ಯಾದಗಿರಿ: ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಸ್ವಾಮೀಜಿ ಅವರು ಕೊರೊನಾ ಜಾಗೃತಿಯಲ್ಲಿ ತೊಡಗಿದ್ದಾರೆ.
ಲಾಕ್‍ಡೌನ್ ಜಾರಿಯಾಗಿ 38 ದಿನಗಳು ಕಳೆಯುತ್ತಾ ಬಂದಿದೆ.ಈ ವೇಳೆ ಶಾಂತವೀರ ಸ್ವಾಮೀಜಿ ಮಠದಲ್ಲಿ ಕಾಲ ಕಳೆಯದೆ, ಮಠಕ್ಕೆ ಆಗಮಿಸುವ ಬಡ ಕೂಲಿ, ಕಾರ್ಮಿಕರಿಗೆ ನಿತ್ಯ ಅನ್ನ ದಾಸೋಹ ಮಾಡುವ ಜೊತೆಗೆ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿರುವ ಆರೋಗ್ಯ, ಪೊಲೀಸ್, ಸಿಬ್ಬಂದಿ ಹಾಗೂ ರೋಗಿಗಳಿಗೆ ಶ್ರೀಮಠದಿಂದ ಆಹಾರ ನೀಡುತ್ತಿದ್ದಾರೆ.
ಯಾದಗಿರಿ ನಗರದಲ್ಲಿ ಸಂಘ–ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಬಡ ಜನರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮಗಳಲ್ಲಿಯೂ ಶ್ರೀಗಳು ಭಾಗಿಯಾಗಿ ಜನರಿಗೆ ಸ್ವಚ್ಛತೆ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
‘ಜಿಲ್ಲೆಯಲ್ಲಿ ಈ ವರೆಗೆ ಕೋವಿಡ್–19 ಪ್ರಕರಣ ವರದಿಯಾಗಿಲ್ಲ ಎಂದು ಜನ ಮೈಮರೆತು, ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಅನವಶ್ಯಕವಾಗಿ ತಿರುಗಾಡಬಾರದು. ಎಲ್ಲರೂತಪ್ಪದೆ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು’ ಎಂದು ಶ್ರೀಗಳು ಭಕ್ತರಿಗೆ ಅರಿವು ಮೂಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.