ADVERTISEMENT

ಕೆಂಭಾವಿ: ಹೆಚ್ಚುತ್ತಿರುವ ಕೋವಿಡ್

​ಪ್ರಜಾವಾಣಿ ವಾರ್ತೆ
Published 6 ಮೇ 2021, 5:08 IST
Last Updated 6 ಮೇ 2021, 5:08 IST
covid data
covid data   

ಕೆಂಭಾವಿ: ಪಟ್ಟಣ ಸೇರಿದಂತೆ ವಲಯದಲ್ಲಿ ಒಂದು ವಾರದಿಂದ ಕೊರೊನೊ ಸೋಂಕು ಹೆಚ್ಚು ಹರಡುತ್ತಿದ್ದು, ಪ್ರತಿದಿನ 30ರಿಂದ 60 ಕೋವಿಡ್ ಪ್ರಕರಣ ದಾಖ ಲಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಲಾಕ್‌ಡೌನ್ ಹೇರಿದ್ದರೂ ಜನರ ಓಡಾಟಕ್ಕೆ ನಿಯಂತ್ರಣ ಬೀಳುತ್ತಿಲ್ಲ. ಇದು ಸೋಂಕು ಹೆಚ್ಚಳಕ್ಕೆ ಕಾರಣ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾತು.ಪಟ್ಟಣದಲ್ಲಿ ದಿನಕ್ಕೆ 15 ರಿಂದ 20 ಪ್ರಕರಣಗಳು ವರದಿಯಾಗುತ್ತಿವೆ. ಯುಕ್ತಾಪುರ, ಸಾಯಿನಗರ ಕ್ಯಾಂಪ್‌ನಲ್ಲಿ ಕಳೆದ ಎರಡು ದಿನಗಳಿಂದ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಯಾಳಗಿ ಮತ್ತು ಯಾಳಗಿ ತಾಂಡಾಗಳಲ್ಲಿಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟಾರೆ ವಲಯದಲ್ಲಿ ಕೊರೊನಾ ನಿತ್ಯ ತನ್ನ ಕಬಂಧಬಾಹು ಚಾಚುತ್ತಿದ್ದು, ಜನರು ಆತಂಕ ಪಡುವಂತಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ವಿಶೇಷ ಕ್ರಮ ಕೈಗೊಂಡು ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ADVERTISEMENT

ಪುರಸಭೆ ವ್ಯಾಪ್ತಿಯ ಸಾಯಿನಗರ ಕ್ಯಾಂಪ್ ಬಡಾವಣೆಯಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕೆಯಾಗಿ ಸ್ಯಾನಿಟೈಜರ್ ಸಿಂಪಡಣೆ ಮಾಡುವಂತೆ ದೂರವಾಣಿ ಕರೆ ಮೂಲಕ ಹಲವರು ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಬಡಾವಣೆ ನಾಗರಿಕರು ಆರೋಪಿಸಿದ್ದಾರೆ.

ಬಡಾವಣೆ ನಿವಾಸಿಗಳಲ್ಲಿ ಗೊಂದಲ: ಪುರಸಭೆ ವ್ಯಾಪ್ತಿಯ ಬಡಾವಣೆಯಾಗಿರುವ ಸಾಯಿನಗರ ಕ್ಯಾಂಪ್ ಬಡಾವಣೆಯನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿಸದೇ ಬಡಾವಣೆಯಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಯಕ್ತಾಪುರ ಪ್ರಾಥಮಿಕ ಕೇಂದ್ರದ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದರಿಂದ ಕೊರೊನಾ ಮಾಹಿತಿ, ತಪಾಸಣಾ ವರದಿಗಳ ಮಾಹಿತಿಯನ್ನು ಪಡೆಯಲು ಗೊಂದಲ ಸೃಷ್ಟಿಯಾಗುತ್ತಿದ್ದು, ಕೂಡಲೇ ಆರೋಗ್ಯ ಇಲಾಖೆ ಗಮನ ಹರಿಸಿ ಪುರಸಭೆ ವ್ಯಾಪ್ತಿಗೆ ಒಳಪಡುವ ಸಾಯಿನಗರ ಕ್ಯಾಂಪ್ ಬಡಾವಣೆಯನ್ನು (ವಾರ್ಡ್ ನಂ.19) ಕೆಂಭಾವಿಯ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಬಡಾವಣೆ ನಿವಾಸಿಗಳು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಸ್ಯಾನಿಟೈಸೆಷನ್
ಕೆಂಭಾವಿ
: ಕೊರೊನಾ ಸೋಂಕು ಹರಡುತ್ತಿರುವ ಕಾರಣ ಪುರಸಭೆ ವತಿಯಿಂದ ಮಂಗಳವಾರದಿಂದ 23 ವಾರ್ಡ್‌ಗಳಲ್ಲಿ ಸ್ಯಾನಿಟೈಜೆಷನ್ ಮಾಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಬಾಗ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಗತ್ಯ ಸೇವಾ ವಸ್ತುಗಳ ಅಂಗಡಿಗಳನ್ನು ಬಿಟ್ಟು ಬೇರೆ ಯಾವದೇ ಅಂಗಡಿಗಳನ್ನು ತೆರೆಯಕೂಡದು. ಒಂದು ವೇಳೆ ತೆರೆದರೆ ದಂಡ ವಿಧಿಸಲಾಗವುದು. ಅಂತಹ ಅಂಗಡಿಗಳನ್ನು ಸೀಜ್ ಮಾಡಿ ಪ್ರಕರಣದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪುರಸಭೆ ಸಿಬ್ಬಂದಿ ಪ್ರಕಾಶ ಹುಜರತಿ, ಮಲ್ಲಣ್ಣ, ರಶೀದ್, ನಬಿ, ಹಣಮಂತ ಹಾಗೂ ರಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.