ADVERTISEMENT

ಮರಣ ಶಾಸನವಾದ ಸಹಕಾರಿ ಕಾಯ್ದೆಯ ತಿದ್ದುಪಡಿ: ಯೂಸೂಫ್ ಸಿದ್ದಿಕಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 7:25 IST
Last Updated 29 ಅಕ್ಟೋಬರ್ 2025, 7:25 IST
ಶಹಾಪುರದ ಮಾತೋಶ್ರಿ ಸಭಾಂಗಣದಲ್ಲಿ ಮಂಗಳವಾರ ಸೌಹಾರ್ದ ಸಹಕಾರಿ ಸಂಘದ ಸಮಾಲೋಚನಾ ಸಭೆಯನ್ನು ಸಹಕಾರಿ ಸಂಘದ ಧುರೀಣರು ಉದ್ಘಾಟಿಸಿದರು 
ಶಹಾಪುರದ ಮಾತೋಶ್ರಿ ಸಭಾಂಗಣದಲ್ಲಿ ಮಂಗಳವಾರ ಸೌಹಾರ್ದ ಸಹಕಾರಿ ಸಂಘದ ಸಮಾಲೋಚನಾ ಸಭೆಯನ್ನು ಸಹಕಾರಿ ಸಂಘದ ಧುರೀಣರು ಉದ್ಘಾಟಿಸಿದರು    

ಶಹಾಪುರ: ‘ಪರಸ್ಪರ ಸಹಕಾರ ಮನೋಭಾವದಿಂದ ಕೊಡುಕೊಳ್ಳುವಿಕೆಯ ಉದ್ದೇಶದಿಂದ ಜನ್ಮ ತಾಳಿದ ಸಹಕಾರಿ ಸಂಘಗಳಿಗೆ ಸರ್ಕಾರ ಅಂಕುಶ ಹಾಕಲು ಹೊರಟಿದೆ. ಸರ್ಕಾರ ಸೌಹಾರ್ದ ಸಹಕಾರಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಮರಣ ಶಾಸನವಾಗಿ ಪರಿಣಮಿಸಲಿದೆ. ಒಂದು ಬಗೆ ಹಿಂಬಾಗಿಲಿನಿಂದ ಕಾಯ್ದೆಯನ್ನು ಸರ್ಕಾರ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಮುಸ್ಲಿಂ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಾತೋಶ್ರಿ ಸಭಾಂಗಣದಲ್ಲಿ ಮಂಗಳವಾರ ಸೌಹಾರ್ದ ಸಹಕಾರಿ ಕಾಯ್ದೆಯಲ್ಲಿನ ತಿದ್ದುಪಡಿಗಳ ಕುರಿತು ಹಾಗೂ ನಿರ್ದೇಶಕರ ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ವಿಷಯಧಾರಿತ ತರಬೇತಿಯ ಹಾಗೂ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸಹಕಾರಿ ಸಂಘದ ಠೇವಣಿಯನ್ನು ಅಪೆಕ್ಸ್ ಬ್ಯಾಂಕ್ ಇಲ್ಲವೆ ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ಇಡುವುದು ಮತ್ತು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇಡುವಂತೆ ಕಾಯ್ದೆಗೆ ತಿದ್ದುಪಡಿ ತಂದಿರುವುದು ಇದ್ಯಾವ ನ್ಯಾಯ ಎನ್ನುವಂತೆ ಆಗಿದೆ. ಅಲ್ಲದೆ ಆಯಾ ಸಮುದಾಯದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಹಕಾರ ಸಂಘಗಳಲ್ಲಿ ಮೀಸಲಾತಿ ಜಾರಿ ಮಾಡುವುದು ಕಾನೂನು ತೊಡಕಾಗುವುದು. ಅಷ್ಟು ಸಮಂಜಸವಲ್ಲ’ ಎಂದರು.

ADVERTISEMENT

‘ಅಲ್ಲದೆ ಲೆಕ್ಕ ಪರಿಶೀಲನೆ ಮಾಡುವುದು. ಆಡಳಿತ ಮಂಡಳಿಯ ನಿರ್ದೇಶಕರು ಸೇರಿದಂತೆ ಪ್ರತಿಯೊಬ್ಬರೂ ಪ್ರತಿ ವರ್ಷ ಆಸ್ತಿ ಘೋಷಣೆ ಮಾಡುವಂತೆ ತಿದ್ದುಪಡಿ ಕಾಯ್ದೆಯಲ್ಲಿ ಜಾರಿ ತಂದಿರುವುದು ಸರ್ಕಾರದ ಸರಿಯಾದ ನಡೆ ಅಲ್ಲ. ಸಹಕಾರ ಸಂಘಗಳು ಸರ್ಕಾರದಿಂದ ನಯಾ ಪೈಸೆ ಅನುದಾನ ಸಹ ಪಡೆದುಕೊಳ್ಳುವುದಿಲ್ಲ. ಇದು ಒಂದು ಬಗೆ ಬ್ರಿಟಿಷರು ಜಾರಿಗೆ ತಂದ ಕಾನೂನಂತೆ ಕಾಣಿಸುತ್ತದೆ. ಈ ಬಗ್ಗೆ ಸಹಕಾರಿ ಸಂಘದ ಮುಖಂಡರು ಕಾನೂನು ಹೋರಾಟಕ್ಕೆ ಮುಂದಾಗಬೇಕು’ ಎಂದು ಅವರು ಕರೆ ನೀಡಿದರು.

ಸಹಕಾರಿ ಸಂಘದ ಸಹಾಯಕ ನಿರ್ದೇಶಕ ಗುರುನಾಥ ಜಾಂತಿಕರ್, ಶೈಲಜಾ ತಪ್ಪಲಿ, ವಿಭಾಗೀಯ ವಿಸ್ತರಣಾಧಿಕಾರಿ ಸೂರ್ಯಕಾಂತ ರಾಕಲೇ ಸೇರಿದಂತೆ ವಿವಿಧ ಸಹಕಾರಿ ಸಂಘದ ನಿರ್ಧೇಶಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. 

ಸೌಹಾರ್ದ ಸಹಕಾರಿ ತಿದ್ದುಪಡಿ ಅಧಿನಿಯಮದಿಂದ ಸಹಕಾರ ಸಂಘಗಳನ್ನು ಮುನ್ನಡೆಸುವ ಸದಸ್ಯರಿಗೆ ಮೂಗುದಾರ ಹಾಕುವ ಕೆಲಸ ನಡೆದಿದೆ. ಸರ್ಕಾರ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು
ಚಂದ್ರಶೇಖರ ಆರಬೋಳ ಸಹಕಾರಿ ಧುರೀಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.