
ಸುರಪುರ: ‘ನಮ್ಮ ಸರ್ಕಾರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆದಿವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ’ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ತಾಲ್ಲೂಕಿನ ದೇವಪುರ ಗ್ರಾಮದಲ್ಲಿ ಭಾನುವಾರ ವಿವಿಧ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಇಂದು ₹ 15 ಲಕ್ಷ ವೆಚ್ಚದ ಬ್ರಾಹ್ಮಣ ಸಮುದಾಯ ಭವನ, ₹ 10 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಈರಣ್ಣ ಗುಡಿಯನ್ನು ಉದ್ಘಾಟಿಸಿದ್ದೇನೆ’ ಎಂದರು.
‘₹ 30 ಲಕ್ಷ ವೆಚ್ಚದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಕಲ್ಯಾಣ ಮಂಟಪ, ₹ 83 ಲಕ್ಷದ ಎಎನ್‍ಎಂ ಕ್ವಾಟರ್ಸ್, ₹ 50 ಲಕ್ಷ ವೆಚ್ಚದ ಸಿಸಿ ರಸ್ತೆ, ₹ 24 ಲಕ್ಷ ವೆಚ್ಚದ ಸಮುದಾಯ ಶೌಚಾಲಯ ಕಾಮಗಾರಿಗೆ ಪೂಜೆ ನೆರವೇರಿಸಿದ್ದೇನೆ’ ಎಂದರು.
‘ಒಟ್ಟು ₹ 1.12 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ನಡೆದಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸುತ್ತೇನೆ’ ಎಂದು ಭರವಸೆ ನೀಡಿದರು.
‘ನೀರಾವರಿ ಸಲಹಾ ಸಮಿತಿಯಲ್ಲಿ ನಾನೂ ಸೇರಿದಂತೆ ಈ ಭಾಗದ ಜನಪ್ರತಿನಿಧಿಗಳು ಚರ್ಚೆ ನಡೆಸಿ ಏ. 3 ರವರೆಗೂ ಕಾಲುವೆಗೆ ನೀರು ಹರಿಸುವಂತೆ ಮಾಡಲು ಪ್ರಯತ್ನಿಸಿದ್ದೇವೆ. ರೈತರು ನೀರನ್ನು ಪೋಲು ಮಾಡದೆ ಸಮರ್ಪಕವಾಗಿ ಬಳಸಿ ಎರಡನೇ ಬೆಳೆ ಪಡೆದುಕೊಳ್ಳಿ’ ಎಂದು ವಿನಂತಿಸಿದರು.
ಕೆವೈಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ವಿಠಲ ಯಾದವ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ, ಹಿರಿಯ ಮುಖಂಡ ಮಲ್ಲಣ್ಣ ಸಾಹುಕಾರ ಮುಧೋಳ, ಗಚ್ಚಪ್ಪ ಪುಜಾರಿ, ಬಸವರಾಜ ಬಾಕಲಿ ಇತರ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.