ವಡಗೇರಾ: ಮುಂಬರುವ ದಿನಗಳಲ್ಲಿ ವಡಗೇರಾ ಪಟ್ಟಣದಲ್ಲಿ ಹೆಲಿಪ್ಯಾಡ್ ಹಾಗೂ ಪ್ರವಾಸಿ ಮಂದಿರವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಹೇಳಿದರು.
ವಡಗೇರಾ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ವಡಗೇರಾ ತಾಲ್ಲೂಕಿಗೆ ಬರಬೇಕಾದರೆ, ಯಾದಗಿರಿಗೆ ಬಂದು ಅಲ್ಲಿಂದ ವಡಗೇರಾಕ್ಕೆ ಬರಬೇಕಾಗುತ್ತದೆ. ಇದರಿಂದ ಸಕಾಲದಲ್ಲಿ ಕಾರ್ಯಕ್ರಮಕ್ಕೆ ತಲುಪಲು ಆಗುತ್ತಿಲ್ಲ. ಈ ವಿಳಂಬವನ್ನು ತಪ್ಪಿಸಲು ವಡಗೇರಾ ಪಟ್ಟಣದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ. ಇಲ್ಲಿಗೆ ಬಂದಂತಹ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಉಳಿದುಕೊಳ್ಳಲು ಪ್ರವಾಸಿ ಮಂದಿರವಿಲ್ಲ. ಅದಕ್ಕಾಗಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಡಗೇರಾ ಪಟ್ಟಣದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಅದರಲ್ಲಿ ಮುಖ್ಯವಾಗಿ ಉಪನೋಂದಣಿ ಕಚೇರಿ ಹಾಗೂ ಪಟ್ಟಣ ಪಂಚಾಯಿತಿಗಾಗಿ ಈಗಾಗಲೇ ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಲಾಗಿದೆ. ಅವರಿಂದ ಸಕಾರಾತ್ಮಕ ಉತ್ತರ ಸಿಕ್ಕಿದೆ. ಕೆಲವೆ ದಿನಗಳಲ್ಲಿ ವಡಗೇರಾ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.
ವಡಗೇರಾ ತಾಲ್ಲೂಕಿನ ಕೊನಹಳ್ಳಿ ಸಮೀಪದ ದೊಡ್ಡ ತಾಯಮ್ಮನ ಹಳ್ಳಕ್ಕೆ ಬ್ರೀಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.