ADVERTISEMENT

ಯಾದಗಿರಿ: 1.50 ಲಕ್ಷ ಜನರಿಗೆ ಕೋವಿಡ್‌ ಲಸಿಕೆ

ಜಿಲ್ಲೆಯಲ್ಲಿ 3 ಲಕ್ಷ ಜನರಿಗೆ ಚುಚ್ಚುಮದ್ದು ನೀಡುವ ಗುರಿ; ಸಾರ್ವಜನಿಕರಲ್ಲಿ ಹೆಚ್ಚಿದ ಜಾಗೃತಿ

ಬಿ.ಜಿ.ಪ್ರವೀಣಕುಮಾರ
Published 9 ಮೇ 2021, 3:22 IST
Last Updated 9 ಮೇ 2021, 3:22 IST
ಯಾದಗಿರಿಯ ಲೀಡ್ ಬ್ಯಾಂಕ್ ಕಚೇರಿಯಲ್ಲಿ ಬ್ಯಾಂಕ್‌ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡುತ್ತಿರುವುದು (ಸಂಗ್ರಹ ಚಿತ್ರ)
ಯಾದಗಿರಿಯ ಲೀಡ್ ಬ್ಯಾಂಕ್ ಕಚೇರಿಯಲ್ಲಿ ಬ್ಯಾಂಕ್‌ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡುತ್ತಿರುವುದು (ಸಂಗ್ರಹ ಚಿತ್ರ)   

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಇದೇ ಜನವರಿ 16ರಿಂದ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ 1.50 ಲಕ್ಷ ಜನರು ಲಸಿಕೆ ಪಡೆದಿದ್ದಾರೆ.

ಜನವರಿ 16ರಂದು ಜಿಲ್ಲೆಯ ಹೊಸ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಐದು ಕಡೆ ಕೋ–ವ್ಯಾಕ್ಸಿನ್ ಲಸಿಕೆಗೆ ಚಾಲನೆ ನೀಡಲಾಯಿತು. ಅಂದಿನಿಂದ ಇಲ್ಲಿಯವರೆಗೆ ಲಸಿಕೆ ಪಡೆಯುವವರ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿದೆ.

ಯಾದಗಿರಿ ಜಿಲ್ಲಾಸ್ಪತ್ರೆ, ಶಹಾಪುರ, ಸುರಪುರ ತಾಲ್ಲೂಕು ಆಸ್ಪತ್ರೆ ಮತ್ತು ನಗರ ಆರೋಗ್ಯ ಕೇಂದ್ರ, ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊರೊನಾ ಸೇನಾನಿಗಳಿಗೆ ನೀಡಲಾಗಿತ್ತು.

ADVERTISEMENT

‘ಮೊದಲಿಗೆ ಲಸಿಕೆ ಪಡೆಯಲು ಯಾರೂ ಮುಂದೆ ಬರುತ್ತಿರಲಿಲ್ಲ. ಆಶಾ ಮತ್ತು ಆರೋಗ್ಯ ಕಾರ್ಯಕರ್ತರಿಗೆ ನಿಂದಿಸಿರುವ ಘಟನೆಯೂ ನಡೆದಿದೆ. ಆದರೂ ಈಗ ಹೆಚ್ಚಿನ ಸಂಖ್ಯೆಯಲ್ಲಿ ಚುಚ್ಚುಮದ್ದು ಪಡೆಯಲು ಜಿಲ್ಲೆಯ ಸಾರ್ವಜನಿಕರು ಮುಂದೆ ಬರುತ್ತಿದ್ದಾರೆ. ಇದರಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲು ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಪಾಟೀಲ.

‘ಕೋವಾಕ್ಸಿನ್‌ ಮತ್ತು ಕೋವಿಶಿಲ್ಡ್‌ ಲಸಿಕೆಗಳನ್ನು ಹಾಕಲಾಗುತ್ತಿದೆ. ಜನರು ಈಗ ಸ್ವಯಂ ಪ್ರೇರಣೆಯಿಂದ ಚುಚ್ಚುಮದ್ದು ಪಡೆಯಲು ಧಾವಿಸುತ್ತಿದ್ದಾರೆ. ಜಿಲ್ಲೆಯಲ್ಲಿ 3 ಲಕ್ಷ ಲಸಿಕೆ ನೀಡುವ ಗುರಿ ಇದೆ. ಮೊದಲಿಗೆ ನಿರಾಕರಿಸಿದವರೆ ಈಗ ಚುಚ್ಚುಮದ್ದು ಪಡೆಯುತ್ತಿದ್ದಾರೆ. ಹೀಗಾಗಿ ಇದು ಒಳ್ಳೆಯ ಬೆಳೆವಣಿಗೆ. ಆದರೆ, ಲಸಿಕೆ ಕೊರತೆ ಕಾಡುತ್ತಿರುವುದರಿಂದ ಹಲವರುಕರೆಮಾಡಿ ಕೇಳುತ್ತಿದ್ದಾರೆ’ ಎನ್ನುತ್ತಾರೆ ಅವರು.

ಪ್ರಥಮ ಹಂತದಲ್ಲಿ ಲಸಿಕೆ ನೀಡಲು 6,438 ಕೋವಿಡ್ ಸೇನಾನಿಗಳ ಹೆಸರು ಆನ್‌ಲೈನ್‌ ಮೂಲಕ ನೋಂದಾ ಯಿಸಿಕೊಂಡಿದ್ದರು. ಕೆಲವರು ಭಯದಿಂದ ಹಾಕಿಸಿಕೊಂಡಿರಲಿಲ್ಲ. ಜಿಲ್ಲಾಸ್ಪತ್ರೆ ಸಹಾಯಕ ದರ್ಜೆ–2 (ಗ್ರೂಪ್‌ ‘ಡಿ’) ನೌಕರ ಅಶೋಕ ಅಗ್ನಿ ಮೊದಲ ಲಸಿಕೆ ಪಡೆದಿದ್ದರು.

ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ?: ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಪ್ರಥಮ ಹಂತದಲ್ಲಿ 5,523 ಡೋಸ್‌ ಪಡೆದಿದ್ದಾರೆ. 3,474 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ.

ಫ್ರಂಟ್‌ಲೈನ್‌ ವರ್ಕರ್‌ಗಳಾದ ಪೊಲೀಸ್‌, ಹೋಂಗಾರ್ಡ್‌, ಕಂದಾಯ, ಅಗ್ನಿಶಾಮಕ, ನಗರಸಭೆ ಸಿಬ್ಬಂದಿ ಸೇರಿದಂತೆ 5, 529 ಮಂದಿ ಪ್ರಥಮ ಹಂತದ ಡೋಸ್‌ ಪಡೆದಿದ್ದಾರೆ. ಎರಡನೇ ಹಂತದಲ್ಲಿ 1,851 ಮಂದಿ ಲಸಿಕೆ ಪಡೆದಿದ್ದಾರೆ.

ಸ್ಥಳದಲ್ಲೇ ಲಸಿಕೆ ಪಡೆದವರು: ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು. ಆ ನಂತರ 80,60 ವರ್ಷ ಮೇಲ್ಪಟ್ಟವರಿಗೆ ಚುಚ್ಚುಮದ್ದು ನೀಡಲಾಗಿದೆ. ಇದಾದ ನಂತರ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿತ್ತು. ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಚುಚ್ಚುಮದ್ದು ನೀಡುವ ಪ್ರಕ್ರಿಯೆ ಚಾಲನೆಯಲ್ಲಿತ್ತು. ಇದಾದ ಕೆಲ ದಿನಗಳ ನಂತರ ಸ್ಥಳದಲ್ಲೇ ಹೆಸರು ನೋಂದಾಯಿ ಸಿಕೊಂಡರಿಗೆ ಲಸಿಕೆ ನೀಡಲಾಗಿದೆ.

ಆನ್‌ಲೈನ್‌ ಮೂಲಕ 250 ಹಿರಿಯ ನಾಗರಿಕರು ಹೆಸರು ನೋಂದಾಯಿಸಿ ಲಸಿಕೆ ಪಡೆದಿದ್ದಾರೆ. ಮೊದಲ ಹಂತದಲ್ಲಿ 1,12,789 ನಾಗರಿಕರು ಸ್ಥಳದಲ್ಲೇ ಹೆಸರು ನೋಂದಾಯಿಸಿ ಚುಚ್ಚುಮದ್ದು ಪಡೆದಿದ್ದಾರೆ. ಎರಡನೇ ಹಂತದಲ್ಲಿ 88 ಜನ ಆನ್‌ಲೈನ್‌ ಮೂಲಕ ನೋಂದಾಯಿಸಿ ಲಸಿಕೆ ಪಡೆದಿದ್ದಾರೆ. 21,166 ಎರಡನೇ ಹಂತದಲ್ಲಿ ಚುಚ್ಚುಮದ್ದು ಪಡೆದಿದ್ದಾರೆ.

***

ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಪಡೆಯಲು ಜನರು ಮುಂದೆ ಬರುತ್ತಿದ್ದು, ಚುಚ್ಚುಮದ್ದು ಪ್ರಭಾವ ತಿಳಿದುಕೊಂಡಿದ್ದಾರೆ. ಮೊದಲು ಲಸಿಕೆ ಪಡೆಯಲು ಜನರು ಹಿಂಜರೆಯತ್ತಿದ್ದರು. ಹಲವಾರು ಜನ ನಿರಾಕರಿಸುತ್ತಿದ್ದರು
ಡಾ.ಇಂದುಮತಿ ಪಾಟೀಲ, ಡಿಎಚ್‌ಒ
***

ಜನರಲ್ಲಿ ಕೋವಿಡ್‌ ಚುಚ್ಚುಮದ್ದು ಬಗ್ಗೆ ತಿಳಿವಳಿಕೆ ಮೂಡಿಸಿ ಲಸಿಕೆ ಹಾಕಬೇಕು. ಆಸ್ಪತ್ರೆಗಳಲ್ಲಿ ಬೆಡ್‌ ಕೊರತೆಯಾಗದಂತೆ ಜಿಲ್ಲಾಡಳಿತ, ಸಂಬಂಧಿಸಿದವರು ನೋಡಿಕೊಳ್ಳಬೇಕು
ಮಲ್ಲಿಕಾರ್ಜುನ ಜಲ್ಲಪ್ಪನೊರ, ಅಧ್ಯಕ್ಷ, ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.