ADVERTISEMENT

ಶಹಾಪುರ | ಸಿಗದ ಬೆಲೆ, ಮಹಡಿಗಳಲ್ಲಿ ಹತ್ತಿ ದಾಸ್ತಾನು!

ಭಾರತೀಯ ಹತ್ತಿ ನಿಗಮದಿಂದ ಖರೀದಿ ಸ್ಥಗಿತ; ಕಾರ್ಖಾನೆಗಳೂ ಬಂದ್

ಟಿ.ನಾಗೇಂದ್ರ
Published 24 ಏಪ್ರಿಲ್ 2020, 20:46 IST
Last Updated 24 ಏಪ್ರಿಲ್ 2020, 20:46 IST
ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದ ಮನೆಯೊಂದರ ಮಹಡಿ ಮೇಲೆ ಹತ್ತಿ ಸಂಗ್ರಹಿಸಿಟ್ಟಿರುವುದು
ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದ ಮನೆಯೊಂದರ ಮಹಡಿ ಮೇಲೆ ಹತ್ತಿ ಸಂಗ್ರಹಿಸಿಟ್ಟಿರುವುದು   

ಶಹಾಪುರ (ಯಾದಗಿರಿ ಜಿಲ್ಲೆ):ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ಹತ್ತಿ ಬೆಳೆದಿದ್ದಾರೆ. ಲಾಕ್‌ಡೌನ್‌ನಿಂದ ತಾಲ್ಲೂಕಿನ 13 ಹತ್ತಿ ಕಾರ್ಖಾನೆಗಳು ಬಂದ್ ಆಗಿವೆ. ಎರಡನೆಯ ಹಂತದ ಹತ್ತಿ ಖರೀದಿಗೆ ಯಾರೂ ಮುಂದಾಗುತ್ತಿಲ್ಲ. ಇದರಿಂದ ಅವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಭಾರತೀಯ ಹತ್ತಿ ನಿಗಮದ ಆಶ್ರಯದಲ್ಲಿ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸಲು ಸರ್ಕಾರ 2019 ನವೆಂಬರ್‌ನಲ್ಲಿ ಎರಡು ಖರೀದಿ ಕೇಂದ್ರ ಆರಂಭಿಸಿತ್ತು. ತಾಂತ್ರಿಕ ಕಾರಣಗಳಿಂದ ನಿಗಮ ಈಗ ಖರೀದಿ ಸ್ಥಗಿತಗೊಳಿಸಿದೆ.

‘2,943 ರೈತರಿಂದ 1.05 ಲಕ್ಷ ಕ್ವಿಂಟಲ್ ಹತ್ತಿ ಖರೀದಿಸಿ ₹ 57.48 ಕೋಟಿ ಹಣವನ್ನು ರೈತರಿಗೆ ಸಂದಾಯ ಮಾಡಲಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಸಂತೋಷಕುಮಾರ ಮುದ್ದಾ ತಿಳಿಸಿದರು.

ADVERTISEMENT

ಹತ್ತಿ ಕಾರ್ಖಾನೆಗಳಲ್ಲಿ ಹೆಚ್ಚಾಗಿ ಬಿಹಾರ, ಉತ್ತರಪ್ರದೇಶದ ಕಾರ್ಮಿಕರು ಇದ್ದು, ನಿಷೇಧಾಜ್ಞೆ ಕಾರಣದಿಂದ ಅವರನ್ನೆಲ್ಲ ಊರುಗಳಿಗೆ ಕಳುಹಿಸಲಾಗಿದೆ. ಇದರಿಂದ ಅನಿವಾರ್ಯವಾಗಿ ಕಾರ್ಖಾನೆಗಳು ಬಂದ್ ಆಗಿವೆ.

‘ಎರಡನೇ ಅವಧಿ ಹತ್ತಿ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಧಾರಣೆಯೂ ಕಡಿಮೆ ಇರುತ್ತದೆ. ರಫ್ತು ಕೂಡಾ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಹೀಗಾಗಿ ಧಾರಣೆಯೂ ಕುಸಿದಿದೆ’ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಸದ್ಯ, ಮಹಡಿ ಮೇಲೆ ಮತ್ತು ಹೊಲದಲ್ಲಿ ಹತ್ತಿ ದಾಸ್ತಾನು ಮಾಡಿದ್ದೇವೆ. ಸರ್ಕಾರ ಕಾರ್ಖಾನೆಗಳ ಪುನರಾರಂಭಕ್ಕೆ ಅವಕಾಶ ನೀಡಿ, ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ರೈತ ಶರಣಪ್ಪ ಪ್ಯಾಟಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.