ADVERTISEMENT

10 ಜನರಿಗೆ ಪರಿಹಾರ ಬಿಡುಗಡೆ

ಕೋವಿಡ್‌ ಪರಿಹಾರ ವಿತರಣೆ: ಶಾಸಕ ರಾಜೂಗೌಡ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 5:22 IST
Last Updated 18 ಡಿಸೆಂಬರ್ 2021, 5:22 IST
ಕೊರೊನಾದಿಂದ ಮೃತಪಟ್ಟ ಕುಟುಂಬದವರಿಗೆ ಸುರಪುರದಲ್ಲಿ ಶುಕ್ರವಾರ ಶಾಸಕ ರಾಜೂಗೌಡ ಪರಿಹಾರ ಚೆಕ್ ವಿತರಿಸಿದರು
ಕೊರೊನಾದಿಂದ ಮೃತಪಟ್ಟ ಕುಟುಂಬದವರಿಗೆ ಸುರಪುರದಲ್ಲಿ ಶುಕ್ರವಾರ ಶಾಸಕ ರಾಜೂಗೌಡ ಪರಿಹಾರ ಚೆಕ್ ವಿತರಿಸಿದರು   

ಸುರಪುರ: ‘ತಾಲ್ಲೂಕಿನಲ್ಲಿ ಕೋವಿಡ್‍ನಿಂದ 67 ಜನ ಮೃತಪಟ್ಟಿದ್ದಾರೆ. ಸುರಪುರದ 33 ಜನರಿಗೆ ಪರಿಹಾರ ಮಂಜೂರಿಯಾಗಿದೆ. ಅದರಲ್ಲಿ ಮೊದಲ ಹಂತವಾಗಿ ತಲಾ ₹1 ಲಕ್ಷದಂತೆ 10 ಜನರಿಗೆ ಪರಿಹಾರ ಬಿಡುಗಡೆಯಾಗಿದೆ. ಇನ್ನೆರಡು ದಿನಗಳಲ್ಲಿ ಎರಡನೇ ಹಂತದ ಅನುದಾನ ಬಿಡುಗಡೆಯಾಗಲಿದೆ’ ಎಂದು ಶಾಸಕ ರಾಜೂಗೌಡ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಕೋವಿಡ್ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು,‘ಕೋವಿಡ್‌ನಿಂದ ಹುಣಸಗಿ ಮತ್ತು ಕೆಂಭಾವಿ ವಲಯದಲ್ಲಿ 27 ಜನ ಮೃತಪಟ್ಟದ್ದಾರೆ. ಈ ಪೈಕಿ ಮೊದಲ ಹಂತವಾಗಿ 10 ಜನರಿಗೆ ಪರಿಹಾರ ಮಂಜೂರಿಯಾಗಿದೆ. ಸದ್ಯ ಇಬ್ಬರಿಗೆ ಅನುದಾನ ಬಿಡುಗಡೆಯಾಗಿದೆ. ಇನ್ನೆರಡು ದಿನಗಳಲ್ಲಿ ಎಲ್ಲರಿಗೂ ಪರಿಹಾರ ಬಿಡುಗಡೆಯಾಗಲಿದೆ’ ಎಂದರು.

‘ಕೋವಿಡ್‍ನಿಂದ ಮೃತಪಟ್ಟವರ ಮಕ್ಕಳ ಮಾಹಿತಿ ಪಡೆದು ಮುಂಬರುವ ದಿನಗಳಲ್ಲಿ ಅವರಿಗೆ ಶಿಕ್ಷಣ ಮತ್ತು ಪುನರ್ ವಸತಿ ವ್ಯವಸ್ಥೆ ಕಲ್ಪಿಸುವ ಕುರಿತು ಸರ್ಕಾರದ ಗಮನಕ್ಕೆ ತರುತ್ತೇನೆ. ಪಾಲಕರನ್ನು ಕಳೆದುಕೊಂಡು ಅನಾಥ ಪ್ರಜ್ಞೆಯಲ್ಲಿರುವ ಮಕ್ಕಳ ದುಃಖ ನಿವಾರಿಸಲು ನೆರವಾಗಲಾಗುವುದು’ ಎಂದು ತಿಳಿಸಿದರು.

ADVERTISEMENT

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಶಿರಸ್ತೇದಾರ ಸೋಮನಾಥ ದೊರೆ, ಮುಖಂಡರಾದ ಬಿ.ಎಂ. ಅಳ್ಳಿಕೋಟಿ, ಭೀಮಾಶಂಕರ ಬಿಲ್ಲವ್, ದೇವರಾಜ ನಾಯಕ, ಹೊನ್ನಪ್ಪ ತಳವಾರ ಇತರರಿದ್ದರು.

‘ಎಲ್ಲರಿಗೂ ಪರಿಹಾರ’

ಹುಣಸಗಿ: ‘ಕೋವಿಡ್‌ನಿಂದ ಬಡ ಕುಟುಂಬಗಳು ತೊಂದರೆಗೆ ಸಿಲುಕಿವೆ. ಸರ್ಕಾರ ಅವರಿಗೆ ನೆರವು ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ’ ಎಂದು ಶಾಸಕ ರಾಜೂಗೌಡ ಹೇಳಿದರು.

ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬ ಸದಸ್ಯರಿಗೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಒಂದು ಲಕ್ಷದ ಚೆಕ್ ವಿತರಿಸಿ ಮಾತನಾಡಿ,‘ಸಾಂಕ್ರಾಮಿಕ ರೋಗದ ಹಾವಳಿ ಇನ್ನೂ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು’ ಎಂದು ಹೇಳಿದರು.

‘ನಮ್ಮ ಕ್ಷೇತ್ರದಲ್ಲಿ ಕೋವಿಡ್‌ನಿಂದ ಸುಮಾರು 67 ಜನ ಮೃತಪಟ್ಟಿದ್ದಾರೆ. ಎಲ್ಲ ಕುಟುಂಬಗಳಿಗೂ ಸರ್ಕಾರಿ ಸೌಲಭ್ಯ ನೀಡಲಾಗುವುದು’ ಎಂದು ಹೇಳಿದರು.

ತಹಶೀಲ್ದಾರ್ ಅಶೋಕ ಸುರಪುರಕರ್, ಉಪ ತಹಶೀಲ್ದಾರ್ ಬಸವರಾಜ ಬಿರಾದಾರ, ಕಂದಾಯ ನಿರೀಕ್ಷಕ ಪ್ರಕಾಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.