ADVERTISEMENT

₹8 ಲಕ್ಷ ಮೌಲ್ಯದ ಹತ್ತಿ ಲಪಾಟಿಸಿದ್ದ ಆರೋಪಿ ಸೆರೆ

187 ಕ್ವಿಂಟಲ್‌ ಹತ್ತಿ ಕಳವು ಮಾಡಿದ ಭೂಪ ಸೆರೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 3:19 IST
Last Updated 25 ನವೆಂಬರ್ 2020, 3:19 IST

ಯಾದಗಿರಿ: ಜಿಲ್ಲೆಯ ಸೈದಾಪುರದಿಂದ ಗುಜರಾತ್‌ಗೆ ಲಾರಿ ಮೂಲಕ ಹತ್ತಿ ಸಾಗಿಸಲು ರೈತ ಕಳಿಸಿದ್ದ 187 ಕ್ವಿಂಟಲ್‌ ಹತ್ತಿಯನ್ನು ಬೇರೆಡೆ ಮಾರಾಟ ಮಾಡಿದ್ದ ಆರೋಪಿಯನ್ನು ಸೈದಾಪುರ ಪೊಲೀಸರು ಬಂಧಿಸಿದ್ದಾರೆ.

ಜಯದೀಪಪುರ ಗೌಸ್ವಾಮಿ ಬಾಬುಪುರಿ ಗೊಸ್ವಾಮಿ ಬಂಧಿತ ಆರೋಪಿ.

ಘಟನೆ ವಿವರ: ಸೈದಾಪುರ ಪಟ್ಟಣ ನಿವಾಸಿ ಸಿದ್ದಲಿಂಗರೆಡ್ಡಿ ತಮ್ಮ ಹೊಲದಲ್ಲಿ ₹8 ಲಕ್ಷ ಮೌಲ್ಯದ 187 ಕ್ವಿಂಟಲ್‌ ಹತ್ತಿ ಬೆಳೆದಿದ್ದರು. ಇದನ್ನು ಗುಜರಾತ್‌ನ ಕಡಿ ನಗರಕ್ಕೆ ಮಾರಾಟ ಮಾಡಲು ಬಾಡಿಗೆ ಲಾರಿಯೊಂದನ್ನು ಬುಕ್‌ ಮಾಡಿದ್ದರು. ನವೆಂಬರ್ 5ರಂದು ಸೈದಾಪುರದಿಂದ ಗುಜರಾತ್‌ಗೆ ಲಾರಿ ಕಳಿಸಿದ್ದರು. ನ. 7ರ ನಂತರ ಆರೋಪಿ ಫೋನ್‌ ಸ್ವಿಚ್ ಆಫ್‌ ಮಾಡಿಕೊಂಡಿದ್ದರು. ಇದರಿಂದ ಕಂಗಾಲದ ರೈತ ಸಿದ್ದಲಿಂಗರೆಡ್ಡಿ ಸೈದಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ADVERTISEMENT

ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಮುಂಬೈಗೆ ತೆರಳಿದ್ದರು. ಆರೋಪಿ ಜಯದೀಪಪುರ ಗೌಸ್ವಾಮಿ ಗುಜರಾತ್‌ಗೆ ಸಾಗಿಸದೆ ಮುಂಬೈನ ಸಾತಗಾಂವ ಹತ್ತಿ ಮಿಲ್‌ನಲ್ಲಿ ₹9 ಲಕ್ಷಕ್ಕೆ ಮಾರಾಟ ಮಾಡಿದ್ದ. ಇದನ್ನು ಸೈದಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಲಾರಿ ಮತ್ತು ಮಾಲಿಕನನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿಸಿಕೊಂಡಿದ್ದಾರೆ.

ಕಾರ್ಯಾಚರಣೆ ತಂಡದಲ್ಲಿ ಗುರುಮಠಕಲ್‌ ಸಿಪಿಐ ತಂಡದಲ್ಲಿ ದೇವೆಂದ್ರಪ್ಪ ಡಿ.ಧೂಳಖೇಡ, ಸೈದಾಪುರ ಪೊಲೀಸ್‌ ಠಾಣೆ ಪಿಎಸ್‌ಐ ಭೀಮರಾಯ ಬಂಕಲಗಿ, ಸಿಬ್ಬಂದಿಯಾದ ಗೋಪಾಲರೆಡ್ಡಿ, ಸೈಯದ್‌ ಆಲಿ, ನಾಗಪ್ಪ, ರಮೇಶ ರೆಡ್ಡಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.