ADVERTISEMENT

‘ಡಿಜಿಟಲ್ ಕ್ಷೇತ್ರದಲ್ಲಿ ದೇಶ ಮುಂಚೂಣಿ’

ಭಾರತದ ಅರ್ಥ ವ್ಯವಸ್ಥೆ ಕುರಿತ ಸಂವಾದದಲ್ಲಿ ವಿಶ್ವನಾಥ ಭಟ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:13 IST
Last Updated 30 ಜುಲೈ 2023, 15:13 IST
ಯಾದಗಿರಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿಯಿಂದ ಭಾನುವಾರ ಆಯೋಜಿಸಿದ್ದ ಭಾರತದ ಅರ್ಥ ವ್ಯವಸ್ಥೆ ಕುರಿತ ಸಂವಾದದಲ್ಲಿ ಆರ್ಥಿಕ ತಜ್ಞ ವಿಶ್ವನಾಥ ಭಟ್ ಮಾತನಾಡಿದರು
ಯಾದಗಿರಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿಯಿಂದ ಭಾನುವಾರ ಆಯೋಜಿಸಿದ್ದ ಭಾರತದ ಅರ್ಥ ವ್ಯವಸ್ಥೆ ಕುರಿತ ಸಂವಾದದಲ್ಲಿ ಆರ್ಥಿಕ ತಜ್ಞ ವಿಶ್ವನಾಥ ಭಟ್ ಮಾತನಾಡಿದರು   

ಯಾದಗಿರಿ: ದೇಶದ ಡಿಜಿಟಲ್ ಕ್ಷೇತ್ರ ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಗತಿ ಕಾಣುತ್ತಿದೆ ಎಂದು ಆರ್ಥಿಕ ತಜ್ಞ ವಿಶ್ವನಾಥ ಭಟ್ ಅಭಿಪ್ರಾಯಪಟ್ಟರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿಯಿಂದ ಭಾನುವಾರ ಆಯೋಜಿಸಿದ್ದ ಭಾರದತ ಅರ್ಥ ವ್ಯವಸ್ಥೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ವರ್ತಕರು ಹಾಗೂ ದೇಶದ ಪ್ರಗತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಂತ ಅವರ ಮೇಲೆ ಅತಿಯಾದ ತೆರಿಗೆ ಹೇರಬಾರದು. ಒಂದು ಕಾಲಕ್ಕೆ ತೆರಿಗೆ ಕಟ್ಟುವಲ್ಲಿ 141 ಸ್ಥಾನದಲ್ಲಿದ್ದ ಭಾರತ ಇಂದು 63 ಸ್ಥಾನಕ್ಕೆ ಬಂದಿದೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ವರ್ತಕರಿಗೆ ಹೊರೆಯಾಗುತ್ತಿದ್ದ 2 ಸಾವಿರ ನಿಯಮಗಳನ್ನು ತೆಗೆದು ಹಾಕುವ ಮೂಲಕ ನೆರವಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ದೇಶವು ಐಟಿ ಕ್ಷೇತ್ರದಲ್ಲೂ ದೊಡ್ಡ ಕ್ರಾಂತಿಯನ್ನು ಮಾಡಿದೆ. ಭಾರತ ಜಾಗತಿಕವಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ವಿದೇಶಗಳ ನಾಯಕರು ಹೊಗಳುತ್ತಿದ್ದಾರೆ. ನಮ್ಮ ಯುವಕರಿಗೆ ಬೇಕಾದ ಕೌಶಲ ಆಧಾರಿತ ತರಬೇತಿ ನೀಡಲಾಗುತ್ತಿದೆ’ ಎಂದರು.

‘ಸತತ ಐದು ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಸಮಾಜವಾದದ ಸೋಗಿನಲ್ಲಿ ಸಮಾಜಕ್ಕೆ ಬಡತನವನ್ನು ಬಳುವಳಿಯಾಗಿ ನೀಡಿತ್ತು. ಕಪ್ಪು ಬಂಗಾರ ಎಂದೇ ಕರೆಯುವ 203 ಕಲ್ಲಿದ್ದಲು ಗಣಿಗಳನ್ನು ಸಿಕ್ಕಸಿಕ್ಕವರಿಗೆ ಹರಾಜು ಹಾಕಿತ್ತು. ಆದರೆ, 2014ರಲ್ಲಿ ದಿ.ಅರುಣ್‌ ಜೇಟ್ಲಿ ದೇಶದ ವಿತ್ತ ಸಚಿವರಾದ ಮೇಲೆ 65 ಕಲ್ಲಿದ್ದಲ್ಲಿನ ಗಣಿಗಳನ್ನು ಹರಾಜು ಹಾಕಿದ್ದರು. ಇದರಿಂದ ಬಂದ ಹಣ ಸಾವಿರಾರೂ ಕೋಟಿ ರೂಪಾಯಿಗಳು.‌ ಈ ಹಣ ಕೇಂದ್ರ ಸರ್ಕಾರಕ್ಕೆ ಹೋಗಲ್ಲ. ಕಲ್ಲಿದ್ದಲು ಗಣಿ ಇರುವ ರಾಜ್ಯಗಳಿಗೆ ಸಿಗುತ್ತದೆ’ ಎಂದರು.

ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಲಲಿತಾ ಅನಪುರ, ಬಾಬು ದೋಖಾ ಇದ್ದರು. ಗುರು ಕಾಮಾ ಸ್ವಾಗತಿಸಿದರು. ವೆಂಕಟರೆಡ್ಡಿ ಅಬ್ಬೆತುಮಕೂರು ನಿರೂಪಿಸಿದರೆ, ನಗರಸಭೆ ಸದಸ್ಯ ವಿಲಾಸ ಪಾಟೀಲ ವಂದಿಸಿದರು.

ಯಾದಗಿರಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿಯಿಂದ ಭಾನುವಾರ ಆಯೋಜಿಸಿದ್ದ ಭಾರತದ ಅರ್ಥ ವ್ಯವಸ್ಥೆ ಕುರಿತ ಸಂವಾದದಲ್ಲಿ ಭಾಗವಹಿಸಿದ್ದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.