ADVERTISEMENT

ಶಹಾಪುರ; ಕಾಮಗಾರಿಗಳ ಪರಿಶೀಲನೆ

ಸಕಲ ಸೌಲಭ್ಯಗಳ ಸುಸಜ್ಜಿತ ಎಪಿಎಂಸಿ ನಿರ್ಮಾಣ; ಶಾಸಕ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 4:59 IST
Last Updated 12 ಜೂನ್ 2022, 4:59 IST
ಶಹಾಪುರ ನಗರದ ಎಪಿಎಂಸಿಯಲ್ಲಿ ₹25ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ವಿವಿಧ ಕಟ್ಟಡ ಕಾಮಗಾರಿಗಳನ್ನು ಶನಿವಾರ ಶಾಸಕ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು
ಶಹಾಪುರ ನಗರದ ಎಪಿಎಂಸಿಯಲ್ಲಿ ₹25ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ವಿವಿಧ ಕಟ್ಟಡ ಕಾಮಗಾರಿಗಳನ್ನು ಶನಿವಾರ ಶಾಸಕ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು   

ಶಹಾಪುರ: ‘ನಗರದ ಎಪಿಎಂಸಿ 58 ಎಕರೆ ವಿಶಾಲ ಜಾಗದಲ್ಲಿ ನಬಾರ್ಡ್ ಅನುದಾನದ ₹25 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ. ನಿರೀಕ್ಷೆಯಂತೆ 3 ತಿಂಗಳಲ್ಲಿ ಕೆಲಸ ಮುಕ್ತಾಯಗೊಂಡರೆ ರೈತರಿಗೆ ಅನುಕೂಲವಾಗುತ್ತದೆ. ಆದಷ್ಟು ತ್ವರಿತವಾಗಿ ಕೆಲಸ ಪೂರ್ಣಗೊಳಿಸಿ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಗುತ್ತಿಗದಾರರಿಗೆ ಸೂಚಿಸಿದರು.

ನಗರದ ಎಪಿಎಂಸಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

2021 ಸೆಪ್ಟಂಬರ 4 ರಂದು ಸಚಿವ ಎಸ್.ಟಿ. ಸೋಮಶೇಖರ ಕಾಮಗಾರಿಗೆ ಚಾಲನೆ ನೀಡಿದ್ದರು. ಈಗಾಗಲೇ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ 79 ಮಳಿಗೆ ನಿರ್ಮಿಸಿದೆ. ಯಾರು ಎಪಿಎಂಸಿಯಲ್ಲಿ ಪರವಾನಿಗೆ ಪಡೆದುಕೊಂಡಿರುತ್ತಾರೆ ಅವರಿಗೆ ಟೆಂಡರ್ ಮೂಲಕ ಹರಾಜು ಹಾಕಿ ಮಳಿಗೆ ನೀಡಲಾಗುವುದು ಎಂದರು.

ADVERTISEMENT

ಅದರಂತೆ 52 ತರಕಾರಿ ಮಾರುಕಟ್ಟೆ ಮಳಿಗೆ, ಎರಡು ತರಕಾರಿ ಮಾರುಕಟ್ಟೆಯ ಎರಡು ಹರಾಜು ಕಟ್ಟೆ, ಟೆಂಡರ್ ಕಟ್ಟೆ, ರಸ್ತೆ, ಕಂಪೌಂಡ್, ಕುಡಿಯುವ ನೀರು, ಗೋದಾಮು, ವ್ಹೇಬ್ರೀಜ್ ಸೇರಿದಂತೆ ಸಕಲ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಕೃಷಿ ಮಾರುಕಟ್ಟೆ ಇದಾಗಲಿದೆ ಅವರು ಆಶಾಭಾವನೆ ವ್ಯಕ್ತಪಡಿಸಿದರು.

ಅಲ್ಲದೆ ಇನ್ನೂ ಅಗತ್ಯ ಮೂಲ ಸೌಲಭ್ಯಗಳಿಗಾಗಿ ಅಂದಾಜು ₹20ಕೋಟಿ ವೆಚ್ಚದ ಕಾಮಗಾರಿಗಾಗಿ ಅಂದಾಜು ಪಟ್ಟಿ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಲಾಗುವುದು. ಅದರಲ್ಲಿ ರೈತಭವನ, ಸಾರ್ವಜನಿಕ ಶೌಚಾಲಯ, ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ, ರೈತರಿಗೆ ತಂಗುವ ವ್ಯವಸ್ಥೆಗೆ ಹಾಲ್ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.

ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಸಕ್ತ ವರ್ಷ ರೈತರು ಹತ್ತಿ ಬಿತ್ತನೆಯ ಕಾರ್ಯದಲ್ಲಿ ಮುಂದಾಗಿದ್ದಾರೆ. ರೈತರ ಅನುಕೂಲಕ್ಕಾಗಿ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಮಾಡಲಾಗುವುದು. ಭಾರತೀಯ ಹತ್ತಿ ನಿಗಮದ ಆಶ್ರಯದಲ್ಲಿ ಪ್ರತ್ಯೇಕ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ರೈತರು ಸಹ ಎಪಿಎಂಸಿ ಕೇಂದ್ರಕ್ಕೆ ಆಗಮಿಸಿ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಅವರು ಮನವಿ ಮಾಡಿದರು.

ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ ಅಣಬಿ, ಕಾರ್ಯದರ್ಶಿ ಶಿವಕುಮಾರ ದೇಸಾಯಿ, ಗುತ್ತಿಗೆದಾರ ಶಂಕರಗೌಡ ಹೊಸಮನಿ, ಎಂಜಿನಿಯರ್ ನೀಲಕಂಠ ಜಮದಾರ ಹಾಗೂ ಸಮಿತಿಯ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.