
ಸುರಪುರ: ‘ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕೀಯ ಚುನಾವಣೆಗೆ ಮಾತ್ರ ತಾತ್ಪರ್ಯವಾಗಿ ಸೀಮಿತವಾಗಿರುತ್ತದೆ. ಪಕ್ಷಾತೀತವಾಗಿ ನಾವು ಸಹಕಾರಿ ಸಂಘ ಮತ್ತು ಬ್ಯಾಂಕ್‍ಗಳನ್ನು ಕಟ್ಟಿದರೆ ಅವು ಅಭಿವೃದ್ಧಿಯಾಗಲು ಸಾಧ್ಯ’ ಎಂದು ಕೆವೈಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕ ಸುರೇಶ ಸಜ್ಜನ್ ಹೇಳಿದರು.
ನಗರದ ಪಟ್ಟಣ ಸಹಕಾರ ಸಂಘದ ಸಭಾಂಗಣದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಹಾಗೂ ಸುರಪುರ ಪಟ್ಟಣ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ-2025ಯ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ನೀರಾವರಿ ಸಂಘಗಳಿವೆ. ನೀರಾವರಿ ಮತ್ತು ಹಾಲು ಒಕ್ಕೂಟ ಸಂಘಗಳನ್ನು ಗಟ್ಟಿ ಗೊಳಿಸಬೇಕು. ಸೌಹಾರ್ದ, ಪತ್ತಿನ ಸಹಕಾರ ಸಂಘಗಳನ್ನು ಬಲಗೊಳಿಸಬೇಕು. ಈ ರೀತಿ ಸಂಘಗಳು ಹೆಚ್ಚಾದಾಗ ಜಿಲ್ಲೆಯಲ್ಲಿ ಪ್ರತ್ಯೇಕ ಸಹಕಾರ ಬ್ಯಾಂಕ್ ಮಾಡಲು ಅವಕಾಶ ಇರುತ್ತದೆ’ ಎಂದರು.
ನಿವೃತ್ತ ಉಪ ನಿರ್ದೇಶಕ ಸೇಡಂ ಗೋವಿಂದಪ್ಪ ಮಾತನಾಡಿ, ‘ಗುಜರಾತ್‍ನಲ್ಲಿ ಸ್ಥಾಪಿತವಾಗಿರುವ ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯ ಭಾರತದಾದ್ಯಂತ 30 ಕೋಟಿ ಸದಸ್ಯರನ್ನು ಹೊಂದಿರುವ 8.5 ಲಕ್ಷ ಸಹಕಾರಿ ಸಂಘಗಳಿಗೆ ಶಿಕ್ಷಣ, ಸಂಶೋಧನೆ ಕಾರ್ಯಗಳಿಗೆ ಪ್ರಮುಖ ಬೆಂಬಲವನ್ನು ನೀಡಲಿದೆ’ ಎಂದು ತಿಳಿಸಿದರು.
ಸುರಪುರ ಪಟ್ಟಣ ಸಹಕಾರ ಸಂಘದ ಅಧ್ಯಕ್ಷ ರಾಜಾ ವಿಜಯಕುಮಾರ ನಾಯಕ ಉದ್ಘಾಟಿಸಿದರು. ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ರಾಜಾ ಮುಕುಂದ ನಾಯಕ ಅವರು ಸಹಕಾರ ಪಿತಾಮಹ ಸಿದ್ದನಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಜಿಲ್ಲಾ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಎಂ. ನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಪಾರಪ್ಪ ಗುತ್ತೇದಾರ್, ನಿರ್ದೇಶಕ ರಂಗಪ್ಪ ನಾಯಕ ಪ್ಯಾಪ್ಲಿ, ವ್ಯವಸ್ಥಾಪಕ ವಾಸುದೇವ ಜೋಷಿ, ಬಸವರಾಜ ಜಮದ್ರಖಾನಿ, ಬಾಪುಗೌಡ ಪಾಟೀಲ ಹುಣಸಗಿ, ಮಧ್ವರಾಜ್ ವೇದಿಕೆಯಲ್ಲಿದ್ದರು.
ಕೆವೈಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕರಾದ ಸುರೇಶ ಸಜ್ಜನ್, ಬಸವರಾಜಗೌಡ ಚಿಂಚೋಳಿ ಅವರಿಗೆ ವಿಶೇಷ ಸನ್ಮಾನ ನೀಡಲಾಯಿತು. ಜಿಲ್ಲಾ ಸಹಕಾರ ಒಕ್ಕೂಟದ ವೃತ್ತಿ ಪರ ನಿರ್ದೇಶಕ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಣಾಧಿಕಾರಿ ರೇಖಾ ಗಾಯಕವಾಡ ನಿರೂಪಿಸಿದರು. ಜಿಲ್ಲಾ ಸಹಕಾರ ಶಿಕ್ಷಕಿ ಸುಜಾತ ಮಠ ಸ್ವಾಗತಿಸಿ ವಂದಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‍ನಲ್ಲಿ ತ್ರಿಭುವನ್ ಸಹಕಾರ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಿ ಸಹಕಾರ ಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ. ಇದರಿಂದ ಸಹಕಾರ ಶಿಕ್ಷಣ ತರಬೇತಿ ಹಾಗೂ ಸಂಶೋಧನೆಗಳಲ್ಲಿ ಹೊಸ ಆದ್ಯತೆಯನ್ನು ಈ ವಿಶ್ವ ವಿದ್ಯಾಲಯ ಸೃಷ್ಟಿಸಲಿದೆ
- ಸುರೇಶ ಸಜ್ಜನ್ ಕೆವೈಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.