರಷ್ಟು ಕಮಿಷನ್‌ ಬರುತ್ತದೆ ಎನ್ನುವ ಕಾರಣಕ್ಕೆ ತಮ್ಮ ಅನುದಾನ ದುರುಪಯೋಗ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಮಲ್ಲಿಕಾರ್ಜುನ ಖರ್ಗೆಯವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರದ ಜನ ಅರಿತಿದ್ದಾರೆ. ಅವರು ಹಾಕಿದ ರಸ್ತೆಗಳ ಗುಂಡಿ ಮುಚ್ಚಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್‌ ಶಾಸಕರ ಅವಧಿಯಲ್ಲಿ ಬಂದ ಅನುದಾನದ ಕಾಮಗಾರಿಗಳಿಗೆ ನೀವು ಅಡಿಗಲ್ಲು, ಉದ್ಘಾಟನೆ ಮಾಡುತ್ತಿದ್ದೀರಿ’ ಎಂದರು.

‘ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅಪಮಾನ ಮಾಡಿದರೆ ಸಹಿಸಲಾಗದು. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್‌ ನೀಡಿದ ಸೇವೆ ಜನರಿಗೆ ಗೊತ್ತಿದೆ. ಚಿಂಚನಸೂರ ಅವರ ರಾಜಕೀಯ ಅನುಭವದಷ್ಟೂ ಶಾಸಕರಿಗೆ ವಯಸ್ಸಿಲ್ಲ. ಅವರ ಬಗ್ಗೆ ಈ ರೀತಿ ನಡೆದುಕೊಂಡಿದ್ದು ಖಂಡನೀಯ’ ಎಂದು ಹೇಳಿದರು.

ಮುಖಂಡರಾದ ರಾಜಗೋಪಾಲ ರೆಡ್ಡಿ ಮತ್ತು ಸಾಯಿಬಣ್ಣ ಬೋರಬಂಡಾ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆ ಹಾಗೂ ಬಾಬುರಾವ ಚಿಂಚನಸೂರ ಅವರ ಅವಧಿಯಲ್ಲಿ ಕೆರೆ ತುಂಬಲು ಅನುದಾನ ಲಭಿಸಿದೆ. ಆದರೆ, ಶಾಸಕರು ಅದು ತಮ್ಮ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಕೆರೆ ತುಂಬುವ ಯೋಜನೆಯಲ್ಲಿ ಶಾಸಕರ ಸಾಧನೆಯೇನೂ ಇಲ್ಲ’ ಎಂದರು.

‘ಶಾಸಕ ಶರಣಗೌಡ ಕಂದಕೂರ ಅವರ ತಂದೆ ಮಾಜಿ ಶಾಸಕ ದಿ.ನಾಗನಗೌಡ ಕಂದಕೂರ ‍ಅವರ ನಿಧನದ ನಂತರ ವಾರ್ಷಿಕ ಕಾರ್ಯಕ್ರಮಕ್ಕೆ ಹೆಲಿಕ್ಯಾಪ್ಟರ್ ಬಳಸಿ ಸ್ವಾಮೀಜಿ ಅವರನ್ನು ಕರೆತರಲಾಯಿತು. ಆದರೆ, ಅವರ ಕುಟುಂಬದ ಆದಾಯ ನಮಗೆಲ್ಲಾ ಗೊತ್ತಿದೆ. ಈ ಹಣ ಎಲ್ಲಿಂದ ಬಂದಿದೆ ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು. ಚಿತ್ತಾಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿದರು.

ಗುರುಮಠಕಲ್‌, ಯಾದಗಿರಿ ಮತ್ತು ಸೈದಾಪುರ ಬ್ಲಾಕ್‌ ಸಮಿತಿಗಳ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಗುರುಮಠಕಲ್‌ ಪಟ್ಟಣದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಮಾತನಾಡಿದರು
ಕಳೆದ ಚುನಾವಣೆಯಲ್ಲಿ ನಾನು ಶಾಸಕನಾಗಿದ್ದರೆ ಸಿಂಗಾಪುರ ಮಾದರಿಯಲ್ಲಿ ಕ್ಷೇತ್ರ ಅಭಿವೃದ್ಧಿ ಮಾಡುತ್ತಿದ್ದೆ. ಅಲ್ಪ ಮತದಿಂದ ಚುನಾವಣೆಯಲ್ಲಿ ಸೋತಿದ್ದೇನೆ. ಆದರೆ ಸಾಯುವವರೆಗೂ ನಿಮ್ಮ ಸೇವೆ ಮಾಡುತ್ತೇನೆ.
ಬಾಬುರಾವ ಚಿಂಚನಸೂರ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
ಯಾವುದೇ ಪಕ್ಷದಲ್ಲಿನ ಕೋಲಿ ಸಮಾಜದ ಮುಖಂಡರಿಗೆ ಅಪಮಾನ ಅನ್ಯಾಯವಾದರೆ ಜಿಲ್ಲೆಯ ಕೋಲಿ ಸಮಾಜದವರು ಪಕ್ಷಾತೀತವಾಗಿ ಅವರ ಬೆಂಬಲಕ್ಕೆ ನಿಲ್ಲುತ್ತೇವೆ.
ಮಲ್ಲಿಕಾರ್ಜುನ ಘೋಸಿ ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.